ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯೆ ಎಂಬುದು ವ್ಯಕ್ತಿತ್ವದ ಜೊತೆಗೆ ಭವಿಷ್ಯದಲ್ಲಿ ಗೌರವಯುತವಾದ ಸುಂದರ ಬದುಕನ್ನು ರೂಪಿಸಿ ಕೊಡುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ಸಂಪೂರ್ಣವಾಗಿ ಶಿಕ್ಷಣವನ್ನು ಕೈವಶ ಮಾಡಿಕೊಳ್ಳಬೇಕು. ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇದಾವುದೂ ಕಷ್ಟವಲ್ಲ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.ನಗರದ ರಾಮಾನುಜಾ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿ ಬಾಬ ಮಂದಿರದಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಂಯುಕ್ತವಾಗಿ ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಸ್ಥಾನಗಳಿಸಿರುವ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭಿಸಿ, ಉನ್ನತ ಶಿಕ್ಷಣದ ತನಕವೂ ಪ್ರತಿಯೊಂದು ಹಂತದಲ್ಲೂ ಕಲಿಕೆಯಲ್ಲಿ ಹೆಚ್ಚೆಚ್ಚು ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾ ಹೋಗಿ. ಅದನ್ನು ಹಾಗೆಯೇ ಉಳಿಸಿಕೊಂಡಲ್ಲಿ ಆಗ ಸಾಧನೆ ಎಂಬುದು ಶಿಕ್ಷಣದಲ್ಲಿ ಅಪಾರ ಕಲಿಕಾಸಕ್ತಿ ಹೊಂದಿರುವ ಸಾಧಕರ ಕೈವಶವಾಗುತ್ತದು ಎಂದರು.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿರುವ ನಗರದ ವಿವಿಧ ಶಾಲೆಗಳ ಆಯ್ದ ವಿದ್ಯಾರ್ಥಿಗಳಾದ ರಶ್ಮಿ, ನಾಗಮ್ಮ, ಎಚ್.ಎಸ್. ದೀಪಶ್ರೀ, ಹೇಮಾ, ಡಿ. ಲೋಹಿತ್, ನಮ್ರತಾ, ಪಲ್ಲವಿ, ಜಿ. ಅಕ್ಷಯ, ಬಿ.ಎಸ್. ಹರ್ಷಿತಾ, ವಿ.ವರುಣ, ಎಂ. ಜಯಂತಿ, ಎಂ. ಸೂರ್ಯ, ವಿ. ಸುರೇಶ, ಎಂ. ವಿಜಯ, ಕೆ. ಸಂಧ್ಯಾ, ಪಿ.ವಿ. ಮಹದೇವ, ಟಿ. ದೀಪಿಕಾ, ಎಂ. ರಾಧಿಕಾ, ಎಂ. ಪದ್ಮಾವತಿ, ಯಶಸ್ವಿನಿ ಅರಸ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಯುವ ಉದ್ಯಮಿ ಮೇಘನಾ ವೆಂಕಟೇಶ್, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ, ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಗೋಪಾಲಸ್ವಾಮಿ, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ. ಸಂಗಪ್ಪ, ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ವಿ. ಮುರಳೀಧರ್, ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಕ್ತಕ ಕವಿ ಎಂ. ಮುತ್ತುಸ್ವಾಮಿ, ಚಿತ್ರಕಲಾ ಶಿಕ್ಷಕ ಮನೋಹರ್, ಲೇಖಕ ವಿ. ನಾರಾಯಣರಾವ್, ಸಿರಿಗನ್ನಡ ವೇದಿಕೆಯ ನಾಗರತ್ನ, ಜಾದು ಕಲಾವಿದ ಗುರುಸ್ವಾಮಿ ಮೊದಲಾದವರು ಇದ್ದರು.