ದಶಮಂಟಪ: ಶ್ರೀ ಕೋದಂಡ ರಾಮ ದೇವಾಲಯದಿಂದ ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನೆ ಕಥಾ ಸಾರಾಂಶ

KannadaprabhaNewsNetwork | Published : Oct 17, 2023 12:46 AM

ಸಾರಾಂಶ

ಮಂಟಪದಲ್ಲಿ ಒಟ್ಟು 25 ಕಲಾಕೃತಿಗಳನ್ನು ಅಳವಡಿಸಲಾಗುತ್ತಿದೆ. ಮೈಸೂರು ಜಿಲ್ಲೆಯ ಉದ್ಭೂರಿನ ಮಹದೇವಪ್ಪ ಮತ್ತು ನಾಗರಾಜು ಕಲಾಕೃತಿಗಳನ್ನು ನಿರ್ಮಿಸುತ್ತಿದ್ದಾರೆ. ತಮಿಳುನಾಡಿನ ದಿಂಡಿಗಲ್‌ನ ಜೇಮ್ಸ್ ಲೈಟಿಂಗ್ ಬೋರ್ಡ್ ಇರಲಿದೆ. ಮಡಿಕೇರಿ ಗೌತಮ್ ಮತ್ತು ಸಂದು ಸ್ಟುಡಿಯೋ ಸೆಟ್ಟಿಂಗ್ ಹಾಗೂ ಫಯರ್ ವರ್ಕ್ ಮಾಡಲಿದ್ದಾರೆ.
ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ 49ನೇ ವರ್ಷದ ದಸರಾ ಉತ್ಸವ ಆಚರಣೆಯಲ್ಲಿರುವ ಮಡಿಕೇರಿಯ ಶ್ರೀ ಕೋದಂಡ ರಾಮ ದೇವಾಲಯದ ವತಿಯಿಂದ ಈ ಬಾರಿ ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನ ಎಂಬ ಕಥಾ ಸಾರಾಂಶವನ್ನು ಅಳವಡಿಸಲಾಗಿದೆ. ಮಂಟಪ ನಿರ್ಮಾಣಕ್ಕಾಗಿ ಸುಮಾರು 20 ಲಕ್ಷ ರು. ವೆಚ್ಚ ಮಾಡಲಾಗುತ್ತಿದೆ. ದೇವಾಲಯದ ದಸರಾ ಸಮಿತಿಯ ಅಧ್ಯಕ್ಷರಾಗಿ ಗೋಪಿನಾಥ್, ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ್ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಮೂರು ತಿಂಗಳ ಹಿಂದಷ್ಟೆ ದೇವಾಲಯವನ್ನು ಸುಮಾರು 2 ಕೋಟಿ ರು. ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗಿದ್ದು, ಆಕರ್ಷಣೀಯವಾಗಿದೆ. ಈ ಬಾರಿ ಮಂಟಪ ಸ್ಪರ್ಧೆಯಲ್ಲಿ ಬಹುಮಾನಕ್ಕಾಗಿ ಸಮಿತಿ ಶ್ರಮಿಸುತ್ತಿದೆ. ಮಂಟಪದಲ್ಲಿ ಒಟ್ಟು 25 ಕಲಾಕೃತಿಗಳನ್ನು ಅಳವಡಿಸಲಾಗುತ್ತಿದೆ. ಮೈಸೂರು ಜಿಲ್ಲೆಯ ಉದ್ಭೂರಿನ ಮಹದೇವಪ್ಪ ಮತ್ತು ನಾಗರಾಜು ಕಲಾಕೃತಿಗಳನ್ನು ನಿರ್ಮಿಸುತ್ತಿದ್ದಾರೆ. ತಮಿಳುನಾಡಿನ ದಿಂಡಿಗಲ್‌ನ ಜೇಮ್ಸ್ ಲೈಟಿಂಗ್ ಬೋರ್ಡ್ ಇರಲಿದೆ. ಮಡಿಕೇರಿ ಗೌತಮ್ ಮತ್ತು ಸಂದು ಸ್ಟುಡಿಯೋ ಸೆಟ್ಟಿಂಗ್ ಹಾಗೂ ಫಯರ್ ವರ್ಕ್ ಮಾಡಲಿದ್ದಾರೆ. ದಸರಾ ಸಮಿತಿಯಲ್ಲಿ ಸುಮಾರು 300 ಮಂದಿ ಸದಸ್ಯರಿದ್ದಾರೆ. ಪ್ಲಾಟ್‌ಫಾರ್ಮ್ ಸೆಟ್ಟಿಂಗ್ ಅನ್ನು ಸಮಿತಿಯ ಸದಸ್ಯರೇ ನಿರ್ವಹಿಸಲಿದ್ದಾರೆ. ಟ್ಯಾಕ್ಟರ್ ಸೆಟ್ಟಿಂಗ್ ಹಾಗೂ ಚಲನವಲನವನ್ನು ಹೇಮರಾಜ್ ಮತ್ತು ತಂಡ ವಹಿಸಿಕೊಂಡಿದೆ. ಸೋಮವಾರಪೇಟೆ ಲೋಬೋ ಸೌಂಡ್ಸ್ ಧ್ವನಿವರ್ಧಕವನ್ನು ಅಳವಡಿಸುತ್ತಿದೆ. ಈ ಬಾರಿಯ ದಶಮಂಟಪ ಸಮಿತಿಯ ಅಧ್ಯಕ್ಷರಾಗಿ ಕೋದಂಡರಾಮ ದೇವಾಲಯದ ಮಂಜುನಾಥ್ ಅವರು ವಹಿಸಿದ್ದಾರೆ. ಮಡಿಕೇರಿಯ ಶ್ರೀ ಕೋದಂಡ ರಾಮ ದೇವಾಲಯ ಮಾರುಕಟ್ಟೆಯಿಂದ ಉತ್ತರಕ್ಕೆ ಕಾಲ್ನಡಿಗೆ ದೂರದಲ್ಲಿದೆ. ಮಡಿಕೇರಿ ತೋಟಗಾರಿಕಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೆಚ್.