ಯಲಬುರ್ಗಾ: ಶಿಕ್ಷಣದಿಂದ ವಿದ್ಯಾರ್ಥಿಗಳ ಬದುಕು ಹಸನಾಗಲಿದ್ದು, ಅವರಿಗೆ ಪ್ರೋತ್ಸಾಹಿಸುವ ಮನೋಭಾವನ ಎಲ್ಲರಲ್ಲಿ ಬರಬೇಕು ಎಂದು ಆರಾಮ ಫೌಂಡೇಶನ್ ಸಂಸ್ಥಾಪಕಿ ಮಮತಾ ರಾಯರಡ್ಡಿ ಹೇಳಿದರು.
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಂಕ ಗಳಿಸಿದರೆ ಸಾಲದು, ಸಾಮಾಜಿಕ ಕಳಕಳಿಯ ಮನೋಭಾವ ಬೆಳೆಸಿಕೊಳ್ಳಬೇಕು. ನಿರಂತರ ಅಧ್ಯಯನದಿಂದ ಉತ್ತಮ ಫಲಿತಾಂಶ ಗಳಿಸಲು ಸಾಧ್ಯ. ಅವಳಿ ತಾಲೂಕಿನ ಮಕ್ಕಳು ಸಾವಿರಾರು ಸಂಖ್ಯೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಿದೆ. ಇದಕ್ಕೆ ನಮ್ಮ ತಂದೆ ಶಾಸಕ ಬಸವರಾಜ ರಾಯರಡ್ಡಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಅಗಾಧ ಕಾರ್ಯವೇ ಪ್ರೇರಣೆಯಾಗಿದೆ ಎಂದರು.
ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿದರೆ ಅವರ ಭವಿಷ್ಯ ಉಜ್ವಲವಾಗುತ್ತದೆ. ಕ್ಷೇತ್ರದಲ್ಲಿ ಸರ್ಕಾರಿ ಶಾಲಾ ಕಾಲೇಜುಗಳು ಬಡವರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುನ್ನುಡಿ ಬರೆದಿದೆ. ಆರಾಮ ಫೌಂಡೇಶನ್‌ನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸುವಂತಹ ಕೆಲಸ ಮಾಡಲಾಗುತ್ತಿದೆ. ಸಮಾಜ ಸೇವೆ ಮಾಡುವ ಉದ್ದೇಶದಿಂದ ಸಂಸ್ಥೆ ಆರಂಭಿಸಿದ್ದೇವೆ. ಹಿಂದುಳಿದ ತಾಲೂಕಿನಲ್ಲಿ ಇಷ್ಟೊಂದು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುವುದು ಮಾದರಿಯಾಗಿದೆ. ಈ ಹಿಂದೆ ಶಿಕ್ಷಣಕ್ಕಾಗಿ ಬೇರೆ ಜಿಲ್ಲೆ ತಾಲೂಕುಗಳಿಗೆ ಹೋಗುವ ಅನಿವಾರ್ಯತೆ ಇತ್ತು. ಪ್ರಸ್ತುತ ಕ್ಷೇತ್ರದಲ್ಲಿ ಎಲ್‌ಕೆಜಿಯಿಂದ ಪಿಜಿ, ಬಿಎಸ್ಸಿ ನರ್ಸಿಂಗ್ ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ನಿವೃತ್ತ ಡಿಡಿಪಿಐ ಎಸ್.ಡಿ.ಗಾಂಜಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣವನ್ನು ಕಲಿತು ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಬೇಕು. ವಿದ್ಯೆಯ ಜೊತೆಗೆ ವಿನಯ, ಸಂಸ್ಕಾರ ಬೆಳೆಸಿಕೊಳ್ಳಬೇಕು. ಕ್ಷೇತ್ರದ ಮಕ್ಕಳನ್ನು ವಿದ್ಯಾವಂತರಾಗಿ ಮಾಡುವ ನಿಟ್ಟಿನಲ್ಲಿ ಶಾಸಕ ಬಸವರಾಜ ರಾಯರಡ್ಡಿ ಅವರ ಕೊಡುಗೆ ಅನನ್ಯವಾಗಿದೆ ಎಂದರು.
ಪ್ರತಿಭಾ ಪುರಸ್ಕಾರ
ಈ ಸಂದರ್ಭ ಶಾಸಕ ಬಸವರಾಜ ರಾಯರಡ್ಡಿ ಪತ್ನಿ ಆಶಾ ರಾಯರಡ್ಡಿ, ಜಿಪಂ ಮಾಜಿ ಸದಸ್ಯೆ ಗಿರಿಜಾ ರೇವಣಪ್ಪ ಸಂಗಟಿ, ಗಣ್ಯರಾದ ಜಯಶ್ರೀ ಕಂದಕೂರ, ಶಾರದಾ ಸಾಲಭಾವಿ, ಜಯಶ್ರೀ ಅರಕೇರಿ, ಮಲ್ಲಮ್ಮ ಗೊಂದಿ, ಫರಿದಾಬೇಗಂ, ಶರಣಮ್ಮ ಪೂಜಾರ, ಪ್ರವೀಣಾ ವಣಗೇರಿ, ಸಾವಿತ್ರಿ, ಮಹಾದೇವಿ ಹಾಗೂ ಫೌಂಡೇಶನ್‌ನ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.