ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ 35ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿ, ವಿದ್ಯಾರ್ಥಿಗಳೇ ಸೋಲುಗಳು ಜೀವನದ ಭಾಗ. ಆದರೆ, ಅವುಗಳಿಂದ ಕಲಿತು ಮುಂದೆ ಸಾಗುವುದೇ ನಿಜವಾದ ಯಶಸ್ಸು. ಇಂದಿನ ಈ ಸಂದರ್ಭವು ನಿಮ್ಮ ವರ್ಷಗಳ ಪರಿಶ್ರಮದ ಫಲವಾಗಿದೆ. ಇಂದು ನೀವು ಪಡೆಯುತ್ತಿರುವ ಪದವಿಯು ಕೇವಲ ಜ್ಞಾನದ ಸಂಕೇತವಲ್ಲ, ಸಮಾಜಕ್ಕೆ ಉತ್ತಮ ದಿಕ್ಕು ನೀಡಬಲ್ಲ ನಿಮ್ಮಲ್ಲಿರುವ ಸಾಮರ್ಥ್ಯದ ಪ್ರತೀಕವಾಗಿದೆ ಎಂದರು.
ಕುವೆಂಪು ಅವರ ‘ವಿಶ್ವಮಾನವ’ ಆದರ್ಶ ಮತ್ತು ‘ಮಾನವತಾವಾದವೇ ಶ್ರೇಷ್ಠತೆಯ ಮಾನದಂಡ’ ಎಂಬ ಸಂದೇಶವು ನಮ್ಮ ಆಲೋಚನೆಗಳ ಗಡಿಗಳಿಗೆ ಸೀಮಿತವಾಗದೆ ವಿಶಾಲವಾಗಿರಬೇಕು ಎಂದು ಕಲಿಸುತ್ತದೆ. ಹೊಸ ಶಿಕ್ಷಣ ನೀತಿ (ಎನ್‌ಇಪಿ) ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಕೌಶಲ್ಯ ಆಧಾರಿತ ಮತ್ತು ಸಮಗ್ರವಾಗಿಸಿದೆ. ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ, ಅದು ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯ ಅಡಿಪಾಯವಾಗಿದೆ ಎಂದರು.ರಾಷ್ಟ್ರೀಯ ಮಾನ್ಯತಾ ಮಂಡಳಿಯ ಅಧ್ಯಕ್ಷ ಪ್ರೊ.ಅನಿಲ್ ಡಿ.ಸಹಸ್ರಬುದ್ಧೆ ಮಾತನಾಡಿ, ಇಂದು ಅನೇಕ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ಇದರಿಂದ ಅವರ ಪೋಷಕರು, ಗುರುಗಳು ಹಮ್ಮೆಪಡುತ್ತಿದ್ದಾರೆ. ಆದರೆ, ಇದು ಶಿಕ್ಷಣದ ಒಂದು ಹಂತ ಮಾತ್ರ. ಮುಂದೆ ಅನೇಕ ಹಂತಗಳು ನಿಮಗಾಗಿ ಕಾಯುತ್ತಿವೆ. ಕಲಿಕೆಯನ್ನು ಮುಂದುವರಿಸಿ ಉನ್ನತ ಮಟ್ಟಕ್ಕೇರಿ ಸಮಾಜದಿಂದ ಪಡೆದಿದ್ದಕ್ಕಿಂತ ಹೆಚ್ಚನ್ನು ಹಿಂತಿರುಗಿಸುವ ಪ್ರಯತ್ನ ಮಾಡಿ ಎಂದು ಕರೆ ನೀಡಿದರು.
ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಂತಹ ಯೋಜನೆಗಳು ಯುವಜನರಿಗೆ ಅಪಾರ ಅವಕಾಶಗಳನ್ನು ಸೃಷ್ಟಿಸಿವೆ. ನೂರಕ್ಕೂ ಹೆಚ್ಚು ರಾಷ್ಟ್ರಗಳ ಗಣ್ಯರು ಹಾಗೂ ಉದ್ದಿಮೆಗಳ ಪ್ರಮುಖರು ನಮ್ಮ ದೇಶದತ್ತ ನೋಡುತ್ತಿದ್ದಾರೆ. ಶೀಘ್ರದಲ್ಲೇ ಫ್ರಾನ್ಸ್‌ನಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಭಾರತದ ಸ್ಟಾರ್ಟ್-ಅಪ್ ಪ್ರತಿಭೆಗಳು ಭಾಗವಹಿಸಲಿರುವುದು ನಮ್ಮ ದೇಶದ ಹೆಮ್ಮೆಯ ವಿಷಯ ಎಂದರು.
