ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯ ಸರ್ ಎಂ ಕ್ರೀಡಾಂಗಣ ಉನ್ನತೀಕರಣಗೊಳಿಸಿ ಸಿಂಥೆಟಿಕ್ ಟ್ರಾಕ್ ಅಳವಡಿಸಲುವ ಕಾಮಗಾರಿಗೆ ಕನ್ನಡ ರಾಜ್ಯೋತ್ಸವ ದಿನವಾದ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ಚಾಲನೆ ನೀಡಿದರು. ಜಿಲ್ಲಾ ಕೇಂದ್ರದಲ್ಲಿ ಒಂದು ಉತ್ತಮ ಹೈಟೆಕ್ ಸ್ಪರ್ಷ ನೀಡಿ ಕ್ರೀಡಾಂಗಣ ನಿರ್ಮಾಣಕ್ಕೆ ನೀಲ ನಕ್ಷೆ ತಯಾರಿಸಿ ಅದರಂತೆ ಕ್ರೀಡಾಂಗಣ ಅಪ್ ಡೇಟ್ ಮಾಡಿಸುವುದಾಗಿ ಸಚಿವ ಡಾ ಎಂ.ಸಿ.ಸುಧಾಕರ್ ಈ ಹಿಂದೆ ಭರವಸೆ ನೀಡಿದ್ದರು. ಅದಕ್ಕಾಗಿ ಬಜೆಟ್‌ನಲ್ಲಿ 70 ಕೋಟಿ ರು.ಗಳನ್ನು ಮೀಸಲಿಡಲಾಗಿದ್ದು, ಈಗ ಶಂಕುಸ್ಥಾಪನೆ ನೆರವೇರಿಸಲಾಯಿತು.24ರಂದು ಸಿಎಂ ಚಾಲನೆ
ಈ ವೇಳೆ ಮಾತನಾಡಿದ ಸಚಿವ ಡಾ.ಎಂ.ಸಿ.ಸುಧಾಕರ್, ಸರ್ ಎಂವಿ ಕ್ರೀಡಾಂಗಣದಲ್ಲಿರುವ ಸಮರ್ಪಕ ಟ್ರಾಕ್ ಇಲ್ಲದೆ ಕ್ರೀಡಾಪಟುಗಳಿಗೆ ತೊಂದರೆ ಆಗುತ್ತಿತ್ತು. ಒಳಾಂಗಣ ಟೆನ್ನಿಸ್ ಕೋರ್ಟ್, ಕಬಡ್ಡಿ ಕೋರ್ಟ್ ಸಹ ಸರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ವ್ಯವಸ್ಥಿತಿತ ಕ್ರೀಡಾಂಗಣ ನಿರ್ಮಾಣಕ್ಕೆ ಸುಮಾರು 69 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲು ನವೆಂಬರ್ 24 ರಂದು ಸಿಎಂ ಸಿದ್ದರಾಮಯ್ಯ ಶಿಡ್ಲಘಟ್ಟದಿಂದಲೆ ಚಾಲನೆ ನೀಡಲಿದ್ದಾರೆ ಎಂದರು.ಚಿಂತಾಮಣಿಯ ಜಾನ್ಸಿರಾಣಿ ಕ್ರೀಡಾಂಗಣದಂತೆ ಅದಕ್ಕಿಂತ ಹೈ ಟೆಕ್ ಕ್ರೀಡಾಂಗಣವಾಗಿ ರೂಪುಗೊಳ್ಳಲಿದೆ. ಸಿಂತೆಟಿಕ್ ಟ್ರಾಕ್, ಸೀನಿಯರ್ಸ್ ವಾಕಿಂಗ್ ಟ್ರಾಕ್, ಕ್ರಿಕೆಟ್ ಟ್ರಾಕ್ ಹೀಗೆ ನಾನಾ ವಿಭಾಗದ ಆಟಗಳ ಮೈದಾನ ಇದಾಗಲಿದೆ ಎಂದರು. ಈ ವೇಳೆ ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಓ ವೈ.ನವೀನ್ ಭಟ್, ಎಸ್ಪಿ ಕುಶಲ್ ಚೌಕ್ಸೆ, ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಜಿಲ್ಲಾಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಯೋಜನಾಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ನಗರಸಭೆ ಉಪಾಧ್ಯಕ್ಷ ಜೆ.ನಾಗರಾಜ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಎಡಿಸಿ ಡಾ. ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್ ಇದ್ದರು.