ಮಾನವ- ಪ್ರಾಣಿ ಸಂಘರ್ಷ ತಡೆಗೆ ಪರಿಣಾಮಕಾರಿ ಕ್ರಮ: ಅರಣ್ಯ ಸಚಿವ ಈಶ್ವರ ಖಂಡ್ರೆ

KannadaprabhaNewsNetwork |  
Published : Nov 03, 2025, 01:45 AM IST
Eshwar Khandre

ಸಾರಾಂಶ

ಸಭೆಯ ಆರಂಭದಲ್ಲಿ ಸಚಿವರು ರೈತರಿಂದ ಸಮಸ್ಯೆಗಳನ್ನು ಆಲಿಸಿದರು. ಮಾನವ- ಪ್ರಾಣಿ ಸಂಘರ್ಷ ತಡೆಯಲು ಅರಣ್ಯ ಇಲಾಖೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು. ಆಧುನಿಕ ತಂತಜ್ಞಾನವನ್ನು ಅಳವಡಿಸಿಕೊಂಡು ಕಾಡುಪ್ರಾಣಿಗಳ ಹಾವಳಿ ತಡೆಯಬೇಕು.

 ಚಾಮರಾಜನಗರ :  ಮಾನವ- ಪ್ರಾಣಿ ಸಂಘರ್ಷವನ್ನು ತಡೆಯಲು ಸರ್ಕಾರದ ವತಿಯಿಂದ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಬಿ. ಈಶ್ವರ ಖಂಡ್ರೆ ಅವರು ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕೆ.ಡಿ.ಪಿ ಸಭಾಂಗಣದಲ್ಲಿ ಭಾನುವಾರ ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹಾಗೂ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮತ್ತು ಲೋಕಸಭಾ ಸದಸ್ಯ ಸುನೀಲ್ ಬೋಸ್, ಶಾಸಕರು, ವಿಧಾನ ಪರಿಷತ್ ಸದಸ್ಯರ ಉಪಸ್ಥಿತಿಯಲ್ಲಿ ಹಿರಿಯ ಅಧಿಕಾರಿಗಳು ಮತ್ತು ರೈತರೊಂದಿಗೆ ಮಾನವ- ಪ್ರಾಣಿ ಸಂಘರ್ಷ ತಡೆ ಕುರಿತು ನಡೆದ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.

ಚಾಮರಾಜನಗರ ಮತ್ತು ಮೈಸೂರು ಸಮೃದ್ಧವಾದ ಅರಣ್ಯ, ಪ್ರಾಣಿ ಸಂಪತ್ತನ್ನು ಹೊಂದಿರುವ ಜಿಲ್ಲೆಗಳಾಗಿದ್ದು, ಇತ್ತೀಚೆಗೆ ಈ ಭಾಗದಲ್ಲಿ ಮಾನವ- ಪ್ರಾಣಿ ಸಂಘರ್ಷ ಹೆಚ್ಚಾಗಿರುವುದು ಕಂಡುಬಂದಿದೆ. ಪ್ರಸ್ತುತ ಹುಲಿ ದಾಳಿಗೆ ೩ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿ ಜೀವವೂ ಅಮೂಲ್ಯವಾಗಿದ್ದು, ಜೀವಕ್ಕೆ ಬೆಲೆ ಕಟ್ಟಲಾಗದು. ಮಾನವ- ಪ್ರಾಣಿ ಸಂಘರ್ಷ ತಡೆಯಲು ಸಾರ್ವಜನಿಕರ ಸಹಕಾರವು ಅವಶ್ಯವಾಗಿದೆ. ಸಂಘರ್ಷವನ್ನು ನಿಯಂತ್ರಣಕ್ಕೆ ನೀಡಿರುವ ಸಲಹೆಗಳನ್ನು ಕ್ರೋಢಿಕರಿಸಿ ಪರಿಣಾಮಕಾರಿ ಹಾಗೂ ಪ್ರಾಮಾಣಿಕವಾಗಿ ಎಲ್ಲಾ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.  