ನಿಂಗಪ್ಪ ಎಂಬುವವರು ಸ್ಥಳೀಯ ಯುವಕರ ಗುಂಪನ್ನು ಕಟ್ಟಿಕೊಂಡು ಸಮಿತಿಯೊಂದನ್ನು ರಚಿಸಿ ದಾನಿಗಳ ನೆರವಿನಿಂದ 1977ರಲ್ಲಿ ಈ ದೇಗುಲವನ್ನು ನಿರ್ಮಿಸಿದರು. ಮೊದಲಿಗೆ ಶ್ರೀ ರಾಮನ ಚಿತ್ರಪಟವನ್ನು ಇಟ್ಟು ಪೂಜೆ ಮಾಡಲಾಗುತ್ತಿತ್ತು. ಇದನ್ನು ನಿಂಗಪ್ಪನವರೇ ನಿರ್ವಹಿಸುತ್ತಿದ್ದರು. ದೇಗುಲಕ್ಕೆ ಮೂರ್ತಿಯು ಬೇಕೆನಿಸಿದಾಗ ಹತ್ತಾರು ಕಡೆ ಅಲೆದು ಕೊನೆಗೆ ಮೈಸೂರು ಅರಮನೆ ಸಮೀಪವಿರುವ ಹಾಲ್ನಳ್ಳಿಯ ಶಿಲ್ಪಿಗಳಿಂದ ಸುಂದರವಾದ ಕೋದಂಡಧಾರಿ ರಾಮ ಜೊತೆಗೆ ಸೀತಾ ಮಾತೆ, ಲಕ್ಷ್ಮಣ ಮತ್ತು ಆಂಜನೇಯ, ಅಲ್ಲದೆ ವಿನಾಯಕನ ವಿಗ್ರವನ್ನು ಕೃಷ್ಣಶಿಲೆಯಿಂದ ನಿರ್ಮಿಸಿ ತರಲಾಯಿತು. ಅದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹಕಾರವಿತ್ತು. ದೇವತಾ ವಿಗ್ರಹಗಳ ಪ್ರತಿಷ್ಠಾಪನೆಯು ವಿಜೃಂಭಣೆಯಿಂದ ನೆರವೇರಿತು. ಇದೇ ಸಂದರ್ಭದಲ್ಲಿ ದೇವಾಲಯದ ವತಿಯಿಂದ ದಸರಾ ಮಂಟಪವನ್ನು ಹೊರಡಿಸಲಾಯಿತು. ದೇವಸ್ಥಾನದ ಆಡಳಿತವನ್ನು ನಿರ್ವಹಿಸುತ್ತಿದ್ದ ನಿಂಗಪ್ಪ ಅವರು ದೇವಸ್ಥಾನವನ್ನು ಸಾರ್ವಜನಿಕರ ಹೆಸರದಲ್ಲಿ ನೋಂದಾಯಿಸಿ ಹಾಗೇಯೆ ಆಡಳಿತವನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶ್ರೀ ರಾಮ ಸೇವಾ ಸಮಿತಿ ಅವರಿಗೆ ವಹಿಸಿಕೊಟ್ಟರು. ನವಗ್ರಹ ಮೂರ್ತಿಗಳನ್ನು ಹೊಂದಿರುವ ದೇಗುಲವು ಸುಂದರವಾಗಿದೆ. ರಾಮ ನವಮಿ, ನವರಾತ್ರಿ ಮುಂತಾದ ಉತ್ಸವಗಳನ್ನು ವಿಜೃಂಭಣೆಯಿಂದ ಇಲ್ಲಿ ಆಚರಿಸಲಾಗುತ್ತಿದೆ. ಈ ವರ್ಷ ದೇವಾಲಯವನ್ನು 2 ಕೋಟಿ ರು. ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ. ಕೋದಂಡ ರಾಮ ದೇವಾಲಯ 49ನೇ ವರ್ಷದ ದಸರಾ ಉತ್ಸವ ಆಚರಿಸುತ್ತಿದೆ. ಮೂರು ತಿಂಗಳ ಹಿಂದಷ್ಟೆ ಪುನರ್ ನಿರ್ಮಾಣಗೊಂಡಿದೆ. ಇದರಿಂದ ನಮಗೆ ಮೊದಲ ದಸರಾ ಆಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಎಲ್ಲ ಸದಸ್ಯರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದೇವೆ. ಈ ಬಾರಿ ಮಂಟಪ ಪ್ರದರ್ಶನದಲ್ಲಿ ಬಹುಮಾನಕ್ಕೆ ಪೈಪೋಟಿ ನೀಡುತ್ತೇವೆ. । ಗೋಪಿನಾಥ್, ಅಧ್ಯಕ್ಷರು ಕೋದಂಡ ರಾಮ ದೇವಾಲಯ ದಸರಾ ಸಮಿತಿ ಮಡಿಕೇರಿ

Share this article