ಶಿಕ್ಷಣ ನಿಂತ ನೀರಾಗದೇ, ಚಲನಶೀಲವಾಗಿರಲಿ : ಸುಂದ್ರೇಶ್‌

KannadaprabhaNewsNetwork |  
Published : Nov 24, 2025, 02:30 AM IST
ಚಿಕ್ಕಮಗಳೂರಿನ ಬಿ.ಇಡಿ ಕಾಲೇಜಿನ ಸಭಾಂಗಣದಲ್ಲಿ ನಡೆದ ನಗರ ಮಟ್ಟದ ಅಂತರ ಪ್ರೌಢಶಾಲಾ ಚರ್ಚಾ ಸ್ಪರ್ಧೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. | Kannada Prabha

ಸಾರಾಂಶ

ಚಿಕ್ಕಮಗಳೂರು, ಶಿಕ್ಷಣ ನಿಂತ ನೀರಾಗದೇ, ಚಲನಶೀಲವಾಗಿರಬೇಕು. ಎಲ್ಲಾ ಮೂಲಗಳಿಂದ ಸಿಗುವ ಜ್ಞಾನದ ಸಂಪತ್ತನ್ನು ಸೆಳೆದುಕೊಳ್ಳಲು ವಿದ್ಯಾರ್ಥಿಗಳು ಸ್ವಯಂ ಮುಂದಾಗಬೇಕು ಎಂದು ಜಿಲ್ಲಾ ಡಯಟ್ ಪ್ರಾಂಶುಪಾಲ ವೈ.ವಿ. ಸುಂದ್ರೇಶ್‌ ಕರೆ ನೀಡಿದರು.

- ನಗರ ಮಟ್ಟದ ಅಂತರ ಪ್ರೌಢ ಶಾಲಾ ಚರ್ಚಾ ಸ್ಪರ್ಧೆ, ಪ್ರಶಸ್ತಿ ಪ್ರದಾನ ಸಮಾರಂಭ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶಿಕ್ಷಣ ನಿಂತ ನೀರಾಗದೇ, ಚಲನಶೀಲವಾಗಿರಬೇಕು. ಎಲ್ಲಾ ಮೂಲಗಳಿಂದ ಸಿಗುವ ಜ್ಞಾನದ ಸಂಪತ್ತನ್ನು ಸೆಳೆದುಕೊಳ್ಳಲು ವಿದ್ಯಾರ್ಥಿಗಳು ಸ್ವಯಂ ಮುಂದಾಗಬೇಕು ಎಂದು ಜಿಲ್ಲಾ ಡಯಟ್ ಪ್ರಾಂಶುಪಾಲ ವೈ.ವಿ. ಸುಂದ್ರೇಶ್‌ ಕರೆ ನೀಡಿದರು.ನಗರದ ಬಿ.ಇಡಿ ಕಾಲೇಜಿನ ಸಭಾಂಗಣದಲ್ಲಿ ಎಸ್.ಎಸ್.ಆರ್.ಪ್ರಾಯೋಗಿಕ ಪ್ರೌಢಶಾಲೆ, ಮಲೆನಾಡು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆದ ನಗರ ಮಟ್ಟದ ಅಂತರ ಪ್ರೌಢಶಾಲಾ ಚರ್ಚಾಸ್ಪರ್ಧೆ, ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ವಿದ್ಯೆ ಸಾಧಕನ ಸ್ವತ್ತೇ ಹೊರತು, ಸೋಮಾರಿಗಳದ್ದಲ್ಲ. ಸತತ ಪ್ರಯತ್ನದಿಂದ ಸಾಧನೆ ಮಾಡಿದರೆ ಅಂದುಕೊಂಡ ಗುರಿ ತಲುಪಲು ಸಾಧ್ಯ. ಹಾಗಾಗಿ ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರ ಉತ್ತೇಜಿಸಲು ಚರ್ಚಾ ಸ್ಪರ್ಧೆ ಏರ್ಪಡಿಸಿ ಪ್ರಚಲಿತ ವಿದ್ಯಮಾನವನ್ನು ತಿಳಿಸುವ ಕಾರ್ಯ ಶ್ಲಾಘನೀಯ ಎಂದರು.

