ಕಾರಟಗಿ: ಶಿಕ್ಷಣಕ್ಕೆ ಮಹತ್ವ ನೀಡುವ ಸಮಾಜದಲ್ಲೇ ಸುಖ,ಸಂಪತ್ತು ಮತ್ತು ಸಮೃದ್ಧಿ ನೆಲೆಸಿರುತ್ತದೆ ಎಂದು ಬೂದಗುಂಪಾದ ಕೊಟ್ಟೂರು ಶಾಖಾ ವಿರಕ್ತಮಠದ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಕೆಲವು ನಗರಗಳಲ್ಲಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆಗಳು ಹೆಚ್ಚಿರುವುದು ಅಭಿವೃದ್ಧಿಯ ಮಾನದಂಡವೆಂದು ಪರಿಗಣಿಸಲಾಗುತ್ತದೆ. ಆದರೆ ಕಾರಟಗಿಯಲ್ಲಿ ಶಿಕ್ಷಣ ಸಂಸ್ಥೆಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಈ ಭಾಗದ ಜನರ ಶಿಕ್ಷಣಾಭಿಮಾನಕ್ಕೆ ಜೀವಂತ ಸಾಕ್ಷಿಯಾಗಿದೆ. ಇದು ಇಡೀ ತಾಲೂಕಿಗೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಮಕ್ಕಳ ಭವಿಷ್ಯ ರೂಪಿಸುವ ಹೊಣೆಗಾರಿಕೆ ಶಿಕ್ಷಕರಷ್ಟೇ ಅಲ್ಲ, ಪಾಲಕರ ಮೇಲೆಯೂ ಇದೆ. ಮಕ್ಕಳಲ್ಲಿ ಸಮಯಪ್ರಜ್ಞೆ, ಶಿಸ್ತು, ಸಂಸ್ಕಾರ ಮತ್ತು ಸಾಮಾಜಿಕ ಮೌಲ್ಯ ಬೆಳೆಸುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ. ಶಿಕ್ಷಣದ ಜತೆಗೆ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೂ ಆದ್ಯತೆ ನೀಡಿದಾಗ ಮಾತ್ರ ದೇಶಕ್ಕೆ ಉತ್ತಮ ಪ್ರಜೆ ದೊರೆಯುತ್ತಾರೆ ಎಂದರು.ಕಾರಟಗಿಯ ಶಿಕ್ಷಣ ಕ್ಷೇತ್ರಕ್ಕೆ ಭದ್ರ ಅಡಿಪಾಯ ಹಾಕಿ, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡುತ್ತಿರುವ ಶ್ರೀಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಸೇವೆ ಅನುಕರಣೀಯವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಬಿ.ಶೆಟ್ಟರ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ಮುಖ್ಯಗುರು ಅಮರೇಶ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಆರಂಭದಿಂದ ಇಂದಿನವರೆಗಿನ ಬೆಳವಣಿಗೆ, ಶೈಕ್ಷಣಿಕ ಸಾಧನೆ ಹಾಗೂ ಸಮಾಜಮುಖಿ ಕಾರ್ಯ ವಿವರಿಸಿದರು.
ಶಿಕ್ಷಕ ಮಹಿಬೂಬ್ ಕಿಲ್ಲೇದಾರ, ಶಿಕ್ಷಕಿ ಸುಮಲತಾ, ಅಶ್ವಿನಿ ಗದ್ದಿ ಪ್ರಾಚಾರ್ಯ ಸಿಸ್ಟರ್ ರೀಟಾ ಕಾರ್ಯಕ್ರಮ ನಿರ್ವಹಿಸಿದರು.