ಹುಬ್ಬಳ್ಳಿ: ರಾಜ್ಯದಲ್ಲಿ ದಲಿತ ಸಮುದಾಯದವರು ಮುಖ್ಯಮಂತ್ರಿ ಆಗಬೇಕೆನ್ನುವ ಕೂಗು ಮೊದಲಿನಿಂದಲೂ ಇದೆ. ಹೀಗಾಗಿ, ಸಿಎಂ ಬದಲಾವಣೆ ಎಂದಾದರೆ ಡಾ. ಜಿ. ಪರಮೇಶ್ವರ ಅವರು ಮುಂದಿನ ಮುಖ್ಯಮಂತ್ರಿಗಳಾಗಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಮುಖ್ಯಮಂತ್ರಿ ದಲಿತ ಸಮುದಾಯದವರೇ ಆಗಬೇಕು ಎಂದು ಸಮುದಾಯದವರು ಒತ್ತಾಯಿಸುತ್ತಿದ್ದಾರೆ. ಜಿ. ಪರಮೇಶ್ವರ ಅವರು ಸಮುದಾಯದ ಪ್ರಭಾವಿ ಹಾಗೂ ಹಿರಿಯ ನಾಯಕರಾಗಿದ್ದಾರೆ. ಹೀಗಾಗಿ, ಅವರು ಮುಖ್ಯಮಂತ್ರಿಯಾಗಬೇಕು ಎನ್ನುವುದರಲ್ಲಿ ಯಾವ ತಪ್ಪಿಲ್ಲ. ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಯುತ್ತಿದ್ದು, ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ, ನಾವೆಲ್ಲ ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ. ಬಿಜೆಪಿಯವರು ಅನಗತ್ಯವಾಗಿ ರಾಜ್ಯ ಸರ್ಕಾರ, ಸಚಿವರ ಬಗ್ಗೆ ಹೇಳಿಕೆ ನೀಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಯತ್ನಾಳ ಸಿಎಂ ಆಗುವ ಕನಸು ಕಾಣಲಿ: ಅಬ್ಬಯ್ಯ ಲೇವಡಿಹುಬ್ಬಳ್ಳಿ: ಮುಖ್ಯಮಂತ್ರಿ ಖುರ್ಚಿ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೇಕಾಬಿಟ್ಟಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಅವರು ಹೀಗೆಯೇ ಮುಖ್ಯಮಂತ್ರಿಯಾಗುವ ಕನಸ್ಸು ಕಾಣುತ್ತಿರಲಿ ಎಂದು ಶಾಸಕ ಪ್ರಸಾದ ಅಬ್ಬಯ್ಯ ವ್ಯಂಗ್ಯವಾಡಿದರು.ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಯಾಗುವ ಕನಸ್ಸು ಯಾರು ಬೇಕಾದರೂ ಕಾಣಬಹುದು. ಆದರೆ, ಈಗಿರುವ ಮುಖ್ಯಮಂತ್ರಿಗಳ ಬಗ್ಗೆ ಬೇಕಾಬಿಟ್ಟಿಯಾಗಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಯತ್ನಾಳ ಮುಖ್ಯಮಂತ್ರಿಯೂ ಆಗುವುದಿಲ್ಲ. ಅವರು ಬರಿ ಕನಸು ಕಾಣುತ್ತಾರೆ ಅಷ್ಟೆ ಎಂದರು.ನ. 29ರಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿಗಳಿಂದ ಆಶ್ರಯ ಮನೆಗಳ ಉದ್ಘಾಟನೆ ಆಯೋಜಿಸಲಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ಅಂದಿನ ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ಆಹ್ವಾನಿಸಲಾಗಿತ್ತು. ಆದರೆ, ಅವರ ದಿನಾಂಕ ಹೊಂದಿಣಿಕೆಯಾಗದ ಹಿನ್ನೆಲೆಯಲ್ಲಿ ಉದ್ಘಾಟನೆಯ ದಿನಾಂಕ ಮುಂದೂಡಲಾಗಿದೆ. ಬೆಳಗಾವಿ ಅಧಿವೇಶನದ ಬಳಿಕ ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿದರು.