ಗ್ಯಾರಂಟಿಗಳ ಪರಿಣಾಮಕಾರಿ ಜಾರಿ: ಉಸ್ತುವಾರಿ ಕಾರ್ಯದರ್ಶಿ ಸೂಚನೆ

KannadaprabhaNewsNetwork | Published : Oct 17, 2023 12:46 AM

ಸಾರಾಂಶ

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗೃಹಲಕ್ಷ್ಮೀ ಯೋಜನೆಯಲ್ಲಿ ಜಿಲ್ಲೆಯಲ್ಲಿ ಅಗಸ್ಟ್‌ವರೆಗೆ 3,15,726 ಹಾಗೂ ಸೆಪ್ಟೆಂಬರ್‌ವರೆಗೆ 3.20 ಲಕ್ಷ ಫಲಾನುಭವಿಗಳಿದ್ದಾರೆ. ಅಕ್ಟೋಬರ್ 15ರ ತನಕ 3.44 ಲಕ್ಷ ಫಲಾನುಭವಿಗಳು ದಾಖಲಾಗಿದ್ದಾರೆ. ಬ್ಯಾಂಕ್ ಖಾತೆಯ ಸಮಸ್ಯೆಗಳಿಂದ 33,419 ಮಂದಿಗೆ ಮೊತ್ತ ಜಮೆ ಅಗಿಲ್ಲ. ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ, ಫಲಾನುಭವಿಗಳಿಗೆ 2000 ರು. ಮೊತ್ತ ಜಮೆ ಆಗಬೇಕು ಎಂದು ಅವರು ಸೂಚನೆ ನೀಡಿದರು. ಗೃಹಜ್ಯೋತಿ ಯೋಜನೆಯಲ್ಲಿ ದ.ಕ. ಜಿಲ್ಲೆಯಲ್ಲಿ ಶೇ. 94ರಷ್ಟು ಗೃಹ ವಿದ್ಯುತ್ ಬಳಕೆದಾರರು ನೋಂದಾಯಿಸಿದ್ದಾರೆ. ಅರ್ಹ ಬಳಕೆದಾರರಿಗೆ ಶೂನ್ಯ ಬಿಲ್ ಕಳುಹಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರದಿಂದ 224 ಕೋಟಿ ರು. ಮೊತ್ತ ಮೆಸ್ಕಾಂಗೆ ಬಂದಿದೆ ಎಂದು ಮೆಸ್ಕಾಂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಗರ್ಭಿಣಿಯರಿಗೆ ಆರೋಗ್ಯ ನೆರವು: ಆರೋಗ್ಯ ಇಲಾಖೆಯು ಗರ್ಭಿಣಿ ಮಹಿಳೆಯರನ್ನು ಗುರುತಿಸಿ, ಸೂಕ್ತ ಆರೋಗ್ಯ ನೆರವು ನೀಡಬೇಕು. ಗರ್ಭಿಣಿಯರಲ್ಲಿ ರಕ್ತದ ಕೊರತೆ ಸಮಸ್ಯೆ ಪ್ರಮುಖವಾಗಿದ್ದು, ಕಬ್ಬಿಣಾಂಶಗಳ ಮಾತ್ರೆ ಸಕಾಲದಲ್ಲಿ ಒದಗಿಸಲು ಆದ್ಯತೆ ನೀಡುವಂತೆ ಉಸ್ತುವಾರಿ ಕಾರ್ಯದರ್ಶಿ ಆರೋಗ್ಯ ಇಲಾಖೆಗೆ ಸೂಚಿಸಿದರು. ದ.ಕ. ಜಿಲ್ಲೆಯ ಸರ್ಕಾರಿ ಅಸ್ಪತ್ರೆಗಳಲ್ಲಿ 60 ಡಯಾಲಿಸಿಸ್ ಯಂತ್ರಗಳಿವೆ. ಮೂಲ್ಕಿ, ಮೂಡುಬಿದಿರೆ, ಕಡಬ ಆಸ್ಪತ್ರೆಗಳಲ್ಲಿ ತಲಾ 3 ಡಯಾಲಿಸಿಸ್ ಯಂತ್ರಗಳಿದ್ದರೂ ಸೂಕ್ತ ಸಿಬ್ಬಂದಿಯಿಲ್ಲದೆ ಕಾರ್ಯಾಚರಿಸುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸಭೆಗೆ ಮಾಹಿತಿ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪ್ರತಿ ತಿಂಗಳು 24 ಲಕ್ಷ ರು. ಮೊತ್ತವನ್ನು ಜಿಲ್ಲೆಯಲ್ಲಿ ಹಾಸ್ಟೆಲ್ ಕಟ್ಟಡಗಳ ಬಾಡಿಗೆಗೆ ಪಾವತಿಸಲಾಗುತ್ತಿದೆ. ಈ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಆದ್ಯತೆ ನೀಡಬೇಕು ಎಂದು ಎಲ್.ಕೆ. ಅತೀಕ್ ಸೂಚಿಸಿದರು. ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಪ್ರಗತಿ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಆನಂದ್ ಕೆ., ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್, ಮಹಾನಗರ ಪಾಲಿಕೆ ಆಯುಕ್ತ ಆನಂದ್ ಮತ್ತಿತರರು ಇದ್ದರು. ಇದಕ್ಕೂ ಮೂದಲು ಜಿಲ್ಲಾ ಉಸ್ತವಾರಿ ಕಾರ್ಯದರ್ಶಿ ಅವರು ನಗರದಲ್ಲಿ ಇರುವ ವಿವಿಧ ಸರ್ಕಾರಿ ಹಾಸ್ಟೆಲ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share this article