ಕನ್ನಡಪ್ರಭ ವಾರ್ತೆ ಮದ್ದೂರು
ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ನೇತೃತ್ವದಲ್ಲಿ ಮತದಾನ ಕೇಂದ್ರದ ಬಳಿ ಮೈತ್ರಿ ಪಕ್ಷದ ನೂರಾರು ಕಾರ್ಯಕರ್ತರು ದಿಢೀರ್ ಪ್ರತಿಭಟನೆಗೆಳಿದು ನ್ಯಾಯಾಲಯದ ಆದೇಶ ಉಲ್ಲಂಘಿಸಿರುವ ಚುನಾವಣಾ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಾಲಯದ ಆದೇಶದಂತೆ ಹೊಸ ಸದಸ್ಯರು ಮತದಾನ ಮಾಡಿದ ಫಲಿತಾಂಶವನ್ನು ಆದೇಶ ಬಂದ ನಂತರವೇ ಚುನಾವಣೆಯ ಫಲಿತಾಂಶ ಪ್ರಕಟಿಸಬೇಕು ಎಂದು ಮೈತ್ರಿ ಪಕ್ಷದ ನಾಯಕರು ಪಟ್ಟಿ ಹಿಡಿದರು.ಶಾಸಕ ಕೆ.ಎಂ.ಉದಯ್ ಒತ್ತಡಕ್ಕೆ ಒಳಗಾಗಿ ಚುನಾವಣೆ ಫಲಿತಾಂಶ ಪ್ರಕಟಿಸಲಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ದಬ್ಬಾಳಿಕೆಯಲ್ಲಿ ಅಕ್ರಮ ನಡೆಸುತ್ತಿದ್ದಾರೆ. ನ್ಯಾಯಾಲಯದ ಆದೇಶದಂತೆ 515 ಮತದಾರರ ಫಲಿತಾಂಶದ ಜೊತೆಗೆ ಎಲ್ಲಾ ಫಲಿತಾಂಶ ಪ್ರಕಟಿಸಬೇಕು ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಆಗ್ರಹಪಡಿಸಿದರು.
ಮದ್ದೂರು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಎ.ತರಗತಿಯ ಐದು ಸ್ಥಾನಗಳಲ್ಲಿ ಕಾಂಗ್ರೆಸ್‌ನ ಐವರು ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಇನ್ನು ಪರಿಶಿಷ್ಟ ಜಾತಿ ಸ್ಥಾನಕ್ಕೆ ಸ್ಪರ್ಧಿಸಿದ್ದ ವೈ.ಕೆ.ದ್ಯಾವಯ್ಯ ಮತ್ತು ಮರಿದೇವರು ತಲಾ 870 ಸಮಬಲ ಮತಗಳನ್ನು ಪಡೆದಿದ್ದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ, ತಹಸಿಲ್ದಾರ್ ಡಾ.ಶಿವಕುಮಾರ ಬಿರಾದಾರ ಅಂತಿಮವಾಗಿ ಲಾಟರಿ ಮೊರೆ ಹೋದರು. ಆಗ ಕಾಂಗ್ರೆಸ್‌ನ ಬೆಂಬಲಿತ ಮರಿದೇವರು ಆಯ್ಕೆಯಾದರು. ನಿರ್ದೇಶಕರ ಚುನಾವಣೆಯಲ್ಲಿ 3506 ಮಂದಿ ಮತದಾನದ ಹಕ್ಕು ಪಡೆದಿದ್ದರು. ಈ ಪೈಕಿ 3225 ಮಂದಿ ಮತದಾನ ಮಾಡುವ ಮೂಲಕ ಶೇ.92.73 ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿ ಡಾ.ಶಿವಕುಮಾರ ಬಿರಾದಾರ ತಿಳಿಸಿದರು.