ಕನ್ನಡಪ್ರಭ ವಾರ್ತೆ ಸಕಲೇಶಪುರ ಬಾಲ್ಯ ವಿವಾಹವು ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಅನಿಷ್ಟ ಪದ್ಧತಿಯಾಗಿದ್ದು ಅದನ್ನು ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಾಂತರಾಜ್ ತಿಳಿಸಿದರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯತ್, ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದಲ್ಲಿ ನಡೆದ ಬಾಲ್ಯ ವಿವಾಹ ತಡೆ ಕಾರ್ಯಕ್ರಮದ ಜಾಥಾದಲ್ಲಿ ಮಾತನಾಡಿ, ಬಾಲ್ಯ ವಿವಾಹ ಸಾಮಾಜಿಕ ಪಿಡುಗುಗಳಲ್ಲೊಂದಾಗಿದೆ. ಬಾಲ್ಯ ವಿವಾಹ ಅಪರಾಧವೆಂದು ಕಾನೂನು ಜಾರಿಯಲ್ಲಿದ್ದರೂ ಕೂಡಾ ಜನಸಾಮಾನ್ಯರಿಗೆ ಅರಿವು ಇರುವದಿಲ್ಲ. ಈ ಅನಿಷ್ಟ ಪದ್ಧತಿ ತಡೆಗಟ್ಟುವಲ್ಲಿ ಅತ್ಯಂತ ಕಠಿಣ ಕಾನೂನು ಕ್ರಮಗಳು ಜಾರಿಯಲ್ಲಿದ್ದರೂ ದೇಶದಲ್ಲಿ ಶೇಕಡ 32ರಷ್ಟು ಬಾಲ್ಯ ವಿವಾಹ ನಡೆಯುತ್ತಲಿದೆ ಎಂದು ಹೇಳಿದರು. ಜನರಲ್ಲಿ ಕಾನೂನು ಬಗ್ಗೆ ಜಾಗೃತಿ ಇಲ್ಲದಿದ್ದರೆ ಅಂತಹ ಕಾನೂನು ವ್ಯರ್ಥ, ಅಪ್ರಾಪ್ತರಿಗೆ ಮದುವೆ ಮಾಡುವದರಿಂದ ಸಮಸ್ಯೆಗಳೆ ಉಂಟಾಗುತ್ತವೆ. ಬಾಲ್ಯ ವಿವಾಹವನ್ನು ತಡೆಗಟ್ಟಲು ಗ್ರಾಮ ಪಂಚಾಯತ್ ಪುರಸಭೆ, ತಾಲೂಕು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸುತ್ತವೆ. ದೇಶದಲ್ಲಿ ಶೇಕಡ 32ರಷ್ಟು ಇರುವ ಬಾಲ್ಯ ವಿವಾಹ ಎಂಬ ಅನಿಷ್ಟ ಪದ್ಧತಿಯನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ದೇಶದ ಎಲ್ಲೆಡೆ ಈ ಬಗ್ಗೆ ಅರಿವು ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಜೆಎಂಎಫ್‌ಸಿ ನ್ಯಾಯಾಧೀಶರಾದ ಸುಧೀರ್, ವಕೀಲರ ಸಂಘದ ಅಧ್ಯಕ್ಷ ಪ್ರದೀಪ್, ಸರಕಾರಿ ಅಭಿಯೋಜಕಿ ಅಶ್ವಿತಾ ವಿ ಅಮೀನ್ ಮತ್ತು ವಕೀಲರ ಸಂಘದ ಮಾಜಿ ಅಧ್ಯಕ್ಷ ಶಿವಪ್ರಕಾಶ್, ಇನ್ನಿತರರು ಉಪಸ್ಥಿತರಿದ್ದರು.