- ವಾಲ್ಮೀಕಿ ಯುವಕರಿಗೆ ನಾಯಕತ್ವ-ಕೌಶಲ್ಯ ಶಿಬಿರದಲ್ಲಿ ಜಗಳೂರು ಶಾಸಕ ದೇವೇಂದ್ರಪ್ಪ
ಕನ್ನಡಪ್ರಭ ವಾರ್ತೆ ಹರಿಹರ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ. ಆದ್ದರಿಂದ ಸಮಾಜದಲ್ಲಿನ ಯುವಜನರು ಉನ್ನತ ಶಿಕ್ಷಣದಿಂದ ವಿಮುಖರಾಗಬಾರದು. ಸಮುದಾಯದ ಯುವಕರು ದುಶ್ಚಟಗಳಿಗೆ ಬಲಿಯಾಗದೇ, ಅವುಗಳಿಂದ ದೂರವಿರಬೇಕು ಎಂದು ಜಗಳೂರು ಕ್ಷೇತ್ರ ಶಾಸಕ ದೇವೇಂದ್ರಪ್ಪ ಹೇಳಿದರು.ನಗರದ ಹೊರವಲಯದ ಪ್ರೊ. ಬಿ.ಕೃಷ್ಣಪ್ಪ ಭವನದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ವತಿಯಿಂದ ಶುಕ್ರವಾರದಿಂದ 2 ದಿನಗಳ ಕಾಲ ನಡೆದ, ವಾಲ್ಮೀಕಿ ಸಮುದಾಯದ ಯುವಕರಿಗೆ ನಾಯಕತ್ವ ಮತ್ತು ಕೌಶಲ್ಯ ಶಿಬಿರವನ್ನು ಅಂಬೇಡ್ಕರ್ ಹಾಗೂ ವಾಲ್ಮೀಕಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯದ ಬದುಕಿನಲ್ಲಿ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ಬದುಕಿನಲ್ಲಿ ಎಷ್ಟೇ ಎತ್ತರದ ಸ್ಥಾನಕ್ಕೆ ಹೋದರೂ ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತವಾಗದೇ, ತಂದೆ- ತಾಯಿ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಶ್ರೇಯೋಭಿವೃದ್ಧಿಗೆ ಗಮನಹರಿಸಬೇಕು. ಒಬ್ಬ ಉತ್ತಮ ನಾಯಕ ಆಗಬೇಕಾದರೆ ಎಲ್ಲ ವರ್ಗಗಳ ವಿಶ್ವಾಸ ಗಳಿಸಬೇಕು ಎಂದು ತಿಳಿಸಿದರು.
ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ, ಸಮುದಾಯದ ಯುವಕರು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸತೀಶ್ ಜಾರಕಿಹೊಳಿಯವರು ಈ ರಾಜ್ಯದ ಮುಖ್ಯಮಂತ್ರಿ ಆಗುವ ಸಂಭವವಿದೆ. ಎಲ್ಲ ವರ್ಗದ ಶೋಷಿತ ಜನರಿಗೆ ನ್ಯಾಯ ದೊರಕುವ ವಿಶ್ವಾಸವಿದೆ ಎಂದರು.
ಕಾರ್ಯಕ್ರಮದಲ್ಲಿ ದಾವಣಗೆರೆ ತಾ.ಪಂ. ಮಾಜಿ ಅಧ್ಯಕ್ಷ ಕೆ.ಎನ್. ಮಂಜುನಾಥ್, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಮಾರಣ್ಣ ನಾಯಕ, ಜಿಗಳಿ ಆನಂದಪ್ಪ, ಮಾಡಾಳ್ ಶಿವಕುಮಾರ್, ಪ್ರಕಾಶ ಹಾದಿಮನೆ, ಜಿಗಳಿ ಪ್ರಕಾಶ್ ಹಾಗೂ ಇತರರಿದ್ದರು.
-18ಎಚ್‍ಆರ್‍ಆರ್1: