ದೊಡ್ಡಬಳ್ಳಾಪುರ: ಸಮಾಜದಿಂದ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡಲು ಶಿಕ್ಷಣ ಬಲವಾದ ಆಯುಧ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲ್ ಭೀಮಸೇನ ಬಾಗಡಿ ಅಭಿಪ್ರಾಯಪಟ್ಟರು.
ಬಡತನ ಹಾಗೂ ಅನಕ್ಷರತೆಯಿಂದ ಬಾಲಕಾರ್ಮಿಕ ಪದ್ದತಿ ಹೆಚ್ಚಾಗುತ್ತಿದೆ. ಪೋಷಕರು ಪ್ರತಿ ಮಗುವಿಗೆ ಶಿಕ್ಷಣವನ್ನು ಕಡ್ಡಾಯವಾಗಿ ಕೊಡಿಸಬೇಕು. ಇದರಿಂದ ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುವ ಜತೆಗೆ ಬಾಲಕಾರ್ಮಿಕ ಪದ್ದತಿ ಸಂಪೂರ್ಣ ನಿರ್ಮೂಲನೆ ಮಾಡಲು ಸಹಕಾರಿಯಾಗುತ್ತದೆ. ಕಾರ್ಖಾನೆ ಮಾಲಿಕರು ಅಡ್ಡದಾರಿಯಲ್ಲಿ ಬಾಲಕ ಕಾರ್ಮಿಕರ ಆಧಾರ್ ಕಾರ್ಡ್ ನಲ್ಲಿ ವಯಸ್ಸು ತಿದ್ದುಪಡಿ ಮಾಡಿ, ದುಡಿಮೆಗೆ ಪಡೆಯುತ್ತಿರುವುದು ಕಾನೂನು ಬಾಹಿರ. ಕಾರ್ಖಾನೆಗಳಲ್ಲಿ ಮಹಿಳಾ ಸುರಕ್ಷತೆ, ದೌರ್ಜನ್ಯ ನಡೆಯದಂತೆ ಆಂತರಿಕ ದೂರ ಸಮಿತಿ ಕಡ್ಡಾಯವಾಗಿ ಇರಬೇಕು. ಆಂತರಿಕ ದೂರ ಸಮಿತಿ ಇರದ ಕಾರ್ಖಾನೆ ವಿರುದ್ಧ ದೂರು ದಾಖಲಿಸಲಾಗುವುದು ಎಂದರು.
ವಿದ್ಯಾರ್ಥಿಗಳು ಬಾಲಕಾರ್ಮಿಕ ನಿಷೇಧ ಕಾಯ್ದೆ ಕುರಿತು ಅರಿತು ತಮ್ಮ ಸುತ್ತಮುತ್ತಲಿನ ನಾಗರಿಕರಿಗೆ ಜಾಗೃತಿ ಮೂಡಿಸಿ, ಬಾಲಕಾರ್ಮಿಕರ ರಕ್ಷಣೆಗಾಗಿ ಶಾಲಾ ಶಿಕ್ಷಕರು/ಪೋಲಿಸರಿಗೆ ಇಲ್ಲವೇ ಇಲಾಖೆ ಸಹಾಯವಾಣಿಗೆ ತಿಳಿಸಬೇಕು ಎಂದು ಕರೆ ನೀಡಿದರು.ಜಿಲ್ಲಾಧಿಕಾರಿ ಡಾ. ಕೆ.ಎನ್.ಅನುರಾಧ ಮಾತನಾಡಿ, 14 ವರ್ಷದೊಳಗಿನ ಬಾಲಕಾರ್ಮಿಕರನ್ನು ದುಡಿಮೆಗೆ ತೆಗೆದುಕೊಳ್ಳಬಾರದು. ಅಪಾಯಕಾರಿ ಕಾರ್ಖಾನೆಗಳಲ್ಲಿ ದುಡಿಯುವ 18 ವರ್ಷದೊಳಗಿನ ಬಾಲಕಾರ್ಮಿಕರ ರಕ್ಷಣೆಗೆ ಅಧಿಕಾರಿಗಳು ಮುಂದಾಗಿ, ಬಾಲಕಾರ್ಮಿಕ ಕಾಯ್ದೆಯ ಜಾಗೃತಿ ಮೂಡಿಸಬೇಕು. ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು. ಪ್ರತಿಯೊಂದು ಮಗುವಿಗೆ ಕಡ್ಡಾಯವಾಗಿ ಶಿಕ್ಷಣ ಸಿಗುವಂತೆ ಪೋಷಕರು ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.
ಕಾನೂನು ಪ್ರಾಧಿಕಾರ ಸೇವಾ ಅಧಿಕಾರೇತರ ಸದಸ್ಯ ವೆಂಕಟೇಶ್ ಮಾತನಾಡಿ, ಮಕ್ಕಳು ದೇಶದ ಸಂಪತ್ತು, ಆ ಸಂಪತ್ತು ಬೆಳೆಸುವ ಕೆಲಸ ಪ್ರತಿಯೊಬ್ಬ ಪೋಷಕರು ಮಾಡಬೇಕು. ಬಾಲಕಾರ್ಮಿಕ ಪದ್ಧತಿ ತಡೆಯುವಲ್ಲಿ ನಮ್ಮೆಲ್ಲರ ಜವಬ್ದಾರಿಯು ಮಹತ್ವದ್ದು, ಪಂಚಾಯತ ಮಟ್ಟದಿಂದಲೇ ಮಕ್ಕಳ ಹಕ್ಕುಗಳು, ಬಾಲಕಾರ್ಮಿಕ ಪದ್ಧತಿ ನಿಷೇಧ ಹಾಗೂ ಬಾಲ್ಯವಿವಾಹ ತಡೆ ಬಗ್ಗೆ ನಿರಂತರ ಅರಿವು ಮೂಡಿಸಬೇಕು ಎಂದರು.
ಇದಕ್ಕೂ ಮುನ್ನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬ್ಯಾಂಕ್ ಸರ್ಕಲ್ ನಿಂದ ಸರ್ಕಾರಿ ಪ್ರೌಢಶಾಲೆ ವರೆಗೂ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಕೆ. ಚಿತ್ರಾವತಿ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
12ಕೆಡಿಬಿಪಿ1-
(ಈ ಫೋಟೋವನ್ನು ಪ್ಯಾನಲ್‌ಗೆ ಬಳಸಬಹುದು)
ದೊಡ್ಡಬಳ್ಳಾಪುರ ತಾಲೂಕು ಬಾಶೆಟ್ಟಿಹಳ್ಳಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಪ್ರಯುಕ್ತ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆಯಿತು.