ಕೆರೆಗಳ ಸಂರಕ್ಷಣೆ, ಅಭಿವೃದ್ಧಿಗೆ ಅಗತ್ಯ ಕ್ರಮ

KannadaprabhaNewsNetwork |  
Published : Sep 29, 2026, 01:45 AM IST
ಪೋಟೊ೨೯ಸಿಪಿಟಿ೧: ನಗರದ ಶೆಟ್ಟಿಹಳ್ಳಿ ಕೆರೆಗೆ ಭೇಟಿ ನೀಡಿದ ಲೋಕಾಯುಕ್ತ ಎಸ್.ಪಿ.ಸ್ನೇಹಾ ಪರಿಶೀಲನೆ  ನಡೆಸಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ಈ ಹಿಂದೆ ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ತಾಲೂಕಿನ ವಿವಿಧ ಕೆರೆಗಳಿಗೆ ಭೇಟಿ ನೀಡಿ, ಅವುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್‌ಪಿ ಡಾ. ಸ್ನೇಹಾ ತಾಲೂಕಿನ ಐದು ಕೆರೆಗಳಿಗೆ ಭೇಟಿ ನೀಡಿ ಹಾಗೂ ಕೆರೆಗಳ ಪ್ರಸ್ತುತ ಸ್ಥಿತಿ ಹಾಗೂ ಪ್ರಗತಿ ಪರಿಶೀಲನೆ ನಡೆಸಿದರು

ಚನ್ನಪಟ್ಟಣ: ಈ ಹಿಂದೆ ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ತಾಲೂಕಿನ ವಿವಿಧ ಕೆರೆಗಳಿಗೆ ಭೇಟಿ ನೀಡಿ, ಅವುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್‌ಪಿ ಡಾ. ಸ್ನೇಹಾ ತಾಲೂಕಿನ ಐದು ಕೆರೆಗಳಿಗೆ ಭೇಟಿ ನೀಡಿ ಹಾಗೂ ಕೆರೆಗಳ ಪ್ರಸ್ತುತ ಸ್ಥಿತಿ ಹಾಗೂ ಪ್ರಗತಿ ಪರಿಶೀಲನೆ ನಡೆಸಿದರು.ನಗರದ ಶೆಟ್ಟಿಹಳ್ಳಿ ಕೆರೆ, ಕೊಡ್ಲೂರು ಕೆರೆ, ಎಸ್.ಎಂ.ಹಳ್ಳಿ, ಹೊಡಿಕೆ ಹೊಸಹಳ್ಳಿ ಹಾಗೂ ರಾಮಮ್ಮನ ಕೆರೆಗಳಿಗೆ ಭೇಟಿ ನೀಡಿದ ಅವರು, ಈ ಹಿಂದೆ ನೀಡಲಾಗಿದ್ದ ಸೂಚನೆಗಳ ಅನುಷ್ಠಾನ ಎಷ್ಟರ ಮಟ್ಟಿಗೆ ಆಗಿದೆ ಎಂದು ಪರಿಶೀಲಿಸಿ, ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕಾಮಗಾರಿಗಳು, ಸ್ವಚ್ಛತಾ ಕಾರ್ಯಗಳು, ನೀರಿನ ಸಂರಕ್ಷಣೆ, ತ್ಯಾಜ್ಯ ವಿಲೇವಾರಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಒತ್ತುವರಿ ತೆರವು ಪರಿಶೀಲನೆ:

ಕೆರೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳು ಅಥವಾ ಇತರೆ ಒತ್ತುವರಿ, ಹಿಂದೆ ಗುರುತಿಸಲಾಗಿದ್ದ ಒತ್ತುವರಿಗಳ ತೆರವು ಕಾರ್ಯಚರಣೆಗಳನ್ನು ಪರಿಶೀಲಿಸಿ, ತೆರವಿನ ಬಳಿಕ ಮತ್ತೆ ಒತ್ತುವರಿ ಆಗದಂತೆ ಕ್ರಮ ವಹಿಸಬೇಕು. ಕೆರೆಗಳ ಮೂಲ ಸ್ವರೂಪ ಹಾಗೂ ಜಲಮೂಲಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.

ಕೆರೆಗಳ ಸುತ್ತಮುತ್ತ ಕಸ:

ಕೆರೆಗಳ ಸುತ್ತಮುತ್ತ ಹಾಗೂ ನಗರದ ಹಲವಡೆ ಕಸ ಹಾಕಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಎಸ್ಪಿ, ಕೆರೆಗೆ ಕಸ ಹಾಕದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಫಲಕಗಳನ್ನೂ ಅಳವಡಿಸಲಾಗಿದೆ. ಆದರೂ ಕೆಲವರು ಕೆರೆ ಪ್ರದೇಶದಲ್ಲಿ ಕಸ ಹಾಕುತ್ತಿರುವುದು ಪರಿಶೀಲನೆ ವೇಳೆ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಸಿಸಿಟಿವಿ ಅಳವಡಿಕೆ ಹಾಗೂ ಜಾಗೃತಿ ಫಲಕಗಳನ್ನು ಹಾಕಿರುವುದರಿಂದ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ. ನಿಯಮ ಉಲ್ಲಂಘಿಸಿ ಕೆರೆಗೆ ಕಸ ಹಾಕುವವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು. ಕೆರೆಗಳ ಸ್ವಚ್ಛತೆ ಮತ್ತು ಸಂರಕ್ಷಣೆಯ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು. ಕೆರೆ ಹಾಕುವ ನಾಗರಿಕರಲ್ಲಿ ಜಾಗೃತಿ ಮೂಡಸಬೇಕು ಎಂದು ಪೌರಾಯುಕ್ತರಿಗೆ ಸೂಚನೆ ನೀಡಿದರು.

