ರಾಜ್ಯದಲ್ಲಿ ಲಿಂಗಾಯತ ಮಠಗಳಿಂದ ಶೈಕ್ಷಣಿಕ ಕ್ರಾಂತಿ: ತೋಂಟದ ಶ್ರೀಗಳು

KannadaprabhaNewsNetwork |  
Published : Sep 07, 2026, 02:45 AM IST
ಕಾರ್ಯಕ್ರಮದಲ್ಲಿ ಜ.ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಮಾತನಾಡಿದರು. | Kannada Prabha

ಸಾರಾಂಶ

ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯಾಗಿದೆ ಎಂದರೆ ಅದಕ್ಕೆ ಲಿಂಗಾಯತ ಮಠಗಳೇ ಕಾರಣ.

ಅನ್ನದಾನ ಮಹಾಶಿವಯೋಗಿಗಳ 49ನೇ ಪುಣ್ಯಾರಾಧನೆ

ಅನ್ನದಾನೇಶ್ವರ ಪಪೂ ವಿಜ್ಞಾನ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಕನ್ನಡಪ್ರಭ ವಾರ್ತೆ ಗದಗ

ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯಾಗಿದೆ ಎಂದರೆ ಅದಕ್ಕೆ ಲಿಂಗಾಯತ ಮಠಗಳೇ ಕಾರಣ. ಸ್ವಾತಂತ್ರ‍್ಯ ಪೂರ್ವದಲ್ಲೇ ಜಾತಿ-ಮತ ಭೇದವಿಲ್ಲದೆ ಪ್ರಸಾದ ನಿಲಯ ತೆರೆದು ಬಡಮಕ್ಕಳಿಗೆ ಅನ್ನದಾಸೋಹ, ಜ್ಞಾನದಾಸೋಹ ನೀಡಿದ್ದು ನಮ್ಮ ಪರಂಪರೆಯ ಹಿರಿಮೆ ಎಂದು ತೋಂಟದಾರ್ಯ ಮಠದ ಜ.ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.

ನಗರದ ಹಾಲಕೆರೆ ಮಠದ ಆನಂದಾಶ್ರಮದಲ್ಲಿ ಭಾನುವಾರ ಜರುಗಿದ ಅನ್ನದಾನ ಮಹಾಶಿವಯೋಗಿಗಳ 49ನೇ ಪುಣ್ಯಾರಾಧನೆ ಹಾಗೂ ನರೇಗಲ್ಲಿನ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಅನ್ನದಾನೇಶ್ವರ ಪಪೂ ವಿಜ್ಞಾನ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಠಮಾನ್ಯಗಳು ನಡೆಸುವ ಶಿಕ್ಷಣ ಸಂಸ್ಥೆಗಳ ವೈಶಿಷ್ಟ್ಯವೆಂದರೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವುದು. ಈ ಪ್ರದೇಶಕ್ಕೆ ಆನಂದ ಆಶ್ರಮ ಎನ್ನುತ್ತಾರೆ. ಇಲ್ಲಿ ಓದಿದವರು ಜೀವನದುದ್ದಕ್ಕೂ ಆನಂದ ಪಡೆಯುತ್ತಾರೆ. ಮಕ್ಕಳು ವಿದ್ಯಾವಂತರಾಗಲಿ, ಜ್ಞಾನವಂತರಾಗಲಿ, ಶ್ರೇಷ್ಠ ವಿಜ್ಞಾನಿಗಳಾಗಲಿ ಎಂಬ ಉದ್ದೇಶದಿಂದ ಈ ಮಹಾವಿದ್ಯಾಲಯ ಪ್ರಾರಂಭಿಸಲಾಗಿದೆ ಎಂದರು.

ಪರಿಶ್ರಮಕ್ಕೆ ಬೇರೆ ಶಾರ್ಟ್ ಕಟ್ ಇಲ್ಲ. ಪೂಜ್ಯ ಮುಪ್ಪಿನ ಬಸವಲಿಂಗ ಸ್ವಾಮಿಗಳು ಹೇಳುವಂತೆ ಪ್ರಯತ್ನವೇ ಮುಖ್ಯ. ಗಿಡ ಹತ್ತಿದರೆ ಹಣ್ಣು ಸಿಗುತ್ತದೆ, ಕೆಳಗೆ ಮಲಗಿದರೆ ಸಿಗುವುದಿಲ್ಲ. ವಿದ್ಯಾರ್ಥಿಗಳು ಪ್ರಯತ್ನದಿಂದ ಜ್ಞಾನ ಸಂಪಾದಿಸಿ, ತಂದೆ-ತಾಯಿ, ಗುರುಹಿರಿಯರನ್ನು ಗೌರವಿಸಿ, ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಆಗ ವ್ಯಕ್ತಿತ್ವ ವಿಕಾಸವಾಗಿ ಸಮಾಜ ಗೌರವಿಸುತ್ತದೆ ಎಂದರು.

