ನೀರಾವರಿ ಯೋಜನೆ ಜಾರಿಗೆ ಸರ್ಕಾರ ಬದ್ಧ

KannadaprabhaNewsNetwork |  
Published : Sep 29, 2026, 01:45 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ಖಂಡೇನಹಳ್ಳಿಯಲ್ಲಿ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಪ್ರವಾಸ ನಡೆಸಿ ಪಕ್ಷದ ಪರ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಸಮಗ್ರ ಅಭಿವೃದ್ಧಿಯ ಜೊತೆಗೆ ನೀರಾವರಿ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಹೇಳಿದರು.

ತಾಲೂಕಿನ ಖಂಡೇನಹಳ್ಳಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರು-ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನ ಗಡಿ ಗ್ರಾಮಗಳು ನೀರಾವರಿಯಿಂದ ವಂಚಿತವಾಗಿದ್ದು ನೀರಾವರಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲಿಸಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಧರ್ಮಪುರ ಹೋಬಳಿಯ ರೈತರ ನೀರಿನ ಬೇಡಿಕೆಯ ಬಗ್ಗೆ ಅರಿವಿದೆ. ಶೀಘ್ರ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದು ಇಲ್ಲಿನ ರೈತರ ಜತೆಗೂಡಿ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ನೀರಾವರಿ ಸಚಿವ ಚಲುವರಾಯಸ್ವಾಮಿ ಅವರನ್ನು ಭೇಟಿ ಮಾಡಿ ಜಲ ಸಂಕಷ್ಟದ ಕುರಿತು ಮನವರಿಕೆ ಮಾಡಲಾಗುವುದು. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಶಕ್ತಿ ಮೀರಿ ಪ್ರಯತ್ನಿಸಲಾಗುವುದು. ಚುನಾವಣೆ ಕಾರಣಕ್ಕೆ ಸುಳ್ಳು ಹೇಳಿ ಹೋದರೆ ಜನ ಮೆಚ್ಚುವುದಿಲ್ಲ. ನುಡಿದಂತೆ ನಡೆಯುವುದು ನನ್ನ ಕಾಯಕ ಎಂದರು.

ಈ ಸಂದರ್ಭದಲ್ಲಿ ಜಿಪಂ ಕೆಡಿಪಿ ಸದಸ್ಯ ತಿಮ್ಮಣ್ಣ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರವಣಗೆರೆ ಗೌಡಪ್ಪ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಕ್‍ಮಂಜುನಾಥ್ , ಮಾಜಿ ಶಾಸಕ ರಾಜು, ಕಾಂಗ್ರೆಸ್ ಯುವ ಮುಖಂಡ ಸುಹಾಸ್ ಸುಧಾಕರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ಮುಖಂಡರಾದ ವೆಂಕಟೇಶ್, ಈಶ್ವರಪ್ಪ, ಎಸ್.ಕೆ.ಶಿವಮೂರ್ತಿ, ಜ್ಯೋತಿ ಹನುಮಂತರಾಯ, ಕಾಂಚನಾ, ಡಿ.ಚಿದಾನಂದ್, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಶ್ರವಣಗೆರೆ ಚಂದ್ರು, ಮಧು, ನಿವೃತ್ತ ಯೋಧ ಶಿವಣ್ಣ, ಗುಂಡಪ್ಪ, ಕೃಷ್ಣಮೂರ್ತಿ, ಜಿ.ತಿಪ್ಪೇಸ್ವಾಮಿ, ನಾಗೇಂದ್ರಪ್ಪ, ಕಿರಣ್ ಮುಂತಾದವರು ಹಾಜರಿದ್ದರು.

*ಪೌರಕಾರ್ಮಿಕರೊಂದಿಗೆ ಸಚಿವ ಬಾಲಕೃಷ್ಣ ಮಾತುಕತೆ:

ಹಿರಿಯೂರು ತಾಲೂಕಿನ ಹಳ್ಳಿಗಳಿಗೆ ತೆರಳುವ ಮುನ್ನ ಸೋಮವಾರ ಬೆಳಗಿನ 5:50ಕ್ಕೆ ನಗರಸಭೆಗೆ ಆಗಮಿಸಿದ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣರವರು ಪೌರಕಾರ್ಮಿಕರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಪೌರ ಕಾರ್ಮಿಕರ ಸಮಸ್ಯೆಗಳು ಹಾಗೂ ಅಗತ್ಯತೆಗಳ ಮಾಹಿತಿ ಪಡೆದರು.

