- ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಾಥಮಿಕ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ
ಮಕ್ಕಳ ಶೈಕ್ಷಣಿಕ ಕ್ಷೇತ್ರ ಭೇಟಿಯಿಂದ ವಿದ್ಯಾರ್ಥಿಗಳಿಗೆ ಅಪಾರ ಅನುಭವ ಸಿಗಲಿದ್ದು ವ್ಯಕ್ತಿತ್ವ ಬೆಳವಣಿಗೆ ಹೊಂದಲಿದೆ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲಿನ ಎಸ್.ಡಿ.ಎಂ.ಸಿ. ಸಮಿತಿ ಉಪಾಧ್ಯಕ್ಷ ಉದಯ ಗಿಲ್ಲಿ ತಿಳಿಸಿದರು.
ಸೋಮವಾರ ಕರ್ನಾಟಕ ಪಬ್ಲಿಕ್ ಸ್ಕೂಲಿನ ಪ್ರಾಥಮಿಕ ಶಾಲಾ ವಿಭಾಗದ 220 ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು. ಶೈಕ್ಷಣಿಕ ಭೇಟಿಯಿಂದ ಪಾಠ ಪುಸ್ತಕದ ಜ್ಞಾನದ ಜೊತೆಗೆ ಪ್ರಾತ್ಯಕ್ಷಿಕೆ ಅನುಭವ ಸಿಗಲಿದೆ. ಪ್ರವಾಸಕ್ಕೆ ಹೋದಾಗ ಶಿಕ್ಷಕರು ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು. ಶೈಕ್ಷಣಿಕ ಪ್ರವಾಸದಲ್ಲಿ ವೀಕ್ಷಣೆ ಮಾಡಿದ ಸ್ಥಳಗಳ ಬಗ್ಗೆ ಮಾಹಿತಿ ಪಡೆದುಕೊಂಡು ಬನ್ನಿ ಎಂದರು.ಕರ್ನಾಟಕ ಪಬ್ಲಿಕ್ ಸ್ಕೂಲಿನ ಉಪ ಪ್ರಾಂಶುಪಾಲ ರುದ್ರಪ್ಪ ಮಾತನಾಡಿ, ಪಿಎಂಶ್ರೀ ಯೋಜನೆಯಡಿ ಮಕ್ಕಳ ಪ್ರವಾಸಕ್ಕೆ ಪ್ರತಿ ಮಗುವಿಗೆ ₹500 ಮಂಜೂರಾಗಿದೆ. 1 ರಿಂದ 7 ನೇ ತರಗತಿ 220 ಮಕ್ಕಳು 4 ಬಸ್ಸುಗಳಲ್ಲಿ 1 ದಿನದ ಪ್ರವಾಸ ಮಾಡಲಿದ್ದಾರೆ. ಶಿವಮೊಗ್ಗದ ನವಿಲೆ ಕೃಷಿ ವಿಶ್ವ ವಿದ್ಯಾಲಯ, ವಿಮಾನ ನಿಲ್ದಾಣ, ಹಾಲಿನ ಡೈರಿ, ಕೈಗಾರಿಕೆ, ಅಮೂಲ್ಯ ಶೋಧ ಮುಂತಾದ ಸ್ಥಳಗಳನ್ನು ವೀಕ್ಷಣೆ ಮಾಡಲಿದ್ದಾರೆ ಎಂದರು.
ಕೆಪಿಎಸ್ ನ ಎಸ್.ಡಿ.ಎಂ.ಸಿ ಸದಸ್ಯ ಅಭಿನವ ಗಿರಿರಾಜ್ ಮಾತನಾಡಿ, ಪ್ರವಾಸದ ಸಮಯದಲ್ಲಿ ಸಮಯ ಪರಿಪಾಲನೆ ಮಾಡಬೇಕು. ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಬೇಕು. ಐತಿಹಾಸಿಕ ಸ್ಥಳಗಳನ್ನು ಮಕ್ಕಳು ವೀಕ್ಷಣೆ ಮಾಡುವುದರಿಂದ ಮಕ್ಕಳಲ್ಲಿ ಆ ಸ್ಥಳಗಳ ಬಗ್ಗೆ ಜ್ಞಾನಾರ್ಜನೆ ಉಂಟಾಗಲಿದೆ. ವೃತ್ತಿ ಕೌಸಲ್ಯಗಳ ಬಗ್ಗೆ ಅರಿವು ಮೂಡಲಿದೆ ಎಂದರು.ಈ ಸಂದರ್ಭದಲ್ಲಿ ಕೆಪಿಎಸ್ ನ ಶಾಲಾ ಎಸ್.ಡಿ.ಎಂ.ಸಿ ಸದಸ್ಯರಾದ ಪುರುಶೋತ್ತಮ್, ಗಪಾರ್, ಕೆಪಿಎಸ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗಂಗಮ್ಮ, ಶಾಲೆಯ ಶಿಕ್ಷಕರು, ಶಿಕ್ಷಕಿಯರು ಇದ್ದರು.