ಜ್ಞಾನ ಹೆಚ್ಚಳ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲಕ್ಕೆ ಶಿಕ್ಷಣ ಸಂಸ್ಥೆಗಳ ನೆರವು: ಕೆ.ಟಿ.ಶ್ರೀಕಂಠೇಗೌಡ

KannadaprabhaNewsNetwork |  
Published : Aug 07, 2026, 02:00 AM IST
5ಕೆಎಂಎನ್ ಡಿ16 | Kannada Prabha

ಸಾರಾಂಶ

ಸ್ವಾತಂತ್ರ್ಯ ನಂತರ ಶೈಕ್ಷಣಿಕ ಚಳವಳಿಯಲ್ಲಿ ಸರ್ಕಾರದ ಜೊತೆ ಜೊತೆಗೆ ಈ ರಾಜ್ಯದಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು ತಮ್ಮ ಕಟಿಬದ್ಧತೆಯನ್ನು ಪ್ರದರ್ಶನ ಮಾಡಿವೆ. ಶಿಕ್ಷಣ ಸಂಸ್ಥೆಗಳು ಇಲ್ಲದ್ದರೆ ಸಾಕ್ಷರತೆ ಪ್ರಮಾಣ ಹೆಚ್ಚಳವಾಗುತ್ತಿರಲಿಲ್ಲ. ಸರ್ಕಾರ ಒಂದರಿಂದಲೇ ಶೈಕ್ಷಣಿಕ ಚಳವಳಿಯನ್ನು ಸಮರ್ಥವಾಗಿ ರೂಪಿಸಲು ಸಹ ಸಾಧ್ಯವಾಗುತ್ತಿರಲಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ವಾತಂತ್ರ್ಯ ನಂತರ ಶೈಕ್ಷಣಿಕ ಚಳವಳಿಯನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತಂದು ಜ್ಞಾನ ಹೆಚ್ಚಳ ಮತ್ತು ವಿದ್ಯಾರ್ಥಿಗಳ ಭವಿಷ್ಯ ಉಜ್ವಲಕ್ಕೆ ಶಿಕ್ಷಣ ಸಂಸ್ಥೆಗಳು ನೆರವಾಗಿವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿಪ್ರಾಯಿಸಿದರು.

ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ನಂಜಮ್ಮ ಮೋಟೇಗೌಡ ಚಾರಿಟಬಲ್ ಅಂಡ್ ಎಜುಕೇಷನ್ ಟ್ರಸ್ಟ್(ಕೊಪ್ಪ) ವತಿಯಿಂದ ನಡೆದ ನಿತ್ಯ ಸಚಿವ ಕೆ.ವಿ.ಶಂಕರಗೌಡ ಶಿಕ್ಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ನಂತರ ಶೈಕ್ಷಣಿಕ ಚಳವಳಿಯಲ್ಲಿ ಸರ್ಕಾರದ ಜೊತೆ ಜೊತೆಗೆ ಈ ರಾಜ್ಯದಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು ತಮ್ಮ ಕಟಿಬದ್ಧತೆಯನ್ನು ಪ್ರದರ್ಶನ ಮಾಡಿವೆ. ಶಿಕ್ಷಣ ಸಂಸ್ಥೆಗಳು ಇಲ್ಲದ್ದರೆ ಸಾಕ್ಷರತೆ ಪ್ರಮಾಣ ಹೆಚ್ಚಳವಾಗುತ್ತಿರಲಿಲ್ಲ. ಸರ್ಕಾರ ಒಂದರಿಂದಲೇ ಶೈಕ್ಷಣಿಕ ಚಳವಳಿಯನ್ನು ಸಮರ್ಥವಾಗಿ ರೂಪಿಸಲು ಸಹ ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು.

ದಿ.ಕೆ.ವಿ.ಶಂಕರಗೌಡರು ಪ್ರಾರಂಭ ಮಾಡಿದ ಜನತಾ ಶಿಕ್ಷಣ ಸಂಸ್ಥೆಯು ಸೇರಿದ ಹಾಗೆ ಎಲ್ಲಾ ತಾಲೂಕಿನಲ್ಲಿ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ಮಂಡ್ಯ ಜಿಲ್ಲೆಯಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು ಹುಟ್ಟಿ ಅಕ್ಷರ ದಾಸೋಹ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿವೆ ಎಂದರು.