ವಿಶ್ವವಿದ್ಯಾಲಯಗಳು ತಮ್ಮ ಕಾಲ ಮೇಲೆ ನಿಲ್ಲುವುದೇ ಕಷ್ಟವಾಗಿರುವ ಈ ಪರಿಸ್ಥಿತಿಯಲ್ಲಿ ತಜ್ಞರ ಸಮಿತಿ ರಚಿಸಿ ಸವಾಲುಗಳ ಅಧ್ಯಯನ ಮಾಡಬೇಕೆಂಬ ಚಿಂತನೆ ಇದೆ. ಎಐಸಿಟಿ ಸಂಖ್ಯೆ ಹೆಚ್ಚಿಸುತ್ತಿರುವ ಬಗ್ಗೆ ಕಳವಳಗೊಂಡು ಸಮಿತಿ ರಚನೆ ಮಾಡಲಾಗುತ್ತಿದೆ ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ವಿಶ್ವವಿದ್ಯಾಲಯದ ವರದಿ ವಾಚಿಸಿದರು.
ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್
ಚಿನ್ನದ ಪದಕಗಳಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ
ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಎಚ್.ಎಂ.ಅಭಿಷೇಕ್ (ಎಂ.ಎ. ಕನ್ನಡ): ಒಟ್ಟು 10 ಚಿನ್ನದ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆಯುವ ಮೂಲಕ ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರಕ್ಷಾ (ಎಂ.ಎಸ್ಸಿ. ಪರಿಸರ ವಿಜ್ಞಾನ): ಇವರು 7 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಸೃಷ್ಠಿ ಆರ್. (ಎಂ.ಎಸ್ಸಿ. ಜೈವಿಕ ತಂತ್ರಜ್ಞಾನ): ಇವರು 6 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ಸಹನಾ ಗಣೇಶ್ ಶೇಟ್ (ಎಂ.ಬಿ.ಎ): ಇವರು 5 ಚಿನ್ನದ ಪದಕ ಹಾಗೂ 1 ನಗದು ಬಹುಮಾನ ಪಡೆದಿದ್ದಾರೆ. ಸಜನ ಎಸ್. (ಎಂ.ಎ. ಸಮಾಜಶಾಸ್ತ್ರ): ಇವರು 5 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಇವರಲ್ಲದೆ, ಗಣಿತಶಾಸ್ತ್ರ ವಿಭಾಗದ ಅಭಿಲಾಷ್ ಎಲ್. ಅವರು 4 ಚಿನ್ನದ ಪದಕ ಮತ್ತು 2 ನಗದು ಬಹುಮಾನಗಳನ್ನು ಪಡೆದರೆ, ಇತರ 12ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಲಾ 3 ರಿಂದ 4 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.ಘಟಿಕೋತ್ಸವದ ಪ್ರಮುಖ ಅಂಕಿ-ಅಂಶಗಳು:
ಒಟ್ಟು ಪದವೀಧರರು: ಈ ಘಟಿಕೋತ್ಸವದಲ್ಲಿ ಒಟ್ಟು 16,955 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಇದರಲ್ಲಿ 7,015 ಪುರುಷರು ಹಾಗೂ 9,940 ಮಹಿಳೆಯರು ಸೇರಿದ್ದಾರೆ.ಚಿನ್ನದ ಪದಕಗಳ ವಿವರ: ಒಟ್ಟು 155 ಚಿನ್ನದ ಪದಕಗಳನ್ನು ಹಂಚಲಾಗಿದ್ದು, ಅದರಲ್ಲಿ 68 ವಿದ್ಯಾರ್ಥಿನಿಯರು ಹಾಗೂ 11 ವಿದ್ಯಾರ್ಥಿಗಳು ಪದಕಗಳನ್ನು ಹಂಚಿಕೊಂಡಿದ್ದಾರೆ.
ಪಿ.ಎಚ್‌ಡಿ ಪದವಿ: ಒಟ್ಟು 163 ಅಭ್ಯರ್ಥಿಗಳು ಪಿ.ಹೆಚ್‌ಡಿ ಪದವಿಗೆ ಅರ್ಹರಾಗಿದ್ದು, ಇದರಲ್ಲಿ 106 ಪುರುಷರು ಹಾಗೂ 57 ಮಹಿಳೆಯರಿದ್ದಾರೆ.ವಿಜ್ಞಾನ ನಿಕಾಯ: 84 ಅಭ್ಯರ್ಥಿಗಳು (ಅತಿ ಹೆಚ್ಚು). ಕಲಾ ನಿಕಾಯ: 63 ಅಭ್ಯರ್ಥಿಗಳು.
ಶಿಕ್ಷಣ ನಿಕಾಯ: 9 ಅಭ್ಯರ್ಥಿಗಳು.ವಾಣಿಜ್ಯ ನಿಕಾಯ: 6 ಅಭ್ಯರ್ಥಿಗಳು.
ಕಾನೂನು ನಿಕಾಯ: 1 ಅಭ್ಯರ್ಥಿ ಇದ್ದಾರೆ.