ನಂತರ ನಗರದ ತರಕಾರಿ ಮಾರುಕಟ್ಟೆ ಹಾಗೂ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಸ್ವಚ್ಛತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಹಾಗೂ ಮೂಲಸೌಕರ್ಯ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರಿಗೆ ಅಗತ್ಯ ನಾಗರಿಕ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಪೌರಕಾರ್ಮಿಕರು ನಗರ ಸ್ವಚ್ಛತೆಯ ಪ್ರಮುಖ ಭಾಗವಾಗಿದ್ದು ಅವರ ಸಮಸ್ಯೆಗಳನ್ನು ಆಲಿಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು. ವಾರ್ಡ್‌ಗಳಲ್ಲಿ ಮೂಲಸೌಕರ್ಯಗಳ ಸ್ಥಿತಿಗತಿಗಳನ್ನು ನಿರಂತರವಾಗಿ ಪರಿಶೀಲಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.

ಆನಂತರ ನಗರದ ಗಾಂಧಿ ವೃತ್ತದಲ್ಲಿರುವ ಅಂಗಡಿಗಳು ಹಾಗೂ ತಳ್ಳುಗಾಡಿ ವ್ಯಾಪಾರಿಗಳಿಂದ ಸಾರ್ವಜನಿಕರಿಗೆ ಯಾವುದೇ ಅನಾಹುತ ಆಗಬಾರದು ಎಂದು ಎಚ್ಚರಿಸಿದರು.ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಭೂತ ನಾಗರಿಕ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಬೆಳಗಿನ ಕೆಲಸ ಆರಂಭಿಸುವ ಮುನ್ನ ಪೌರ ಕಾರ್ಮಿಕರು ಮಾಡುವ ಪ್ರಾರ್ಥನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಇದು ರಾಜ್ಯಕ್ಕೆ ಮಾದರಿಯಾದುದು.ಬೆಳಗಿನ ಪ್ರಾರ್ಥನೆಯನ್ನು ರಾಜ್ಯಕ್ಕೆ ವಿಸ್ತರಿಸುವ ಆಶಯ ವ್ಯಕ್ತಪಡಿಸಿದರು. ಪೌರ ಕಾರ್ಮಿಕರ ಬೆಳಗಿನ ತಿಂಡಿಗೆ ನೀಡಲಾಗುತ್ತಿದ್ದ 35 ರುಗಳನ್ನು 50 ರು ಮಾಡಲು ವಿನಂತಿಸಿದ್ದೆ. ನಮ್ಮ ಮುಖ್ಯಮಂತ್ರಿಗಳು ಪೌರ ಕಾರ್ಮಿಕರ ಮೇಲಿನ ಪ್ರೀತಿಯಿಂದ ಅದನ್ನು 70 ರುಗೆ ಹೆಚ್ಚಿಸುವ ಭರವಸೆ ನೀಡಿದ್ದಾರೆ ಎಂದರು.

ಪೌರಕಾರ್ಮಿಕರ ಮನೆ ನಿರ್ಮಾಣಕ್ಕೆ ಜಾಗ ಮೀಸಲಿಡಿ ಎಂದು ಸ್ಥಳದಲ್ಲೇ ತಹಸೀಲ್ದಾರ್ ರವರಿಗೆ ಕರೆ ಮಾಡಿ ಆದೇಶ ನೀಡಿದರು.

ಈ ಸಂದರ್ಭದಲ್ಲಿ ಪೌರಾಯುಕ್ತ ಎ ವಾಸಿಂ, ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ.ಟಿ.ಸುನೀಲ್‌ ಕುಮಾರ್‌, ಸಹಾಯಕ ಅಭಿಯಂತರ ಶ್ರೀರಂಗ ಎಂಎಸ್‌, ಹಿರಿಯ ಆರೋಗ್ಯ ನೀರಿಕ್ಷಕರಾದ ಸುನೀಲ್‌ ಕುಮಾರ್‌, ಅಶೋಕ್ ಕುಮಾರ್‌, ಕಿರಿಯ ಅಭಿಯಂತರರಾದ ಪ್ರಸನ್ನ ಕುಮಾರ್‌, ದೀಪಾ, ಕಿರಿಯ ಆರೋಗ್ಯ ನೀರಿಕ್ಷಕ ಮಹಾಲಿಂಗರಾಜ್‌, ಪೌರಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಹನುಮಂತರಾಜ್‌ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆರೆಗಳ ಸಂರಕ್ಷಣೆ, ಅಭಿವೃದ್ಧಿಗೆ ಅಗತ್ಯ ಕ್ರಮ
ಔಷಧ ವ್ಯಾಪಾರಿಗಳ, ವಿತರಕರ ಅಭಿವೃದ್ಧಿಗೆ ಸಂಸ್ಥೆ ಸದಾ ಬೆನ್ನುಲುಬಾಗಿದೆ: ಬಿ.ಲೋಕೇಶ್