ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯ ಹಾಡಿಗಳಲ್ಲಿರುವ ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಸಬೇಕು. ಅಪೌಷ್ಟಿಕತೆ ಉಂಟಾಗದಂತೆ ಗಮನ ಹರಿಸುವುದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಕರ್ತವ್ಯ ಆಗಿದೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಸ್ಪಷ್ಟ ನಿರ್ದೇಶನ ನೀಡಿದರು. ಅಪೌಷ್ಠಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿ ಪಡಿತರ ವಿತರಿಸುತ್ತಿದೆ. ಇವುಗಳ ಸಮರ್ಪಕ ಬಳಕೆ ಆಗಬೇಕು ಎಂದು ಕೃಷ್ಣ ಅವರು ಹೇಳಿದರು.
ದುರ್ಬಲ ವರ್ಗಗಳಿಗೆ ಸರ್ಕಾರದ ಕಾರ್ಯಕ್ರಮ ತಲುಪಿಸುವುದು ಅತೀ ಮುಖ್ಯವಾಗಿದೆ. ವಿದ್ಯಾರ್ಥಿ ನಿಲಯಗಳು, ವಸತಿ ಶಾಲೆಗಳು, ಅಂಗನವಾಡಿ ಸೇರಿದಂತೆ ಎಲ್ಲೆಡೆ ಪೌಷ್ಠಿಕ ಆಹಾರ ಪೂರೈಕೆ ಆಗಬೇಕು ಎಂದರು. ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು. ಸಮವಸ್ತ್ರ, ಲೇಖನ ಸಾಮಗ್ರಿ ವಿತರಿಸಬೇಕು. ಶಾಲಾ ಹಾಜರಾತಿ ವಹಿ ನಿರ್ವಹಣೆ ಸರಿಯಾಗಿ ಇರಬೇಕು. ಪೋಷಕರ ಸಭೆ ನಡೆಸಬೇಕು, ಚಲನವಲನ ಸಮರ್ಪಕ ನಿರ್ವಹಣೆ ಮಾಡಬೇಕು. ಜೊತೆಗೆ ದಾಸ್ತಾನು ಕ್ರಮಬದ್ಧವಾಗಿರಬೇಕು ಎಂದು ಕೃಷ್ಣ ಹೇಳಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಅಂಗನವಾಡಿ, ಶಾಲೆಗಳು, ವಿದ್ಯಾರ್ಥಿ ನಿಲಯಗಳು, ವಸತಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಸಬೇಕು. ಗ್ರಂಥಾಲಯದಲ್ಲಿ ಅಗತ್ಯ ಪುಸ್ತಕಗಳು ಇರಬೇಕು. ಕಂಪ್ಯೂಟರ್ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಇರಬೇಕು ಎಂದು ಸಲಹೆ ಮಾಡಿದರು. ಕೂರ್ಗ್ ಹನಿ ಜಾಗ್ರತೆ ವಹಿಸಿಸಮಿತಿ ಸದಸ್ಯರಾದ ಮಾರುತಿ ಮಾತನಾಡಿ, ಆಹಾರ ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಕೂರ್ಗ್ ಹನಿ ಹೆಸರಿನಲ್ಲಿ ನಕಲಿ ಜೇನುತುಪ್ಪ ಮಾರಾಟ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಪರಿಶೀಲಿಸಬೇಕು ಎಂದರು. ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಇನ್ನಷ್ಟು ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡಬೇಕು. ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.