ಸಾನಿಧ್ಯ ವಹಿಸಿದ್ದ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಜ.ಮುಪ್ಪಿನ ಬಸವಲಿಂಗ ಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಬೇಕು ಆ ಮೂಲಕ ಮುಂದಿನ ಸಮಗ್ರ ಬದುಕಿನ ಚಿತ್ರಣವನ್ನು ರೂಪಿಸಿಕೊಂಡು ಆ ಮಾರ್ಗದಲ್ಲಿ ಮುನ್ನಡೆಯಿರಿ ಅದಕ್ಕೆ ಶಿಕ್ಷಣವೊಂದೇ ಬದುಕಿನ ಪೋಷಕಾಂಶ ಎಂದರು.

90 ವರ್ಷ ಚೈತನ್ಯ ಉಳಿಸಿಕೊಂಡಿದ್ದ ಅನ್ನದಾನ ಶಿವಯೋಗಿಗಳು (ಬೆತ್ತದ ಅಜ್ಜ) 87ನೇ ವಯಸ್ಸಿನಲ್ಲೂ ಹಳ್ಳಿ ಹಳ್ಳಿಗೆ ಹೋಗಿ ಭಿಕ್ಷೆ ಬೇಡಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ 13 ಬೋರ್ಡಿಂಗ್ (ಅನ್ನದಾನ) ಮುನ್ನಡೆಸಿದ ಹೆಗ್ಗಳಿಕೆ ಅದೂ ಸ್ವಾತಂತ್ರ್ಯ ಪೂರ್ವದಲ್ಲಿ ಕ್ರಾಂತಿ ಮಾಡಿದರು ಎಂಬುದು ಇತಿಹಾಸ. ಈ ಅಜ್ಜನವರ ಚೈತನ್ಯದ ಬದುಕೇ ನಮಗೆ ಪಾಠ. ಅವರ ಜೀವನಾಧಾರಿತ ಸಿನಿಮಾ 6 ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ಪ್ರಾಚಾರ್ಯ ಎಂ.ಸಿ. ಕಟ್ಟಿಮನಿ ಮಾತನಾಡಿದರು. ಶಿವಲೀಲಾ ಅಕ್ಕಿ, ರೇಣುಕಾ ಅಮಾತ್ಯ, ಚನ್ನಬಸಪ್ಪ ಅಕ್ಕಿ, ಕಮತರ, ಸಾಲಿಮಠ ಹಾಗೂ ಮುಂತಾದವರನ್ನು ಸನ್ಮಾನಿಸಲಾಯಿತು. ಮಹೇಶ್ವರ ಸ್ವಾಮಿಗಳು, ಡಾ. ಜಿ.ಕೆ. ಕಾಳೆ, ಆರ್.ಬಿ. ಪಾಟೀಲ, ಜಿ.ಎನ್. ಪಾಟೀಲ, ಡಿಡಿಪಿಐ ಆರ್.ಎಸ್. ಬುರಡಿ, ಡಾ. ಬಿ.ಎನ್. ಪಾಟೀಲ, ವಿ.ಆರ್. ಪಾಟೀಲ, ಶರಣಬಸಪ್ಪ ಗುಡಿಮನಿ, ಗಿರೀಶಗೌಡ ಪಾಟೀಲ, ಈಶಣ್ಣ ಮುನವಳ್ಳಿ, ಸದು ಮದರಿಮಠ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾವ್ಯಕ್ಕಿದೆ ಅಮಂಗಳ ನಾಶ ಮಾಡುವ ಶಕ್ತಿ: ಸ್ವರ್ಣವಲ್ಲೀ ಶ್ರೀ
ಪ್ಲಾಸ್ಟಿಕನಲ್ಲಿ ಸಂಗ್ರಹಿಸಿದ ನೀರು ಆರೋಗ್ಯಕ್ಕೆ ಮಾರಕ: ರಾಘವೇಶ್ವರ ಶ್ರೀ