ಪಹಣಿ ತಿದ್ದುಪಡಿ ಆಂದೋಲನ ಮಾದರಿಯಲ್ಲಿ ಪೌತಿ ಖಾತೆ ಮಾಡುವಂತೆ ಮನವಿ ಮಾಡಿದರು. ಭ್ರಷ್ಟ ನೌಕರರ ಕಾಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ದರಕಾಸ್ತು ಸಮಿತಿಯಲ್ಲಿ ಭೂಮಿ ಮಂಜೂರಾಗಿ ಭೂಮಿಗೆ ಸರ್ಕಾರ ನಿಗದಿಪಡಿಸಿದ ಕಿಮ್ಮತ್ತು ಹಣ ಪಾವತಿಸಿದ್ದರೂ ನೂರಾರು ರೈತರು ಇದುವರೆಗೂ ಅಗತ್ಯ ಸಾಗುವಳಿ ಚೀಟಿ ಪಡೆಯಲಾಗಿಲ್ಲ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರೈತರಿಗೆ ಪಹಣಿ ತಿದ್ದುಪಡಿ ಮತ್ತು ಪೌತಿ ಖಾತೆಗಳನ್ನು ಮಾಡಿಕೊಡಲು ಆಂದೋಲನದ ಮಾದರಿಯಲ್ಲಿ ಶ್ರಮ ವಹಿಸುತ್ತಿದ್ದೇನೆ ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಕಂದಾಯ ಇಲಾಖೆ ಸಭಾಂಗಣದಲ್ಲಿ ತಾಲೂಕಿನ ಶೀಳನೆರೆ ಹೋಬಳಿಯ ರೈತರ ಪಹಣಿ ತಿದ್ದುಪಡಿ ಹಾಗೂ ರೈತರ ಕುಂದು ಕೊರತೆ ಸಭೆಗೂ ಮುನ್ನ ರೈತ ಮುಖಂಡರೊಂದಿಗೆ ಮಾತನಾಡಿದ ಎಸಿ, ರೈತರ ಹಿತದೃಷ್ಟಿಯಿಂದ ನಾನು ನನ್ನ ವ್ಯಾಪ್ತಿಯ ನಾಲ್ಕು ತಾಲೂಕುಗಳಲ್ಲಿಯೂ ಪಹಣಿ ತಿದ್ದುಪಡಿ ಮತ್ತು ಪೌತಿ ಖಾತೆ ಆಂದೋಲನ ಮಾಡಲಾಗುತ್ತಿದೆ ಎಂದರು.
ರೈತರನ್ನು ಅನಗತ್ಯವಾಗಿ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಅಲೆದಾಡಿಸದೆ ವಾರದ ನಾಲ್ಕು ದಿನಗಳನ್ನು ಒಂದೂಂದು ತಾಲೂಕಿಗೆ ಮೀಸಲಿಟ್ಟು ