ಸಮಸ್ಯೆಗಳ ಪರಿಹರಿಸಲು ಜನಸಂಪರ್ಕ ಸಭೆ ಸದುಪಕ್ಕೆ ಕರೆ

KannadaprabhaNewsNetwork | Published : Jan 26, 2024 1:49 AM

ಸಾರಾಂಶ

ಅತ್ತಿಕೊಡಿಗೆ ಗ್ರಾಪಂ ವ್ಯಾಪ್ತಿಯ ಆನೆಕಲ್ಲು ಮಠದ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ ಜನಸಾಮಾನ್ಯರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ದೂರದ ಕಚೇರಿಗಳಿಗೆ ಹೋಗಿ ಸಾಲುಗಟ್ಟಿ ನಿಂತು ಸಮಯ ಶ್ರಮ ವ್ಯರ್ಥ ಮಾಡಿಕೊಳ್ಳಬಾರದು ಎನ್ನುವ ದೃಷ್ಟಿಯಿಂದ ಸರ್ಕಾರ ಅಧಿಕಾರಿಗಳ ಜನಸಂಪರ್ಕ ಸಭೆ ಏರ್ಪಡಿಸುತ್ತಿದೆ. ಇದರ ಸೌಲಭ್ಯವನ್ನು ಎಲ್ಲಾ ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆಮಾಡಿದರು.

- ಅತ್ತಿಕೊಡಿಗೆ ಗ್ರಾಪಂ ಆನೆಕಲ್ಲು ಮಠದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ

ಕನ್ನಡಪ್ರಭ ವಾರ್ತೆ, ಕೊಪ್ಪ

ಜನಸಾಮಾನ್ಯರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ದೂರದ ಕಚೇರಿಗಳಿಗೆ ಹೋಗಿ ಸಾಲುಗಟ್ಟಿ ನಿಂತು ಸಮಯ ಶ್ರಮ ವ್ಯರ್ಥ ಮಾಡಿಕೊಳ್ಳಬಾರದು ಎನ್ನುವ ದೃಷ್ಟಿಯಿಂದ ಸರ್ಕಾರ ಅಧಿಕಾರಿಗಳ ಜನಸಂಪರ್ಕ ಸಭೆ ಏರ್ಪಡಿಸುತ್ತಿದೆ. ಇದರ ಸೌಲಭ್ಯವನ್ನು ಎಲ್ಲಾ ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಅತ್ತಿಕೊಡಿಗೆ ಗ್ರಾಪಂ ವ್ಯಾಪ್ತಿಯ ಆನೆಕಲ್ಲು ಮಠದ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಜನಸಂಪರ್ಕ ಸಭೆಯಲ್ಲಿ ತಾಲೂಕು ಆಡಳಿತ ಸೇರಿದಂತೆ ಇತರೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಬಂದಿರುವುದರಿಂದ ಆಯಾ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸಿದಲ್ಲಿ ಅವುಗಳ ಪರಿಶೀಲನೆ ನಡೆಸಿ ಇತ್ಯರ್ಥಗೊಳಿಸಲು ಸಾಧ್ಯವಾಗಲಿದೆ. ಇದು ಜನಸಾಮಾನ್ಯರಿಗೆ ನಡೆಯುವ ಕಾರ್ಯಕ್ರಮವಾಗಿರುವುದರಿಂದ ಗ್ರಾಮಸ್ಥರ ಭಾಗವಹಿಸುವಿಕೆ ಮುಖ್ಯ ಎಂದರು.

ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ ಮಾತನಾಡಿ ಗ್ರಾಮಸ್ಥರು ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಂಡಾಗ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ರಸ್ತೆ, ಕುಡಿಯುವ ನೀರು, ಬಾಕ್ಸ್ ಚರಂಡಿ, 53, 94ಸಿ ಹಕ್ಕುಪತ್ರಗಳು, ವಿದ್ಯುತ್, ಕಾಡುಪ್ರಾಣಿಗಳ ಹಾವಳಿ, ಇನ್ನಿತರ ಅರಣ್ಯ ಇಲಾಖೆಯ ಸಮಸ್ಯೆಗಳ ಕುರಿತು ಸುಮಾರು 36 ಅರ್ಜಿಗಳು ಸಲ್ಲಿಕೆಯಾದವು. ಶಾಸಕ ಟಿ.ಡಿ. ರಾಜೇಗೌಡ ಅರ್ಜಿಗಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮವಹಿಸುವಂತೆ ತಿಳಿಸಿದರು.

ಮೆಣಸಿನಹಾಡ್ಯದ 2, ಬೆಂಡೆಹಕ್ಲುವಿನ 1ಸೇರಿದಂತೆ ಮೂವರಿಗೆ ಮನೆ ಕಟ್ಟಿಕೊಳ್ಳಲು ನೀಲನಕ್ಷೆ ನೀಡಲಾಯಿತು. ಸುಮಾರು 8 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅತ್ತಿಕೊಡಿಗೆ ಗ್ರಾಪಂ ವ್ಯಾಪ್ತಿಯ ಸಣ್ಣಕೆರೆ, ದೊಡ್ಡ ಬಿಳಾಲು, ಸುಬ್ಬನಕೊಡಿಗೆ ಈ ಮೂರು ಆಶ್ರಯ ಲೇಔಟ್‌ಗಳ ಹಕ್ಕುಪತ್ರ ಸಮಸ್ಯೆಯನ್ನು ಸಂಬಂಧಿಸಿದ ಇಲಾಖೆಗೆ ತಿಳಿಸಿ ಪರಿಹರಿಸಿದ ಶಾಸಕರು ಜನಸಂಪರ್ಕ ಸಭೆಯಲ್ಲಿ 42 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು.

ಆಹಾರ, ಆರೋಗ್ಯ, ಪಶು ವೈದ್ಯ, ಶಿಕ್ಷಣ, ಸಮಾಜ ಕಲ್ಯಾಣ, ಬಿಸಿಎಂ, ತೋಟಗಾರಿಕೆ, ಕೃಷಿ, ಇನ್ನಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದು ತಮ್ಮ ತಮ್ಮ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಪರವಾಗಿ ಶಾಸಕ ಟಿ.ಡಿ.ರಾಜೇಗೌಡರನ್ನು ಸನ್ಮಾನಿಸಲಾಯಿತು. ಅತ್ತಿಕೊಡಿಗೆ ಗ್ರಾಪಂ ಅಧ್ಯಕ್ಷ ಟಿ.ಗೋಪಾಲಕೃಷ್ಣ, ಸದಸ್ಯರಾದ ಬಿ.ಆರ್.ವೆಂಕಟಕೃಷ್ಣ ಹೆಬ್ಬಾರ್, ಅಕ್ಷತಾ ರಾಜ್ ಕುಮಾರ್, ಪ್ರೇಮಾ ಎಂ.ಎಸ್, ಕಿಟ್ಟಯ್ಯ ಎಲ್, ಪುಟ್ಟಯ್ಯ, ಜ್ಯೋತಿ, ತಾಪಂ ಸಹಾಯಕ ನಿರ್ದೇಶಕ ಚೇತನ್, ಮೇಗುಂದಾ ಹೋಬಳಿ ಆರ್.ಐ. ಸುಧೀರ್, ಆರ್.ಎಫ್.ಒ ರಂಗನಾಥ್, ವೃತ್ತನಿರೀಕ್ಷಕ ಮಂಜು, ಗ್ರಾಮ ಲೆಕ್ಕಿಗ ಸೀತಾರಾಮ, ಸ್ಥಳೀಯ ಮುಖಂಡರಾದ ಡಿ.ಎಸ್.ಸತೀಶ್ ಮುಂತಾದವರಿದ್ದರು.

Share this article