ಸಂಘರ್ಷ ತಡೆಗೆ ಸಮಿತಿ ರಚನೆ:

ಸಾಮಾನ್ಯವಾಗಿ ಮಾನವ- ಪ್ರಾಣಿ ಸಂಘರ್ಷ ಎಲ್ಲೆಡೆಯೂ ಇದೆ. ಈ ಸಾಲಿನಲ್ಲಿ ಆನೆ, ಹುಲಿ, ಚಿರತೆ ಸೇರಿ ಇತರೆ ಪ್ರಾಣಿಗಳಿಂದ 30  ಜನರ ಪ್ರಾಣ ಹಾನಿಯಾಗಿದೆ. ಇದನ್ನು ಶೂನ್ಯಕ್ಕೆ ತರಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದರ ಗಂಭೀರತೆಯನ್ನು ಮನಗಂಡು ತಳಮಟ್ಟದ ಸಮಸ್ಯೆಗಳನ್ನು ಅರಿಯಲು ಸ್ಥಳೀಯವಾಗಿ ಸಭೆ ಆಯೋಜಿಸಲಾಗಿದೆ. ಮಾನವ- ಪ್ರಾಣಿ ಸಂಘರ್ಷ ತಡೆಗಾಗಿ ಅರಣ್ಯ ಇಲಾಖೆಯಿಂದ 2 - 3 ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ವರದಿಯನ್ನಾಧರಿಸಿ ಶಾಶ್ವತ ಪರಿಹಾರ ಕ್ರಮಗಳನ್ನು ವಹಿಸಲಾಗುತ್ತದೆ ಎಂದು ಸಚಿವರಾದ ಖಂಡ್ರೆ ಅವರು ತಿಳಿಸಿದರು.

ಬೆಳೆ ಹಾನಿಗೆ ಕಳೆದ ವರ್ಷ 46 ಕೋಟಿ ರು. ಹಾಗೂ ಈ ಸಾಲಿನಲ್ಲಿ ಇದುವರೆಗೆ 36  ಕೋಟಿ ರು. ವಿತರಿಸಲಾಗಿದೆ. ಜನ, ಜಾನುವಾರುಗಳ ಪ್ರಾಣ ಹಾನಿಗೆ ನಿಗದಿಯಾಗಿರುವ ಪರಿಹಾರನ್ನು ವೈಜ್ಞಾನಿಕವಾಗಿ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು. ಬಂಡೀಪುರ ವ್ಯಾಪ್ತಿಯಲ್ಲಿ ೧೯೭೨ರಲ್ಲಿ ೧೨ ಹುಲಿಗಳಿದ್ದು, ಈಗ 560 ಕ್ಕೆ ಏರಿಕೆಯಾಗಿದೆ. ಪ್ರಾಣಿಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ವ್ಯಾಪ್ತಿಯು ವಿಸ್ತಾರವಾಗಬೇಕು. ಹುಲ್ಲುಗಾವಲು ಪ್ರದೇಶವು ದ್ವಿಗುಣವಾಗಬೇಕಿದೆ ಎಂದರು.

ಸಮಗ್ರ ಕಮ್ಯಾಂಡೋ ಕೇಂದ್ರ ಆರಂಭ:

