ಕನ್ನಡಪ್ರಭ ವಾರ್ತೆ ಮಂಡ್ಯ
ಕಳೆದ ಹತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ ಮುಚ್ಚಿರುವ 300 ಸರ್ಕಾರಿ ಶಾಲೆಗಳನ್ನು ಕೂಡಲೇ ಕ್ರಮ ವಹಿಸಿ ತೆರೆಯಬೇಕು. ಇಲ್ಲದಿದ್ದರೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಗಣಿ ಎರಚುವ, ಕುತ್ತಿಗೆ ಪಟ್ಟಿ ಹಿಡಿದು ಕೇಳುವುದಕ್ಕೂ ಹಿಂಜರಿಯುವುದಿಲ್ಲ ಎಂದು ರೈತಸಂಘದ ಸಂತೋಷ್‌ಕುಮಾರ್ ಎಚ್ಚರಿಕೆ ನೀಡಿದರು.ರಾಜ್ಯ ಸರ್ಕಾರ ಪ್ರತಿ ವರ್ಷ ಶಿಕ್ಷಣ ಕ್ಷೇತ್ರಕ್ಕೆ 42 ಸಾವಿರ ಕೋಟಿ ರು. ಖರ್ಚು ಮಾಡುತ್ತಿದೆ. ನವೋದಯ ಶಾಲೆಯವರು ಒಂದು ಮಗುವಿಗೆ 25 ಸಾವಿರ ರು. ಖರ್ಚು ಮಾಡಿದರೆ, ಸರ್ಕಾರ ಒಂದು ಮಗುವಿಗೆ 53 ಸಾವಿರ ರು.ವರೆಗೆ ಖರ್ಚು ಮಾಡುತ್ತಿದೆ. ಹಾಗಾದರೆ ಈ ದುಡ್ಡು ಎಲ್ಲಿ ಹೋಗುತ್ತಿದೆ. ಸರ್ಕಾರಿ ಶಾಲೆಗಳು ಏಕೆ ಬಾಗಿಲು ಮುಚ್ಚುತ್ತಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿ ಕಾಡುತ್ತಿದೆ. ಇರುವ ಶಿಕ್ಷಕರೂ ಮೊಟ್ಟೆ ಎಣಿಸುವುದು, ಸಾಮಾನು ಸರಂಜಾಮುಗಳನ್ನು ತರುವುದು, ಅಡುಗೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ವಿಷಯವಾರು ಶಿಕ್ಷಕರನ್ನು ನೇಮಕ ಮಾಡಿದರೆ ಸರ್ಕಾರಿ ಶಾಲೆಗಳನ್ನು ಉಳಿಸುವುದಕ್ಕೆ ಸಾಧ್ಯವಿದೆ. ಆದರೆ, ಸರ್ಕಾರ ಆ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸಿದೆ. ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಎಲ್ಲ ವಿಷಯಗಳ ಬೋಧನೆಯ ವಿಡಿಯೋ, ನೋಟ್ಸ್‌ಗಳನ್ನು ಕೊಡುವುದಾಗಿ ಹೇಳಿದರೂ ಜಿಲ್ಲಾಡಳಿತ ಕೂಡ ಅದಕ್ಕೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ರೈತ ಸಂಘದ ಮುಖಂಡ ಇಂಡುವಾಳು ಚಂದ್ರಶೇಖರ್ ಮಾತನಾಡಿ, ರೈತರು ಕಷ್ಟಪಟ್ಟು ಬೆಳೆದ ಕಬ್ಬನ್ನು ಮೈಷುಗರ್ ಕಾರ್ಖಾನೆ ಸಕಾಲದಲ್ಲಿ ಅರೆಯುತ್ತಿಲ್ಲ. ನಿಂತು ನಿಂತು ಕಾರ್ಖಾನೆ ಓಡುವುದರಿಂದ ಇಳುವರಿ ಕುಸಿತ ಕಾಣುತ್ತಿದೆ. ಒಪ್ಪಿಗೆ ಕಬ್ಬನ್ನು ನುರಿಸುವಲ್ಲೂ ಆಸಕ್ತಿ ತೋರಿಸುತ್ತಿಲ್ಲ. ಕಬ್ಬು ಅರೆಯುವುದು ವಿಳಂಬವಾಗಿರುವ ಬಗ್ಗೆ ಅಧ್ಯಕ್ಷರನ್ನು ಪ್ರಶ್ನಿಸಿದರೆ ಬೇರೆ ಕಾರ್ಖಾನೆಗೆ ಸಾಗಿಸುವಂತೆ ಅಹಂಕಾರದ ಮಾತುಗಳನ್ನಾಡುತ್ತಾರೆ. ಅಧ್ಯಕ್ಷರು-ವ್ಯವಸ್ಥಾಪಕ ನಿರ್ದೇಶಕರು ಕಾರ್ಖಾನೆಯಲ್ಲೇ ಇರುವುದಿಲ್ಲ ಎಂದು ದೂರಿದರು.
ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿದ್ದರೂ ಕೊನೆಯ ಭಾಗಗಳಾದ ಮದ್ದೂರು, ಕೊಪ್ಪ, ಮಳವಳ್ಳಿ ನಾಲೆಗಳಲ್ಲಿ ನೀರು ಒದಗಿಸುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ. ಅಣೆಕಟ್ಟೆ ಕೆಳಭಾಗದಲ್ಲಿ ಸರ್ಕಾರ ಕೈಗೊಂಡಿರುವ ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಕಾವೇರಿ ಆರತಿ ಯೋಜಜನೆ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಗೋಷ್ಠಿಯಲ್ಲಿ ಶಿವಳ್ಳಿ ಚಂದ್ರಶೇಖರ್, ಬೋರಲಿಂಗೇಗೌಡ, ಹಲ್ಲೇಗೆರೆ ಶಿವರಾಮು ಇದ್ದರು.