ವೇಗದ ಬದುಕಿನಲ್ಲಿ ಬಹಳಷ್ಟು ಸವಾಲುಗಳಿವೆ. ಮಕ್ಕಳು ಭವಿಷ್ಯದಲ್ಲಿ ಸಣ್ಣ ಗುರಿಗೆ ಸೀಮಿತರಾಗದೇ ದೊಡ್ಡಮಟ್ಟಿನ ಗುರಿ ಹೊಂದಿರಬೇಕು. ಆ ನಿಟ್ಟಿನಲ್ಲಿ ಶಾಲಾಡಳಿತ ಪರಿಣಿತ ಶಿಕ್ಷಕರ ಸೇವೆ ನೀಡಿದ್ದು, ಪಾಲಕರು ಪ್ರೋತ್ಸಾಹ ಅಗತ್ಯ. ಜೊತೆಗೆ ಚೈತನ್ಯ ಭರಿತ ಸ್ಪರ್ಧೆಗಳನ್ನು ಮಕ್ಕಳ ಮಸ್ತಕದಲ್ಲಿ ಅಣಿಗೊಳಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.ಸಮಾಜದ ಬಡ ಹಾಗೂ ಮಧ್ಯಮ ವರ್ಗದ ಜನರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಸಂಸ್ಥೆ ಸಕಲ ಸವಲತ್ತುನ್ನು ಒದಗಿಸಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಒತ್ತು ನೀಡುತ್ತಿದೆ. ಆ ನಿಟ್ಟಿನಲ್ಲಿ ಆಯಸ್ಕಂತ ಕಬ್ಬಿಣದ ಹದಿರು ಸೆಳೆಯುವಂತೆ, ಮಕ್ಕಳು ವಿದ್ಯೆಯೆಂಬ ಜ್ಞಾನ ಸೆಳೆದುಕೊಂಡು ದೇಶದ ಸತ್ಪ್ರಜೆಗಳಾಗಬೇಕು ಎಂದು ತಿಳಿಸಿದರು.ಎಸ್.ಎಸ್.ಆರ್.ಡಿ.ಎಚ್.ಎಸ್. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ವಿ.ಷಡಕ್ಷರಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ತಂತ್ರ ಜ್ಞಾನದ ಮಹತ್ವ ಬಹಳಷ್ಟಿದೆ. ಮಕ್ಕಳಿಗೆ ಉತ್ತಮವಾಗಿ ಬೋಧಿಸಲು ಶಿಕ್ಷಕರಿಗೆ ಸಹಾಯವಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯದ ಚಟುವಟಿಕೆಗೆ ತಂತ್ರಜ್ಞಾನ ಬಳಸಿಕೊಳ್ಳಬೇಕು ಹೊರತು, ಅತಿಯಾದ ಚಟಕ್ಕೆ ಒಳಗಾಗದೇ ಜವಾಬ್ದಾರಿ ನಿರ್ವಹಿಸಬೇಕು ಎಂದರು.ಎಸ್.ಎಸ್.ಆರ್.ಡಿ.ಎಚ್.ಎಸ್. ಮುಖ್ಯೋಪಾಧ್ಯಾಯ ಬಿ.ಎಂ.ಸದಾಶಿವಮೂರ್ತಿ ಮಾತನಾಡಿ, ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಕಳೆದ ಎರಡುವರೆ ದಶಕಗಳಿಂದ ಅಂತರ ಪ್ರೌಢಶಾಲಾ ಚರ್ಚಾಸ್ಪರ್ಧೆ ಏರ್ಪಡಿಸಿದೆ. ಅದರಂತೆ ಈ ಸಾಲಿನಲ್ಲಿ ವಿವಿಧ ಶಾಲೆಗಳಿಂದ 20 ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆ ಹೊರಹಾಕಲು ವೇದಿಕೆ ಸೃಷ್ಟಿಸಲಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಇ.ಎಸ್. ಗೌರವಾಧ್ಯಕ್ಷ ಎನ್.ಕೇಶವಮೂರ್ತಿ ವಹಿಸಿದ್ದರು. ಇದೇ ವೇಳೆ ಚರ್ಚಾ ಸ್ಪರ್ಧೆ ಪರವಾಗಿ ಬೀಕನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಪ್ರ), ಪ್ರಾಯೋ ಗಿಕ ಪ್ರೌಢಶಾಲೆ (ದ್ವಿ), ಸಂತ ಜೋಸೆಫರ ಪ್ರೌಢಶಾಲೆ (ತೃ) ಮತ್ತು ವಿರೋಧವಾಗಿ ಸಂತ ಜೋಸೆಫರ ಪ್ರೌ ಢಶಾಲೆ (ಪ್ರ), ಬೀಕನಹಳ್ಳೀ ಮೂರಾರ್ಜಿ ದೇಸಾಯಿ ವಸತಿ ಶಾಲೆ (ದ್ವಿ), ಪ್ರಾಯೋಗಿಕ ಪ್ರೌಢಶಾಲೆ (ತೃ) ಸ್ಥಾನ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಎಂ.ಇ.ಎಸ್. ಕಚೇರಿ ವ್ಯವಸ್ಥಾಪಕಿ ಶ್ರೀಲಕ್ಷ್ಮೀ, ತೀರ್ಪುಗಾರ ಹನುಮಂತಪ್ಪ, ಪ್ರಾಯೋಗಿಕ ಪ್ರೌಢಶಾಲೆ ಸಹ ಶಿಕ್ಷಕಿ ಟಿ.ಜೆ.ಯಶೋಧ, ಕಂಪ್ಯೂಟರ್ ಶಿಕ್ಷಕಿ ಎಂ.ವಿ.ಪ್ರತಿಮಾ, ವಿವಿಧ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.22 ಕೆಸಿಕೆಎಂ 3ಚಿಕ್ಕಮಗಳೂರಿನ ಬಿ.ಇಡಿ ಕಾಲೇಜಿನ ಸಭಾಂಗಣದಲ್ಲಿ ನಡೆದ ನಗರ ಮಟ್ಟದ ಅಂತರ ಪ್ರೌಢಶಾಲಾ ಚರ್ಚಾ ಸ್ಪರ್ಧೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

PREV

Recommended Stories

ಕನ್ನಡ ಪತ್ರಿಕೆಗಳ ಸಂಗ್ರಹಕಾರ ‘ಪೇಪರ್ ಬ್ಯಾಂಕ್ ಶಿವಕುಮಾರ್’
ಮುಂದುವರಿದ ಉಪವಾಸ ಸತ್ಯಾಗ್ರಹ: ರೈತನ ಅರೋಗ್ಯದಲ್ಲಿ ಏರುಪೇರು