ಕನ್ನಡಪ್ರಭ ವಾರ್ತೆ ಬೆಳಗಾವಿ
ಕನ್ನಡವೇ ನಮ್ಮ ಆತ್ಮ, ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮ ಶಕ್ತಿ. ಆತ್ಮ ಮತ್ತು ಶಕ್ತಿ ಎರಡನ್ನು ಒಗ್ಗೂಡಿಸಿ ತಾಂತ್ರಿಕ ಶಿಕ್ಷಣ ಎಂಬ ಮಾರ್ಗದಿಂದ ಮುಂದಿನ ಪೀಳಿಗೆಗೆ ದೃಢವಾದ ಭವಿಷ್ಯ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್ ಎಸ್. ಹೇಳಿದರು.ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆದ ವಿಟಿಯು ಕನ್ನಡ ಹಬ್ಬ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಪವಿತ್ರ ದಿನದಂದು ನಮ್ಮ ನಾಡಿಗೆ, ನಮ್ಮ ಕನ್ನಡಕ್ಕೆ ಮತ್ತು ನಮ್ಮ ವಿಶ್ವವಿದ್ಯಾಲಯದ ಪ್ರಗತಿಗೆ ಶ್ರಮಿಸೋಣ ಎಂಬ ಪ್ರತಿಜ್ಞೆ ಕೈಗೊಳ್ಳೋಣ ಎಂದು ಕೋರಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 1998ರಲ್ಲಿ ಸ್ಥಾಪನೆಯಾಗಿ ಇಂದು ದೇಶದ ಅತಿ ದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ನಮ್ಮ ವಿಶ್ವವಿದ್ಯಾಲಯವು ಶಿಕ್ಷಣದಲ್ಲಿ ಗುಣಮಟ್ಟ, ಪಾರದರ್ಶಕತೆ, ನವೀನತೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೇಲೆ ನಿಂತಿದೆ. ನಾವು ಎಲ್ಲರೂ ನಮ್ಮ ನಾಡು, ನಮ್ಮ ಭಾಷೆ, ನಮ್ಮ ವಿಶ್ವವಿದ್ಯಾಲಯ ಎಂಬ ಭಾವದಿಂದ, ಜ್ಞಾನ, ಸಂಶೋಧನೆ ಮತ್ತು ನಿಸ್ವಾರ್ಥ ಸೇವೆಯ ಮೂಲಕ ನಾಡಿನ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ರಾಜಶ್ರೀ ಹಲಗೆಕರ್, ಪುಂಡಲೀಕ ಶಾಸ್ತ್ರಿ ಮತ್ತು ಶ್ರೀ ಸನ್ನಿಂಗಪ್ಪ ಮುಷೆನಗೋಳ ಅವರನ್ನು ಸನ್ಮಾನಿಸಲಾಯಿತು.
ಸ್ವಚ್ಛತಾ ಸಿಬ್ಬಂದಿಗೆ ಹೃದಯಸ್ಪರ್ಶಿ ಸನ್ಮಾನ:ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆಗೆ ಪುಷ್ಪಾರ್ಪಣೆ ಮಾಡುವ ಮೂಲಕ ಸಾಂಕೇತಿಕವಾಗಿ ಹಬ್ಬವನ್ನು ಆರಂಭಿಸಲಾಯಿತು. ನಂತರ, ಡೊಳ್ಳು ಕುಣಿತ ಮತ್ತು ವೀರಗಾಸೆ ಕಲಾ ತಂಡಗಳ ಪ್ರದರ್ಶನದೊಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಮುಖ್ಯ ವೇದಿಕೆಗೆ ಕರೆತರಲಾಯಿತು. ವಿಟಿಯುನ ಎಲ್ಲ ಸ್ವಚ್ಛತಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.