ಶ್ರೀ ಸೋಮೇಶ್ವರೋತ್ಸವ-2024 ಉದ್ಘಾಟಿಸಿದ ಬಸವನ ಬಾಗೇವಾಡಿ ಸಾಹಿತಿ ಅಶೋಕ ಹಂಚಲಿ
ದೇಶಪ್ರೇಮ, ಮಾತೃಪ್ರೇಮ ಹುಟ್ಟಿಸದ ಯಾವುದೇ ಶಿಕ್ಷಣ ವ್ಯರ್ಥವಾಗುತ್ತದೆ. ವಿದೇಶಿ ಚಿಂತಕರ ಕಣ್ಣಲ್ಲಿ ಭಾರತವು ಸದಾ ಪ್ರಜ್ವಲಿಸುವ ಜ್ಯೋತಿಯಾಗಿ ಕಂಗೊಳಿಸುತ್ತಲೇ ಬಂದಿದೆ ಎಂದು ಬಸವನ ಬಾಗೇವಾಡಿಯ ಹಿರಿಯ ಬೋಧಕ, ಸಾಹಿತಿ ಅಶೋಕ ಹಂಚಲಿ ಹೇಳಿದರು.
ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಶುಕ್ರವಾರದಿಂದ ಆರಂಭವಾದ ಮೂರು ದಿನಗಳ ಶ್ರೀ ಸೋಮೇಶ್ವರೋತ್ಸವ-2024 ಸಮಾರಂಭದ ಮೊದಲ ದಿನದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಕೇವಲ ನೆಲವಾಗಲಿ, ದೇಶವಾಗಲೀ ಆಗಿಲ್ಲ, ಇದೊಂದು ಚೇತನವಾಗಿದೆ ಎಂದರು.ಇಡೀ ಜಗತ್ತು ಕತ್ತಲಿನಲ್ಲಿ ತುಂಬಿರುವ ಹೊತ್ತಿನಲ್ಲಿ ನಾವು ಬೆಳಕಿಗೆ ಭಾರತದತ್ತ ನೋಡಬೇಕು ಎಂಬುದಾಗಿ ವಿದೇಶಿ ಚಿಂತಕರೊಬ್ಬರು ಹೇಳಿದ್ದಾರೆ. ವಿದೇಶಿ ಚಿಂತಕರ ಕಣ್ಣಿನಲ್ಲಿ ಭಾರತ ಹಿಂದಿನಿದಂಲೂ ಪ್ರಜ್ವಲಿಸುವ ಜ್ಯೋತಿಯಾಗಿ ಎನಿಸಿರುವುದಕ್ಕೆ ಈ ನೆಲದ ಸಂಸ್ಕೃತಿ, ಆಚಾರ, ವಿಚಾರ, ಆದರ್ಶ ಪುರುಷರ ಸಂದೇಶಗಳು, ಮಹನೀಯರ ಸಾಧನೆಗಳೂ ಕಾರಣವಾಗಿವೆ ಎಂದರು.
ರಾಣೆಬೆನ್ನೂರು ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಕಡು ಬಡತನದ ಹಿನ್ನೆಲೆಯ ಕೆ.ಎಂ.ಸುರೇಶ ಹಂತ ಹಂತವಾಗಿ ಬೆಳೆದು ಬಂದ ಸಾಧಕ. ಇಂತಹದ್ದೊಂದು ಶಿಕ್ಷಣ ಸಂಸ್ಥೆಯನ್ನು ಅವರು ಕಟ್ಟಿ, ಬೆಳೆಸಿರುವುದು ದೊಡ್ಡ ಸಾಧನೆಯಾಗಿದೆ. ಶ್ರೀ ಸೋಮೇಶ್ವರ ವಿದ್ಯಾಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ಹುಬ್ಬಳ್ಳಿ ಚಿನ್ಮಯ ಮಿಷನ್‌ನ ಸ್ವಾಮಿ ಕೃತಾತ್ಮನಂದರು ಸಾನಿಧ್ಯ ವಹಿಸಿದ್ದರು. ನಿವೃತ್ತ ಶಿಕ್ಷಕ ಮಹಾಲಿಂಗಪ್ಪ ಯಾದವ್, ಫಿಜಿಯೋಥೆರಪಿಸ್ಟ್ ಡಾ.ಬಸವರಾಜ್ ಶಿವಪೂಜೆ ಅವರಿಗೆ ಸೋಮೇಶ್ವರ ಸಿರಿ ಗೌರವ ಪ್ರದಾನ ಮಾಡಲಾಯಿತು. ಸಂಸ್ಥೆ ಅಧ್ಯಕ್ಷ, ಹಿರಿಯ ವಕೀಲ ಡಾ.ಅಶೋಕ ರೆಡ್ಡಿ, ಸಂಸ್ಥೆ ಕಾರ್ಯದರ್ಶಿ ಕೆ.ಎಂ. ಸುರೇಶ, ಪಾಲಿಕೆ ಸದಸ್ಯ ಕೆ.ಎಂ.ವೀರೇಶ ಪೈಲ್ವಾನ್, ಡಾ.ಶ್ವೇತಾ, ಪ್ರಾಚಾರ್ಯರಾದ ವೀಣಾ, ಪ್ರಭಾವತಿ, ಶಿಕ್ಷಕಿ ಚಂದ್ರಕಲಾ, ಆಡಳಿತ ನಿರ್ದೇಶಕ ಪಿ.ಎನ್.ಪರಮೇಶ್ವರಪ್ಪ, ಸಂಸ್ಥೆ ಕಾರ್ಯದರ್ಶಿ ಕೆ.ಎಂ.ಸುರೇಶ್ ಇದ್ದರು. ಇದೇ ವೇಳೆ ಸೋಮೇಶ್ವರ ಗಾನ ಸಿರಿ, ಚದುರಂಗ ಸಿರಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
- ಅಶೋಕ ಹಂಚಲಿ, ಹಿರಿಯ ಸಾಹಿತಿ, ಬಸವನ ಬಾಗೇವಾಡಿ