ಪ್ರಾಣಿ ದಾಳಿ ತಡೆಯಲು ಕಾರ್ಯಪಡೆಗೆ ತರಬೇತಿ ನೀಡಿ ಗಸ್ತು ಸಂಚಾರದ ಪರಿಮಿತಿಯನ್ನು ಹೆಚ್ಚಿಸಲು ಕಾರ್ಯಪಡೆಯಲ್ಲಿ ಕಾಡಿನ ಬಗ್ಗೆ ಸಂಪೂರ್ಣ ಜ್ಞಾನವಿರುವ ಅದಿವಾಸಿಗಳು, ಅರಣ್ಯದಂಚಿನ ಜನರನ್ನು ಸೇರಿಸಿಕೊಳ್ಳಲಾಗುವುದು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹುಲಿ, ಚಿರತೆಯಂತಹ ವನ್ಯಜೀವಿಗಳನ್ನು ಕಾಡಿಗೆ ಮರಳಿಸಲು ಸಮಗ್ರ ಕಮ್ಯಾಂಡೋ ಕೇಂದ್ರ ತೆರೆಯಲಾಗುವುದು. ಇಲಾಖೆಯ ಹಿರಿಯ ಅಧಿಕಾರಿಗಳು ಸಮಸ್ಯೆ ಇರುವ ಅರಣ್ಯಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ಅರಣ್ಯ ಇಲಾಖೆಗೆ ಪಶುವೈದ್ಯಾಧಿಕಾರಿಗಳನ್ನು ನೇಮಿಸಿಕೊಳ್ಳುವ ಸಂಬಂಧ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಹುಲಿ. ಆನೆ ಸೆರೆ ಕಾರ್ಯಾಚರಣೆ ವೇಳೆ ಪ್ರಾಮಾಣಿಕ ಮಾನದಂಡ ಪಾಲನೆ ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ. ಕಾರ್ಯಾಚರಣೆ ಸಿಬ್ಬಂದಿಗೆ ಸೂಕ್ತ ತರಬೇತಿ ಕೊಡಲಾಗುವುದು ಎಂದರು.

ಅರಣ್ಯ ವಾಸಿಗಳಿಗೆ ತೊಂದರೆ ನೀಡದಿರಿ:

ಅರಣ್ಯ ಹಾಗೂ ಅರಣ್ಯಪ್ರದೇಶದ ಸುತ್ತಲಿನ ಸ್ಥಳಗಳಲ್ಲಿ ಯಾವುದೇ ಗಣಿಗಾರಿಕೆ ಹಾಗೂ ಅಕ್ರಮ ರೆಸಾರ್ಟ್‌ಗಳಿಗೆ ಸರ್ಕಾರದಿಂದ ಅನುಮತಿ ನೀಡಿಲ್ಲ. ಅಂತಹ ಪ್ರಕರಣಗಳಿದ್ದರೆ ಸೂಕ್ತ ತನಿಖೆ ನಡೆಸಿ ಕ್ರಮ ವಹಿಸಲಾಗುತ್ತದೆ. ಅರಣ್ಯದಲ್ಲಿರುವ ಆದಿವಾಸಿಗಳಿಗೆ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆಗೆ ಅಧಿಕಾರಿಗಳು ತೊಂದರೆ ನೀಡಬಾರದು ಎಂದು ಸಚಿವರಾದ ಈಶ್ವರ ಖಂಡ್ರೆಯವರು ತಿಳಿಸಿದರು.

ಇದೇ ವೇಳೆ ಮಾತನಾಡಿದ ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು, ಜಿಲ್ಲೆಯ ಅರಣ್ಯ ಪ್ರದೇಶಗಳಿಗೆ ಮೂಲಸೌಲಭ್ಯಗಳನ್ನು ಒದಗಿಸುವ ಸಂಬಂಧ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಹಾಗೂ ವಿದ್ಯುತ್ ಸರಬರಾಜು ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದರು. 

ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಚಿವರು, ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆ ನೀಡದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಮಾನವ- ಪ್ರಾಣಿ ಸಂಘರ್ಷ ತಡೆಯುವ ಸಂಬಂಧ ಸಭೆಯ ಗಂಭೀರತೆ ಸರ್ಕಾರಕ್ಕೆ ಮನವರಿಕೆಯಾಗಿದೆ. ಈ ಭಾಗದಲ್ಲಿ ಆಗಿದ್ದಾಂಗ್ಗೆ ಸಮಸ್ಯೆಗಳು ಸೃಷ್ಟಿಯಾಗುತ್ತಲೇ ಇವೆ. ಕಾಡುಪ್ರಾಣಿ ಹಾವಳಿ ತಡೆಯಲು ಎಲ್ಲರ ಸಹಕಾರವು ಅವಶ್ಯಕವಾಗಿದೆ. ವನ್ಯಜೀವಿಗಳಿಂದ ಎದುರಾಗುತ್ತಿರುವ ಸಮಸ್ಯೆಗಳ ಬಗೆಹರಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು. ಲೋಕಸಭಾ ಸದಸ್ಯ ಸುನೀಲ್ ಬೋಸ್ ಮಾತನಾಡಿದರು.

