ಕನ್ನಡಪ್ರಭ ವಾರ್ತೆ ತುಮಕೂರುಶೋಷಿತ ಸಮುದಾಯದವರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ ಸಮಾಜದಲ್ಲಿ ಮಹತ್ತರ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಜಿಲ್ಲಾ ಬಂಜಾರ ಲಂಬಾಣಿ ಸೇವಾಲಾಲ್ ಸೇವಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಬಂಜಾರ ಭವನದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. 2016 ರಲ್ಲಿ ಬಂಜಾರ ಭವನಕ್ಕೆ ಅಡಿಗಲ್ಲು ಹಾಕಲಾಗಿದ್ದು, ಸುಮಾರು 3.40 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಕಾಮಗಾರಿ ಅನೇಕ ವರ್ಷಗಳಿಂದ ಮುಂದೂಡಲ್ಪಟ್ಟಿತ್ತು. ಇದೀಗ ಸಮುದಾಯ ಭವನ ನಿರ್ಮಾಣಗೊಂಡು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಲಂಬಾಣಿ ಸಮುದಾಯಕ್ಕೆ ಹೆಚ್ಚು ಉಪಯೋಗವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಲಂಬಾಣಿ ಸಮುದಾಯದ 10 ಸಾವಿರ ಯುವಕ–ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ ಸ್ವತಂತ್ರವಾಗಿ ಜೀವನ ನಡೆಸಲು ನೆರವಾಗುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಪ್ರಾಥಮಿಕ ಶಿಕ್ಷಣ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ರೆಸಿಡೆನ್ಷಿಯಲ್ ಶಾಲೆಯ ನಿರ್ಮಾಣಕ್ಕೆ 50 ಕೋಟಿ ರು. ಅನುದಾನ ನೀಡಲಾಗಿದೆ. ಜೊತೆಗೆ 500 ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕಾಗಿ ಮತ್ತಷ್ಟು 50 ಕೋಟಿ ರು. ಅನುದಾನ ಮಂಜೂರು ಮಾಡಲಾಗಿದೆ ಎಂದು ಹೇಳಿದರು.ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ಜಯದೇವ ನಾಯ್ಕ ಮಾತನಾಡಿ, ರಾಜ್ಯದಲ್ಲಿ ಒಟ್ಟು 3,388 ತಾಂಡಾಗಳಿದ್ದು, ಶೋಷಿತ ಸಮುದಾಯದವರನ್ನು ಸಮಾಜದ ಮುಂಚೂಣಿಗೆ ತರಲು ಈ ರೀತಿಯ ಸಮುದಾಯ ಭವನಗಳನ್ನು ಸ್ಥಾಪಿಸಲಾಗುತ್ತಿದೆ. ತಾಂಡಾಗಳ ಸಮಗ್ರ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರ ಮತ್ತಷ್ಟು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಂಜಾರ ಗುರುಪೀಠ, ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿಗಳು, ಕರ್ನಾಟಕ ವಿಧಾನಸಭೆ ಉಪ ಸಭಾಪತಿ, ರುದ್ರಪ್ಪ ಮಾನಪ್ಪ ಲಮಾಣಿ, ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಜಿ. ಚಂದ್ರಶೇಖರ ಗೌಡ ಸೇರಿದಂತೆ ಮತ್ತಿತರ ಸಮುದಾಯ ಮುಖಂಡರು ಉಪಸ್ಥಿತರಿದ್ದರು.