ಸಿಸಿ ಕ್ಯಾಮೆರಾ ವಿವರ:

ನಗರದ ಹಲವೆಡೆ ಕಸಹಾಕದಂತೆ ತಡೆಯಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅದರೂ, ಅಲ್ಲಿ ಕಸ ಹಾಕುವುದು ನಿಂತಿಲ್ಲ. ನಗರದಲ್ಲಿ ಎಷ್ಟು ಕಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ, ಸಿಸಿ ಕ್ಯಾಮೆರಾ ಆಧರಿಸಿ ಎಷ್ಟು ಪ್ರಕರಣ ದಾಖಲಿಸಲಾಗಿದೆ ಎಂಬ ವಿವರ ನೀಡಲು ತಿಳಿಸಿದರು.

ಕೊಳಚೆ ನೀರು ಹರಿಯದಂತೆ ಕ್ರಮ:

ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಹೊರಬರುವ ಕೊಳಚೆ ನೀರು ಕೆರೆಗಳಿಗೆ ಸೇರುತ್ತಿದೆಯೇ ಎಂದೂ ಅಧಿಕಾರಿಗಳಿಂದ ಮಾಹಿತಿ ಪಡೆದು, ಕೆರೆಗೆ ಕಲುಷಿತ ನೀರು ಸೇರುವುದರಿಂದ ಜಲಮೂಲದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಂತಹ ನೀರು ಕೆರೆಗೆ ಹರಿಯದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದರು.

ಕೆರೆಗಳ ಅಭಿವೃದ್ಧಿಗೆ ಹಿಂದೆ ನೀಡಿದ್ದ ಸೂಚನೆಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿವೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸ್ಥಳ ಪರಿಶೀಲನೆ ವೇಳೆ ಕಂಡುಬಂದಿರುವ ಲೋಪಗಳು ಹಾಗೂ ಸಮಸ್ಯೆಗಳನ್ನು ವರದಿಯಲ್ಲಿ ದಾಖಲಿಸಲಾಗುವುದು. ಮುಂದಿನ ದಿನಗಳಲ್ಲಿ ಮತ್ತೆ ಭೇಟಿ ನೀಡಿ ಕೆರೆಗಳ ಸ್ಥಿತಿ ಹಾಗೂ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಪರಿಶೀಲಿಸಲಾಗುವುದು ಎಂದರು.

ಸ್ಥಳೀಯರಿಂದ ಮಾಹಿತಿ:

ಇದೇ ಸಂದರ್ಭದಲ್ಲಿ ಸ್ಥಳೀಯರಿಂದಲೂ ಕೆರೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಕೆರೆಗೆ ಕಸ ಹಾಕುವುದು, ಕೊಳಚೆ ನೀರು ಹರಿಯುವುದು, ಸ್ವಚ್ಛತೆ ಕೊರತೆ ಹಾಗೂ ಕಸ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದಾಗ, ಕೆರೆಗಳು ಸಾರ್ವಜನಿಕರ ಆಸ್ತಿ. ಅವುಗಳ ಸಂರಕ್ಷಣೆಯಲ್ಲಿ ಅಧಿಕಾರಿಗಳ ಜತೆಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ. ಕೆರೆಗಳ ಸುತ್ತಮುತ್ತ ಕಸ ಹಾಕದಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ, ಪೌರಾಯುಕ್ತ ಮಹೇಂದ್ರ, ಇಒ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಪೋಟೊ೨೯ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಶೆಟ್ಟಿಹಳ್ಳಿ ಕೆರೆಗೆ ಲೋಕಾಯುಕ್ತ ಎಸ್ಪಿ ಡಾ.ಸ್ನೇಹಾ ಭೇಟಿ ನೀಡಿ ಕೆರೆಗಳ ಸಂರಕ್ಷಣೆ, ಪ್ರಗತಿ ಪರಿಶೀಲಿಸಿದರು. ಲೋಕಾಯುಕ್ತ ಡಿವೈಎಸ್‌ಪಿ, ಪೌರಾಯುಕ್ತ ಮಹೇಂದ್ರ, ಇಒ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಾವರಿ ಯೋಜನೆ ಜಾರಿಗೆ ಸರ್ಕಾರ ಬದ್ಧ
ಔಷಧ ವ್ಯಾಪಾರಿಗಳ, ವಿತರಕರ ಅಭಿವೃದ್ಧಿಗೆ ಸಂಸ್ಥೆ ಸದಾ ಬೆನ್ನುಲುಬಾಗಿದೆ: ಬಿ.ಲೋಕೇಶ್