ಕುಷ್ಟಗಿ: ಬಡತನ ಯಶಸ್ಸಿಗೆ ಅಡ್ಡಿಯಲ್ಲ, ಕಠಿಣ ಪರಿಶ್ರಮ ಮತ್ತು ಶಿಕ್ಷಣವೇ ಜೀವನದ ಯಶಸ್ಸಿನ ನಿಜವಾದ ಮಂತ್ರ ಎಂದು ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಉಪಾಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಶಿಕ್ಷಣದ ಮೂಲಕ ವ್ಯಕ್ತಿಯ ಬದುಕು ಮಾತ್ರವಲ್ಲ ಇಡೀ ಸಮಾಜದ ಭವಿಷ್ಯ ರೂಪಿಸಬಹುದು. ಸಮಾಜದ ಅಭಿವೃದ್ಧಿಗೆ ಹಣಕ್ಕಿಂತ ಜ್ಞಾನ, ಸಂಸ್ಕಾರ, ಒಗ್ಗಟ್ಟು ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತ ಸಾಧನೆ ಮಾಡಿ ಸಮಾಜಕ್ಕೆ ಕೀರ್ತಿ ತರಬೇಕು ಎಂದರು.
ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾಗಿರುವವರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದ ಅವರು, ಸಮಾಜದಲ್ಲಿ ಒಬ್ಬರ ಬೆಳವಣಿಗೆ ಕಂಡು ಮತ್ತೊಬ್ಬರು ಕಾಲೆಳೆಯುವ ಮನೋಭಾವ ಸಂಪೂರ್ಣವಾಗಿ ತೊರೆಯಬೇಕು. ಉನ್ನತ ಹುದ್ದೆ ಪಡೆಯಲು ರಾಜಕಾರಣಿಗಳ ಶಿಫಾರಸ್ಸು ಅಲ್ಲ, ಜ್ಞಾನ ಮತ್ತು ಸಾಮರ್ಥ್ಯ ಮುಖ್ಯವಾಗಿದೆ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕೃತಿ ಮತ್ತು ಜೀವನ ಮೌಲ್ಯ ಕಲಿಸಿ ಕೊಡುವ ಅಗತ್ಯ ಹೆಚ್ಚಾಗಿದೆ ಎಂದು ಹೇಳಿದರು.ಬಳ್ಳಾರಿ ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ್ ಮಾತನಾಡಿ, ಮೀಸಲಾತಿ ಆರ್ಥಿಕತೆ ಆಧಾರಿತ ವ್ಯವಸ್ಥೆಯಲ್ಲ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸಂವಿಧಾನಾತ್ಮಕವಾಗಿ ಕಲ್ಪಿಸಿರುವ ಅವಕಾಶವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಅವಕಾಶ ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮುಂದೆ ಬರಬೇಕು. ಕಾರ್ಯದಕ್ಷತೆ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಮಾತನಾಡಿ, ಶಿಕ್ಷಣದ ಜತೆಗೆ ಸಂಸ್ಕಾರ, ಶಿಸ್ತು ಮತ್ತು ಜೀವನ ಮೌಲ್ಯ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಿಂಗಪ್ಪ ಮಂಗಳೂರು, ದೇವೇಂದ್ರಗೌಡ ಮೇಟಿ, ಮಹಾಂತೇಶ ಅಗಸಿಮುಂದಿನ, ವಿಶ್ವನಾಥ ಹಳೇಗೌಡ್ರು, ಶಿವಪ್ಪ ಗೆಜ್ಜಲಗಟ್ಟಿ, ರಾಜು ಬ್ಯಾಳಿ, ನಾಗರಾಜ ಎಲಿಗಾರ, ರೇಖಾ ಹನುಮಸಾಗರ, ಶೋಭಾ ಪುರ್ತಗೇರಿ, ಉಮೇಶ ಮಂಗಳೂರು, ಸಿದ್ದರಾಮಪ್ಪ ಕೌದಿ, ಶರಣಪ್ಪ ಜಿಗೇರಿ, ಶಿವಸಂಗಪ್ಪ ಮಾಸ್ಟರ್, ಸುರೇಶ್ ಕೌದಿ, ಪ್ರಭು ಸೂಡಿ, ಶಿವಲಿಂಗಪ್ಪ ಸೂಡಿ, ಸೋಮು ಪುರದ್, ಸಂಗಮೇಶ್ ಕಂದಗಲ್, ಬಸವರಾಜ ಹೊರಪೇಟೆ, ಶಿವರಾಜ, ಶರಣಬಸವ ನವಲಹಳ್ಳಿ, ತಿರುಪತಿ ಎಲಿಗಾರ, ನಿಂಗಪ್ಪ ಜಿಗೇರಿ, ರವಿಕುಮಾರ್ ಮದ್ನಾಳ ಸೇರಿದಂತೆ ಮುಖಂಡರು, ಮಹಿಳೆಯರು, ವಿದ್ಯಾರ್ಥಿಗಳು ಇದ್ದರು.