ಹೊನ್ನಾವರ: ಎಲ್ಲ ದಾನಕ್ಕಿಂತ ದೊಡ್ಡದಾನವು ವಿದ್ಯಾದಾನವಾಗಿದೆ. ದಿ. ಪಿ.ಜಿ. ಭಟ್ ಅವರ ಹೆಸರಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೊತ್ಸಾಹ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು.
ಇತ್ತೀಚೆಗೆ ತಾಲೂಕಿನ ಶ್ರೀಕ್ಷೇತ್ರ ಸುಬ್ರಹ್ಮಣ್ಯ ಮಯೂರ ಸಭಾಭವನದಲ್ಲಿ ಪಿ.ಜಿ. ಭಟ್ ಮೆಮೋರಿಯಲ್ ಟ್ರಸ್ಟ್ ಮುಗ್ವಾ ವತಿಯಿಂದ ದ್ವಿತೀಯ ವರ್ಷದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣ ಆರ್ಥಿಕ ಮುಗ್ಗಟ್ಟಿನಿಂದ ಮೊಟಕುಗೊಳ್ಳದಂತೆ ನೋಡಿಕೊಳ್ಳುವ ಅಗತ್ಯವಿದೆ. ಶಿಕ್ಷಣದ ಜತೆ, ಕಲೆ, ಕ್ರೀಡೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದರು.ನಿವೃತ್ತ ಉಪನ್ಯಾಸಕ, ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ, ಜಾತ್ಯತೀತ ನೆಲೆಯಲ್ಲಿ ವಿದ್ಯಾರ್ಥಿವೇತನ ನೀಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ತಂದೆ ಪಿ.ಜಿ. ಭಟ್ಟ ಅಗ್ನಿಯವರ ನೆನಪಲ್ಲಿ ಅವರ ಮಗ ಕಾರ್ತಿಕ್ ಭಟ್ಟ ಮಾಡುತ್ತಿರುವ ಕೆಲಸ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದರು.ಕಾಂಗ್ರೆಸ್ ಮುಖಂಡರಾದ ಸುಷ್ಮಾ ರಾಜಗೋಪಾಲ ರೆಡ್ಡಿ ಮಾತನಾಡಿ, ಶಿಕ್ಷಣ ಜೀವನದಲ್ಲಿ ಬಹುಮುಖ್ಯವಾಗಿದೆ. ನಾವು ದುಡಿದ ಹಣ ಹಂಚಿಕೊಂಡು ತಿನ್ನಬೇಕು. ಆರೋಗ್ಯ ಶಿಕ್ಷಣಕ್ಕೆ ನೆರವಾಗಬೇಕು. ತನ್ನ ವಿದ್ಯಾರ್ಥಿ ಜೀವನದಲ್ಲಿ ಕಂಡ ಕಷ್ಟವನ್ನು ಅರಿತು, ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿರುವುದು ಉತ್ತಮಕಾರ್ಯವಾಗಿದೆ ಎಂದರು.ನ್ಯಾಯವಾಧಿ ವಿಕ್ರಂ ನಾಯ್ಕ ಮಾತನಾಡಿದರು. ೫೬ ವಿದ್ಯಾರ್ಥಿಗಳಿಗೆ ತಲಾ ₹೫ ಸಾವಿರ ನಗದನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ನಡೆದ ಕನಕಾಂಗಿ ಕಲ್ಯಾಣ ಪ್ರಸಂಗದ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರಿಗೆ ಮುದ ನೀಡಿತು.ಸುಬ್ರಹ್ಮಣ್ಯ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಆರ್. ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಿಎಲ್‌ಡಿ ನಿರ್ದೇಶಕ ಯೊಗೀಶ ರಾಯ್ಕರ್, ನ್ಯೂ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರಘು ಪೈ, ಗ್ರಾಪಂ ಮಾಜಿ ಸದಸ್ಯ ಕೃಷ್ಣ ಗೌಡ ಹಳಗೇರಿ, ದೈಹಿಕ ಶಿಕ್ಷಕ ಮಹೇಶ ಶೆಟ್ಟಿ, ಪಿ.ಜಿ. ಭಟ್ ಕುಟುಂಬದವರಾದ ಪಾರ್ವತಿ ಭಟ್, ಗೋವಿಂದ ಭಟ್, ಕಾರ್ತಿಕ ಭಟ್ ಉಪಸ್ಥಿತರಿದ್ದರು.ಎಚ್.ಎಲ್. ನಗರೆ ಸ್ವಾಗತಿಸಿದರು. ಕೃಷ್ಣಾನಂದ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾದರ ಕಡತೋಕಾ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.