ಬಳ್ಳಾರಿ: ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ಮಕ್ಕಳ ನಡುವಿನ ಅಂತರ ಕಾಯ್ದುಕೊಳ್ಳಲು ಸರ್ಕಾರವು ಹೊಸ ಹೊಸ ವಿಧಾನ ಜಾರಿಗೆ ತರುತ್ತಿದೆ. ಈಗಾಗಲೇ ಚುಚ್ಚುಮದ್ದು, ಪಿಪಿಐಯುಸಿಡಿ, ಛಾಯಾ ಮಾತ್ರೆ ಹಾಗೂ ನಿರೋಧ್ ಸೇವೆಗಳು ಲಭ್ಯವಿದ್ದು ಇದೀಗ ಹೊಸದಾಗಿ ಚರ್ಮದಡಿಯ ಗರ್ಭನಿರೋಧಕ ಇಂಪ್ಲಾಂಟ್ ಅಳವಡಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಕುಟುಂಬ ಕಲ್ಯಾಣ ಕಾರ್ಯಕ್ರಮ ಉಪನಿರ್ದೇಶಕ ಡಾ.ಚಂದ್ರಿಕಾ ಬಿ.ಆರ್. ತಿಳಿಸಿದರು.
ಬೆಂಕಿಕಡ್ಡಿ ಗಾತ್ರದ ಈ ಸಣ್ಣ, ಹೊಂದಿಕೊಳ್ಳುವ ರಾಡ್ ಅನ್ನು ತರಬೇತಿ ಪಡೆದ ತಜ್ಞ ವೈದ್ಯರು ಮಹಿಳೆಯ ಮೇಲ್ತೋಳಿನ ಚರ್ಮದ ಕೆಳಗೆ ಅಳವಡಿಸುತ್ತಾರೆ. ಒಮ್ಮೆ ಅಳವಡಿಸಿದರೆ ಇದು ಗರ್ಭಧಾರಣೆಯಿಂದ ಸುಮಾರು 3 ವರ್ಷಗಳವರೆಗೆ ರಕ್ಷಣೆ ನೀಡುತ್ತದೆ. ಇದು ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವುದನ್ನು ತಡೆಯುತ್ತದೆ, ಗರ್ಭಕಂಠದ ಲೋಳೆ ದಪ್ಪವಾಗಿಸಿ ವೀರ್ಯಾಣುಗಳು ಅಂಡಾಣುವನ್ನು ಸೇರದಂತೆ ತಡೆಯುತ್ತದೆ ಹಾಗೂ ಗರ್ಭಕೋಶದ ಒಳಪದರ ತೆಳುವಾಗಿಸಿ ಫಲವತ್ತಾದ ಅಂಡಾಣು ಅಳವಡಿಕೆಯಾಗುವುದನ್ನು ತಡೆಯುತ್ತದೆ ಎಂದು ತಿಳಿಸಿದರು.
ಇದು ಹಾರ್ಮೋನಿನ, ಹೆಚ್ಚು ಪರಿಣಾಮಕಾರಿಯಾದ ಮತ್ತು ಹಿಮ್ಮುಖಗೊಳಿಸಬಹುದಾದ ವಿಧಾನವಾಗಿದೆ. ಅರ್ಹ ದಂಪತಿಗಳಿಗೆ ಈ ಸೌಲಭ್ಯ ಒದಗಿಸುವುದರಿಂದ ಮಹಿಳೆಯರ ಆರೋಗ್ಯ ರಕ್ಷಣೆಯಾಗುವುದರ ಜತೆಗೆ ತಾಯಿ ಮತ್ತು ಶಿಶು ಮರಣ ಪ್ರಮಾಣ ಗಣನೀಯವಾಗಿ ತಗ್ಗಿಸಬಹುದು ಎಂದು ವಿವರಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಲಕಾನಂದ ಡಿ. ಮಳಗಿ ಮಾತನಾಡಿ, ಇದು ಅತ್ಯಂತ ಉಪಯುಕ್ತ ತರಬೇತಿಯಾಗಿದ್ದು, ವೈದ್ಯರು ಮತ್ತು ಸಿಬ್ಬಂದಿ ಇದರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಮೊದಲು ಅರ್ಹ ದಂಪತಿಗಳಿಗೆ ಈ ಬಗ್ಗೆ ಸೂಕ್ತ ಅರಿವು ಮೂಡಿಸಿ ನಂತರ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಕರೆ ನೀಡಿದರು.