ಶಿಕ್ಷಣ ಸಂಸ್ಥೆಗಳು ರಚನಾತ್ಮಕ ಕಾರ್ಯದೆಡೆ ಗಮನ ಹರಿಸಲಿ

KannadaprabhaNewsNetwork | Published : Mar 5, 2025 12:30 AM

ಸಾರಾಂಶ

ಮಕ್ಕಳ ಅಭಿವ್ಯಕ್ತಿ ಪ್ರಕಟಗೊಳ್ಳಲು ಭಾಷಾ ಕೌಶಲ್ಯಗಳು ವಿಕಾಸ ಹೊಂದಲು ಶಾಲಾ ಹಂತದ ಪ್ರಯತ್ನ ಮುಖ್ಯ

ಸಿದ್ದಾಪುರ: ದೇಶ ಕಟ್ಟುವಲ್ಲಿ ಭಾವನಾತ್ಮಕ ಚಿಂತನೆ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಮೂಲಕ ರೂಪಿಸುವುದು ಅಗತ್ಯ. ದೇಶ ಮೊದಲು ಎಂಬ ಕಲ್ಪನೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಆಗಬೇಕು. ಜತೆಗೆ ಪ್ರತಿಭೆಯ ವಿಕಾಸವಾಗಬೇಕು. ಪ್ರತಿಭಾವಂತರು ದೇಶದ ಆಸ್ತಿ. ಶಿಕ್ಷಣದ ಮೂಲಕ ಪ್ರತಿಭೆ ಬೆಳಗಲು ಎಲ್ಲರ ಸಹಕಾರ ಅಗತ್ಯ. ಶಿಕ್ಷಣ ಸಂಸ್ಥೆಗಳು ಇಂತಹ ರಚನಾತ್ಮಕ ಕಾರ್ಯದೆಡೆ ಗಮನ ಹರಿಸಬೇಕು ಎಂದು ಮಕ್ಕಳ ತಜ್ಞ ಡಾ. ಶ್ರೇಯಸ್ ಶ್ರೀಧರ ವೈದ್ಯ ಹೇಳಿದರು.

ಅವರು ಸ್ಥಳೀಯ ವಿಸ್ಡಂ ವಿಂಗ್ಸ್ ಶಾಲೆಯ ಚಿಣ್ಣರ ಉತ್ಸವ ಉದ್ಘಾಟಿಸಿ ಮಾತನಾಡಿದರು.

ಉದ್ಯಮಿ ಸುದರ್ಶನ ಪಿಳ್ಳೆ ಮಾತನಾಡಿ, ಮಕ್ಕಳ ಅಭಿವ್ಯಕ್ತಿ ಪ್ರಕಟಗೊಳ್ಳಲು ಭಾಷಾ ಕೌಶಲ್ಯಗಳು ವಿಕಾಸ ಹೊಂದಲು ಶಾಲಾ ಹಂತದ ಪ್ರಯತ್ನ ಮುಖ್ಯ ಎಂದರು.

ಪಪಂ ಸದಸ್ಯ ಮಾರುತಿ ನಾಯ್ಕ ಹೊಸೂರು ಅತಿಥಿಯಾಗಿ ಮಾತನಾಡಿ, ಶಿಕ್ಷಣದಲ್ಲಿ ಗುಣಾತ್ಮಕ ಪ್ರಕ್ರಿಯೆಗೆ ಗಮನ ಅಗತ್ಯ. ಪ್ರೀತಿ ವಿಶ್ವಾಸಗಳು ಅರಳಬೇಕು ಎಂದರು.

ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿ, ಪ್ರತಿ ಮಗುವೂ ಹುಟ್ಟುತ್ತಲೇ ವಿಶ್ವಮಾನವನಾಗಿ ಬೆಳೆಯುತ್ತದೆ. ಭಾಷೆ, ಜನಾಂಗ, ಧರ್ಮ ಮುಂತಾದ ವಿಚಾರದಿಂದ ಅಲ್ಪ ಮಾನವನನ್ನಾಗಿ ರೂಪಿಸುತ್ತದೆ. ವೈಚಾರಿಕತೆ ಅತೀ ಮುಖ್ಯ ಎಂದರು.

ಎಎಸ್ಐ ಸಂಗೀತಾ ಕಾನಡೆ ಭಾಗವಹಿಸಿ ಮಕ್ಕಳನ್ನು ಸಾಮಾಜಿಕವಾಗಿ ಪೋಷಿಸಿ ಸದಭಿರುಚಿ ಪೋಷಿಸಬೇಕು ಎಂದರು.

ಪಾಲಕರ ಪರವಾಗಿ ಕಾಶೀನಾಥ ಪಾಟೀಲ, ಅನ್ನಪೂರ್ಣ ಮಾತನಾಡಿದರು.

ಹೆಸ್ಕಾಂ ನಿವೃತ್ತ ಅಭಿಯಂತರ ಅಂತೋನಿ ಕುಂಜನಾಥ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವರ್ತಕ ಹರಿಹರ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಿಣ್ಣರೋತ್ಸವದ ಪಾರಿತೋಷಕ ವಿತರಿಸಲಾಯಿತು.ಅರ್ಪಿತಾ ಮೋಹನ ಕುಮಾರ ಹಾಗೂ ವಿದ್ಯಾರ್ಥಿಗಳು,ಶಿಕ್ಷಕರು ಪ್ರಾರ್ಥಿಸಿದರು.

ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮೋಹನ ಕುಮಾರ ಸ್ವಾಗತಿಸಿದರು. ಆಡಳಿತಾಧಿಕಾರಿ ಅರ್ಪಿತಾ ಮೋಹನ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಪಮಾ ಅನುಪ್ ವರದಿ ವಾಚಿಸಿದರು.ಅಮಿತ್ ಹಳದಿಪುರ ಸಂಘಟಿಸಿದರು. ಪ್ರಾಚಾರ್ಯೆ ಅನುಪಮಾ ಅನುಪ್ ವಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪೋಷಕರಿಂದ ದೇಶದ ವಿವಿಧ ಜನಾಂಗಗಳ ಪೋಷಾಕು ಪ್ರದರ್ಶನ ನಡೆಯಿತು.

Share this article