ಆ ಸಾಲಿನಲ್ಲಿ ಮಂಡ್ಯ ತಾಲೂಕಿನ ಗಡಿ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ನದಿ ದಡದ ಮಹದೇವಪುರದಲ್ಲಿರುವ ಆನಂದ ಶಿಕ್ಷಣ ಸಂಸ್ಥೆಯು ಒಂದಾಗಿದೆ. ಅದು ಬೆಳೆದು ಬಂದ ಇತಿಹಾಸ ಅತ್ಯಂತ ರೊಚಕತೆಯಿಂದ ಕೂಡಿದೆ. ಜೊತೆಗೆ ಜ್ಞಾನಾರ್ಜನೆಗೆ ನೆರವಾಗಿದೆ. ಇಂತಹ ಸಂಸ್ಥೆಗೆ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ ಎಂದು ಶ್ಲಾಘಿಸಿದರು.

ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ಕೆ.ವಿ.ಶಂಕರಗೌಡ ಅವರು ನಮ್ಮನ್ನಗಲಿ 36 ವರ್ಷಗಳು ಕಳೆದಿವೆ. ಆದರೂ ಅವರನ್ನು ಇನ್ನೂ ನೆನಪಿಸಿಕೊಳ್ಳುತ್ತಿದ್ದಾರೆ ಎಂದರೆ ಅವರ ಕಾರ್ಯವೈಖರಿ ಜನಸೇವೆ ಹೇಗಿತ್ತು ಎನ್ನುವುದನ್ನು ನಾವು ವಿಮರ್ಶೆ ಮಾಡಿಕೊಳ್ಳಬೇಕು. ಹಾಗಾಗಿ ಅವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ವ್ಯಕ್ತಿಗಳು ಮತ್ತು ಸಾಧಕರನ್ನು ಗುರುತಿಸಿ ಅಭಿನಂದಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೇವೆ. ಆನಂದ್ ಶಿಕ್ಷಣ ಸಂಸ್ಥೆಯಲ್ಲಿ 650 ಮಕ್ಕಳು ಓದುತ್ತಿದ್ದಾರೆ ಎಂದರೆ ಅಲ್ಲಿನ ಶಿಕ್ಷಣದ ಗುಣಮಟ್ಟ ಹೇಗಿರಬೇಕು ಎಂಬುದು ತಿಳಿಯುತ್ತದೆ ಎಂದರು.

ನಿತ್ಯ ಸಚಿವ ಕೆ.ವಿ.ಶಂಕರಗೌಡ ಶಿಕ್ಷಣ ಪ್ರಶಸ್ತಿಯನ್ನು ಮಹದೇವಪುರ ಆನಂದ ಶಿಕ್ಷಣ ಸಂಸ್ಥೆ ಪರ ಸ್ವೀಕರಿಸಿದ ಅಧ್ಯಕ್ಷ ಗಿಣಿಸ್ವಾಮಿ, ಈ ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ನಮ್ಮ ಶಿಕ್ಷಣ ಸಂಸ್ಥೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದ ಹೇಳಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಸೇರಿದಂತೆ ಯಾವುದೇ ಭಾಷೆ ಇರಲಿ ಅದನ್ನು ಕಲಿಯಬೇಡಿ ಎನ್ನುವುದಿಲ್ಲ ನೀವು ಬಹುಭಾಷೆಯಲ್ಲಿ ಪರಿಣಿತರಾಗಿ ಅಭ್ಯಂತರವಿಲ್ಲ. ಆದರೆ, ಮಾಧ್ಯಮ ಕನ್ನಡವಾಗಿರಬೇಕು. ಇನ್ನುಳಿದ ಭಾಷೆಗಳಿಂದ ಸಾಕಷ್ಟು ಕಲಿತು ಬಿಡುತ್ತೇನೆ ಎಂದರೆ ಅದು ಸುಳ್ಳು. ನಮ್ಮ ಭಾಷೆ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬಹುದು ಎಂದರು.

ಸಮಾರಂಭದಲ್ಲಿ ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು, ಲಯನ್ಸ್ ಸಂಸ್ಥೆ ನಾಗರಾಜು ವಿ.ಭೈರಿ, ಆನಂದ ಶಿಕ್ಷಣ ಸಂಸ್ಥೆ ಖಜಾಂಚಿ ಎಂ.ಪಿ.ಸ್ವಾಮಿಗೌಡ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಯಿಯ ಹಾಲೇ ಮಗುವಿನ ಮೊದಲ ನೈಸರ್ಗಿಕ ಲಸಿಕೆ: ಕೆ.ಆರ್.ನಂದಿನಿ
ವಿದ್ಯಾರ್ಥಿಗಳಲ್ಲಿ ಶಿಸ್ತು ಇದ್ದರೆ ಭವಿಷ್ಯ ಉಜ್ವಲ: ಎಚ್.ಎಂ.ಆನಂದ್ ಕುಮಾರ್