ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯ ಎಫ್‌ಸಿಸಿ ಸರ್ಕಾರವು ವಿವಿಧ ಮಹನೀಯರ ಜಯಂತಿ ಆಚರಿಸುತ್ತಿದೆ. ಅಂತೆಯೇ ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿಯನ್ನೂ ಆಚರಿಸಬೇಕೆಂದು ಶ್ರೀ ಗುರುರಾಯರ ಆರಾಧಕರಾದ ಆರತಿ ತಿವಾರಿ ಒತ್ತಾಯಿಸಿದರು.ಇಲ್ಲಿಯ ಬೊಮ್ಮನಕಟ್ಟೆಯ ಡಿ ಬ್ಲಾಕ್‌ನಲ್ಲಿ ಫೆ.24ರ ಮಂಗಳವಾರ ಸಂಜೆ ಅಧ್ಯಾತ್ಮ ಗುರು ದೀಪಕ್ ಗುರೂಜಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ 431ನೇ ಗುರುರಾಯರ ವರ್ಧಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ಬಸವ ಜಯಂತಿ, ಕನಕದಾಸ ಜಯಂತಿ, ಅಂಬೇಡ್ಕರ್ ಜಯಂತಿ, ಮಹರ್ಷಿ ವಾಲ್ಮೀಕಿ ಜಯಂತಿ, ಗಾಂಧಿ ಜಯಂತಿ ಸೇರಿದಂತೆ ಮತ್ತಿತರೆ ಜಯಂತಿಗಳನ್ನು ಸರ್ಕಾರ ಆಚರಿಸುತ್ತಿದೆಯಲ್ಲದೆ, ರಜೆಯನ್ನೂ ಸಹ ಘೋಷಣೆ ಮಾಡಿದೆ. ಅದೇ ರೀತಿ ಮಹಾ ಮಹಿಮರಾದ ಗುರುರಾಯರ ಜಯಂತಿಯನ್ನೂ ಎಲ್ಲೆಡೆ ವೈಭವದಿಂದ ಆಚರಿಸುವಂತಾಗಬೇಕೆಂದು ಆಶಿಸಿದರು.
ಶ್ರೀ ಗುರುರಾಯರು ಯಾವುದೇ ಜಾತಿಗೆ ಸೀಮಿತರಾದವರಲ್ಲ. ಆದ್ದರಿಂದಲೇ ರಾಯರ ಮಠಕ್ಕೆ ಎಲ್ಲಾ ಜಾತಿ, ಜನಾಂಗದವರೂ ನಡೆದುಕೊಳ್ಳುತ್ತಾರೆ. ಜಯಂತಿ ಆಚರಣೆ ಯಾವುದೇ ಜಾತಿ, ಮತಕ್ಕೆ ಸೀಮಿತವಾಗದೆ ಎಲ್ಲಾ ಜನಾಂಗದವರೂ ಪಾಲ್ಗೊಂಡು ಆಚರಣೆ ಮಾಡಬೇಕು. ಅಲ್ಲದೆ ಮಹನೀಯರ ತತ್ವ, ಆದರ್ಶ, ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.ಅವತಾರ ಪುರುಷರಾದ ಗುರುರಾಯರು ಮಾಡಿದ ಉಪಕಾರ ಅಷ್ಟಿಷ್ಟಲ್ಲ. ಅವರು ಅವತಾರ ಮಾಡದೇ ಇದ್ದಿದ್ದರೆ ಏನಾಗುತ್ತಿತ್ತು ಎಂದು ಯೋಚಿಸಬೇಕಾಗಿದೆ. ಅಂಥ ಮಹಾ ಮಹಿಮರು ರಾಘವೇಂದ್ರ ಸ್ವಾಮಿಗಳು ಎಂದು ತಿಳಿಸಿದರು.
ಅಧ್ಯಾತ್ಮ ಗುರು ದೀಪಕ್ ಗುರೂಜಿ ಮಾತನಾಡಿ ರಾಯರ ಮಹಿಮೆ ಅಪಾರವಾದುದು. ಪ್ರತಿಯೊಬ್ಬರ ಜೀವನದಲ್ಲೂ ಅವರು ಅನುಗ್ರಹ ಮಾಡಿದ್ದಾರೆ. ಅನೇಕರಿಗೆ ಆರೋಗ್ಯ, ಸಂತಾನ, ಉದ್ಯೋಗ ಮುಂತಾದ ಭಾಗ್ಯಗಳನ್ನು ಕರುಣಿಸಿದ್ದಾರೆ. ಲೌಕಿಕ ಮತ್ತು ಆಧ್ಯಾತ್ಮಿಕವಾಗಿ ಭಕ್ತರಿಗೆ ಬೇಕಾಗಿದ್ದನ್ನು ನೀಡಿದ್ದಾರೆ ಎಂದು ತಿಳಿಸಿದರು.
ಗುರು ಸಾರ್ವಭೌಮರು ಸಮುದ್ರವಿದ್ದಂತೆ. ಗಂಗೆ, ತುಂಗಭದ್ರೆ ಮುಂತಾದ ನದಿಗಳೆಲ್ಲವೂ ಸಾಗರವನ್ನು ಸೇರುವಂತೆ ಅವರು ಜ್ಞಾನದ ನಿಧಿಯಾಗಿ, ಮೋಕ್ಷದ ದಾರಿಯನ್ನು ತೋರುತ್ತಾರೆ ಎಂದು ಹೇಳಿದರು.
ರಾಘವೇಂದ್ರ ಸ್ವಾಮಿಗಳ ನಾಲಿಗೆಯು ಸರಸ್ವತಿ ದೇವಿಯ ರಂಗಸ್ಥಳವಾಗಿತ್ತು, ಅಷ್ಟು ಜ್ಞಾನ ಅವರಲ್ಲಿತ್ತು. ರಾಯರ ವಾಗ್ಗಂಗೆಯು ಭಗವಂತನ ಸ್ವರೂಪವನ್ನು ತಿಳಿಸುತ್ತದೆ ಎಂದರು.ಸ್ನೇಹಾಶ್ರಯ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥರಾದ ಟಿ.ಮಾಲತಿ, ವ್ಯವಸ್ಥಾಪಕರಾದ ಹರೀಶ್, ಸಾಮಾಜಿಕ ಹೋರಾಟಗಾರ ಹರೀಶ್, ಬಸವರಾಜ್, ಇ.ಜ್ಯೋತಿ ಮತ್ತಿತರರು ಭಾಗವಹಿಸಿದ್ದರು.