ಸಭೆಯ ಆರಂಭದಲ್ಲಿ ಸಚಿವರು ರೈತರಿಂದ ಸಮಸ್ಯೆಗಳನ್ನು ಆಲಿಸಿದರು. ಮಾನವ - ಪ್ರಾಣಿ ಸಂಘರ್ಷ ತಡೆಯಲು ಅರಣ್ಯ ಇಲಾಖೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು. ಆಧುನಿಕ ತಂತಜ್ಞಾನವನ್ನು ಅಳವಡಿಸಿಕೊಂಡು ಕಾಡುಪ್ರಾಣಿಗಳ ಹಾವಳಿ ತಡೆಯಬೇಕು. ರೈತರಿಗೆ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ. ಬೆಳೆನಷ್ಟ ಹಾಗೂ ಜೀವಹಾನಿಗೆ ನೀಡುವ ಪರಿಹಾರ ಶೀಘ್ರವಾಗಿ ನೀಡಬೇಕು ಹಾಗೂ ವೈಜ್ಞಾನಿಕವಾಗಿರಬೇಕು. ಅಕ್ರಮ ರೆಸಾರ್ಟ್ ಹಾಗೂ ಗಣಿಗಾರಿಕೆಗೆ ಅನುಮತಿ ನೀಡಬಾರದು. ಅರಣ್ಯಪ್ರದೇಶದಲ್ಲಿ ಹುಲ್ಲುಗಾಲು ಹೆಚ್ಚಿಸಬೇಕು ಎಂಬುದು ಸೇರಿದಂತೆ ಸಾಕಷ್ಟು ವಿಷಯಗಳನ್ನು ರೈತರು ಸಭೆಯ ಗಮನಕ್ಕೆ ತಂದರು.

ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಚ್.ಎಂ. ಗಣೇಶ್ ಪ್ರಸಾದ್, ಎಂ.ಆರ್. ಮಂಜುನಾಥ್, ದರ್ಶನ್ ಧ್ರುವನಾರಾಯಣ, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ. ಶಿವಕುಮಾರ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ನಗರಸಭೆ ಅಧ್ಯಕ್ಷ ಎಸ್. ಸುರೇಶ್, ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ತಬ್ರೇಜ್ ಆಲಂ ಷರೀಫ್, ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮನೋಜ್‌ಕುಮಾರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್, ಪ್ರಭಾಸ್‌ಚಂದ್ರ ರೇ, ಬಿ.ಪಿ. ರವಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಜಿಪಂ ಸಿಇಒ ಮೋನಾ ರೋತ್, ಮೈಸೂರು ಜಿಪಂ ಸಿಇಒ ಯುಕೇಶ್‌ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಮಹೇಶ್ ಪ್ರಭು, ಹೊನ್ನೂರು ಪ್ರಕಾಶ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಅಣಗಳ್ಳಿ ಬಸವರಾಜು, ಹೊನ್ನೂರು ಬಸವಣ್ಣ, ಹೆಗ್ಗವಾಡಿಪುರ ಮಹೇಶ್ ಕುಮಾರ್‌ , ಆರ್. ಮಹದೇವ್, ವೆಂಕಟರಮಣಸ್ವಾಮಿ ಪಾಪು, ರಾಜೇಂದ್ರ ರಾಮಾಪುರ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

PREV
Read more Articles on

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