ಸಂಡೂರು ಪಾಲಿಟೆಕ್ನಿಕ್ ಕಾಲೇಜಿನ ೩೬ ನೇ ವಾರ್ಷಿಕೋತ್ಸವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಸಂಡೂರುರಾಷ್ಟ್ರ ನಿರ್ಮಾಣದಲ್ಲಿ ತಾಂತ್ರಿಕ ಶಿಕ್ಷಣವು ಮಹತ್ವದ ಪಾತ್ರ ವಹಿಸುತ್ತಿದೆಯಲ್ಲದೆ, ತಾಂತ್ರಿಕ ಶಿಕ್ಷಣವು ಅಭಿವೃದ್ಧಿಶೀಲ ರಾಷ್ಟ್ರದ ಬೆನ್ನೆಲುಬಾಗಿದೆ ಎಂದು ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಹಿರ್ಜಿ ಅಜಯ್ ಘೋರ್ಪಡೆ ಅಭಿಪ್ರಾಯಪಟ್ಟರು. ತಾಲೂಕಿನ ಯಶವಂತನಗರ ಗ್ರಾಮದಲ್ಲಿರುವ ಸಂಡೂರು ಪಾಲಿಟೆಕ್ನಿಕ್ ಕಾಲೇಜಿನ ೩೬ ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಸಂಡೂರು ಪಾಲಿಟೆಕ್ನಿಕ್‌ನಂತಹ ಸಂಸ್ಥೆಗಳು ಯುವ ಮನಸ್ಸುಗಳ ಭವಿಷ್ಯವನ್ನು ರೂಪಿಸುವಲ್ಲಿ ಮತ್ತು ಉದ್ಯಮ ಮತ್ತು ಆರ್ಥಿಕತೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಅಗತ್ಯವಾದ ಕೌಶಲ್ಯಗಳೊಂದಿಗೆ ಅವರನ್ನು ತಯಾರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಕೃತಕ ಬುದ್ದಿಮತ್ತೆ, ಯಾಂತ್ರೀಕೃತಗೊಂಡ, ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲ್ ರೂಪಾಂತರದಲ್ಲಿನ ಪ್ರಗತಿಯೊಂದಿಗೆ ಇಂದು ಜಗತ್ತು ವೇಗವಾಗಿ ವಿಕಸನಗೊಳ್ಳುತ್ತಿದೆ. ಈ ದಿಶೆಯಲ್ಲಿ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳಾಗಿ, ನೀವು ಈ ಕ್ರಾಂತಿಯ ಮುಂಚೂಣಿಯಲ್ಲಿದ್ದೀರಿ. ನೀವು ಇಲ್ಲಿ ಪಡೆಯುವ ಜ್ಞಾನವು ತರಗತಿಗಳ ನಾಲ್ಕು ಗೋಡೆಗಳ ಒಳಗೆ ಉಳಿಯಬಾರದು, ಅದನ್ನು ನೈಜ ಜಗತ್ತಿನ ಸವಾಲುಗಳನ್ನು ಎದುರಿಸಲು ಅನ್ವಯಿಸಬೇಕು ಎಂದು ತಿಳಿಸಿದರು.
ಉತ್ತಮ ಶಿಕ್ಷಕರ ಪ್ರಭಾವವು ಜೀವಿತಾವಧಿಯವರೆಗೆ ಇರುತ್ತದೆ. ಕಾಲೇಜಿನ ಉಪನ್ಯಾಸಕರ ಕಠಿಣ ಪರಿಶ್ರಮ ಮತ್ತು ಪ್ರಯತ್ನದಿಂದ ವಿದ್ಯಾರ್ಥಿಗಳು ಎಂಜಿನಿಯರ್‌ಗಳಾಗಿ, ಉದ್ಯಮಿಗಳಾಗಿ ಮತ್ತು ನಾಳಿನ ನಾಯಕರಾಗಿ ರೂಪುಗೊಳ್ಳುತ್ತಾರೆ ಎಂದು ಹೇಳಿದರು.ಗೌರವ ಅತಿಥಿಯಾಗಿ ಆಗಮಿಸಿದ ಸೇಲ್ಸ್ಫೋರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಉತ್ಪಾದಕತೆಯ ಹಿರಿಯ ವ್ಯವಸ್ಥಾಪಕಿ ಸೀತಾಲಕ್ಷ್ಮಿ ಪಿ.ಆರ್. ಮಾತನಾಡಿ, ನಾನು ಕೂಡ ಈ ಸಂಡೂರು ಪಾಲಿಟೆಕ್ನಿಕ್‌ನ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಎಂದರಲ್ಲದೆ, ತಾವು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಲಿತ ದಿನಗಳನ್ನು ಮೆಲುಕು ಹಾಕಿದರು.
ಸಂಡೂರು ಪಾಲಿಟೆಕ್ನಿಕ್‌ನ ಪಾಂಶುಪಾಲ ಅಲಿಮ್ ಅಹಮ್ಮದ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆ, ಕ್ರೀಡಾಕೂಟಗಳಲ್ಲಿ, ಪ್ರಬಂಧ ಮತ್ತು ಇತರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳಿಂದ ಪ್ರಶಸ್ತಿ ಪತ್ರ ವಿತರಿಸಲಾಯಿತು.ಘೋರ್ಪಡೆ ರಾಜ ವಂಶಸ್ಥರಾದ ಏಕಾಂಬರ್ ಅಜಯ್ ಘೋರ್ಪಡೆ, ಸಂಡೂರು ಎಜ್ಯುಕೇಷನ್ ಸೊಸೈಟಿಯ ಕಾರ್ಯದರ್ಶಿ ಜಗದೀಶ ಬಸಾಪುರ, ಶಿವಪುರ ಶಿಕ್ಷಣ ಕಾರ್ಯದರ್ಶಿ ಆಶಿಯಾ ಬಾನು, ಎಸ್.ಜಿ.ಆರ್.ಎಸ್ ಶಾಲೆಯ ಪ್ರಾಂಶುಪಾಲರಾದ ಚಂದ್ರಿಕ, ಎಸ್.ಆರ್.ಎಸ್ ಶಾಲೆಯ ಪ್ರಾಚಾರ್ಯ ಅವಿನಾಶ್ ತ್ಯಾಗಿ, ಯಶವಂತನಗರ ಗ್ರಾಪಂ ಸದಸ್ಯರಾದ ಶಿವನಗೌಡ, ಸಂಡೂರು ಎಜ್ಯುಕೇಷನ್ ಸೊಸೈಟಿ ಮತ್ತು ಶಿವಪುರ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ವಿ. ಲಕ್ಷ್ಮಿ ಮತ್ತು ಚಂದನಪ್ರಿಯ ಸ್ವಾಗತಿಸಿ, ವಂದಿಸಿದರು.