ಸಾಧನೆಗೆ ಶಿಕ್ಷಣವೇ ಪ್ರಮುಖ ಮಾಧ್ಯಮ: ಸುರೇಶ ಹರಿಕಂತ್ರ

KannadaprabhaNewsNetwork | Updated : May 28 2024, 01:05 AM IST

ಸಾರಾಂಶ

ಯಾವುದೇ ಹಿಂಜರಿಕೆ ಇಲ್ಲದೆ ಸೂಕ್ತ ತರಬೇತಿಯನ್ನು ಪಡೆದು ಎಲ್ಲರೂ ಉತ್ತಮ ಸಾಧನೆ ಮಾಡಬೇಕು.

ಅಂಕೋಲಾ: ವೃತ್ತಿ ಯಾವುದೇ ಆಗಿದ್ದರೂ ಸಾಧನೆ ಮಾಡುವುದಕ್ಕೆ ಶಿಕ್ಷಣವೇ ಒಂದು ಪ್ರಮುಖ ಮಾಧ್ಯಮವಾಗಿದೆ ಎಂದು ಕಂದಾಯ ಇಲಾಖೆಯ ನಿವೃತ್ತ ಉಪತಹಸೀಲ್ದಾರ್‌ ಸುರೇಶ ಹರಿಕಂತ್ರ ತಿಳಿಸಿದರು.

ಮೀನುಗಾರರ ಹಿತರಕ್ಷಣಾ ವೇದಿಕೆ, ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘ, ನಾಗರಿಕ ವೇದಿಕೆಯ ಆಶ್ರಯದಲ್ಲಿ ಕಲ್ಪವೃಕ್ಷ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಮೀನುಗಾರರ ಮಕ್ಕಳಿಗೆ ಒಂದು ದಿನದ ಶೈಕ್ಷಣಿಕ ಮಾರ್ಗದರ್ಶನ ಮತ್ತು ಪ್ರತಿಭಾವಂತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಹಿಂಜರಿಕೆ ಇಲ್ಲದೆ ಸೂಕ್ತ ತರಬೇತಿಯನ್ನು ಪಡೆದು ಎಲ್ಲರೂ ಉತ್ತಮ ಸಾಧನೆ ಮಾಡಬೇಕು. ಮೀನುಗಾರರ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡಿದಾಗ ನಮ್ಮ ಸಮಾಜವೂ ಅಭಿವೃದ್ಧಿಯಾಗುತ್ತದೆ ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲ್ಪಡುವ ಪ್ರಶಸ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ ಮಾತನಾಡಿ, ದುಡ್ಡಿದ್ದವರೇ ಶಿಕ್ಷಣ, ನೌಕರಿ ಪಡೆಯುವ ಕಾಲ ಇದಲ್ಲ. ಇದು ಸ್ಪರ್ಧಾತ್ಮಕ ಯುಗ. ಶಿಕ್ಷಣವಂತರಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರೆ ಬಡವರೂ ಉನ್ನತ ಹುದ್ದೆ ಪಡೆಯುವ ಎಲ್ಲ ಅವಕಾಶ ಎಲ್ಲರಿವೂ ಇದೆ ಎಂದರು.

ಪೂರ್ಣಪ್ರಜ್ಞಾ ಗ್ಲೋಬಲ್ ಎಕ್ಸಲೆನ್ಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಶಾಂತ ನಾಯಕ ಮಾತನಾಡಿ, ಕೇವಲ ತರಬೇತಿ ಪಡೆಯುವುದು ಗುರಿಯಾಗಬಾರದು. ಅದನ್ನು ಸದುಪಯೋಗಪಡಿಸಿಕೊಳ್ಳಲು ಬೇಕಾದ ಕೌಶಲ್ಯಗಳನ್ನೂ ಬೆಳೆಸಿಕೊಳ್ಳಬೇಕು ಎಂದರು.

ಎಂಜಿನಿಯರ್‌ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಹರಿಹರ ಹರಿಕಾಂತ ಮಾತನಾಡಿ, ಇದೊಂದು ಪ್ರಾಯೋಗಿಕ ಕಾರ್ಯಕ್ರಮವಾಗಿದೆ. ಆದರೂ ಪ್ರಥಮ ಪ್ರಯತ್ನದಲ್ಲೇ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಂಕೋಲಾದಲ್ಲಿ ಮೀನುಗಾರರ ಸಮುದಾಯದಲ್ಲೇ ಇದು ಪ್ರಥಮ ಕಾರ್ಯಕ್ರಮವಾಗಿದೆ. ಮೀನುಗಾರರು ಸಂಘ ಜೀವಿಗಳು, ಮುಂಬರುವ ದಿನಗಳಲ್ಲಿ ಇತರೆ ಸಮಾಜದವರನ್ನೂ ಸೇರಿಸಿಕೊಂಡು ಇಂತಹ ಮಾರ್ಗದರ್ಶಿ ಕಾರ್ಯಕ್ರಮ ಮಾಡಲು ಉತ್ಸುಕರಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ ಡಿ.ಜಿ. ಪಂಡಿತ ಅವರನ್ನು ಸನ್ಮಾನಿಸಲಾಯಿತು. ಹಾರವಾಡದ ಉದ್ಯಮಿ ರಾಜಾ ಪೆಡ್ನೇಕರ, ಜೈಹಿಂದ ಹೈಸ್ಕೂಲ್‌ ಶಿಕ್ಷಕ ಪ್ರಶಾಂತ ನಾಯ್ಕ, ನಾಗರಿಕ ವೇದಿಕೆಯ ಅಧ್ಯಕ್ಷ ನಾಗರಾಜ ನಾಯ್ಕ ಇದ್ದರು.

ಕಲ್ಪವೃಕ್ಷ ಅಕಾಡೆಮಿ ತರಬೇತಿ ಸಂಸ್ಥೆಯ ಸಂಚಾಲಕ ಮಾರುತಿ ಹರಿಕಂತ್ರ ಸ್ವಾಗತಿಸಿದರು. ಶಿಕ್ಷಕ ಜಿ.ಆರ್. ತಾಂಡೇಲ ಕಾರ್ಯಕ್ರಮ ನಿರ್ವಹಿಸಿದರು. ಅರವಿಂದ ಕುಡ್ತಾಲಕರ್ ವಂದಿಸಿದರು.

Share this article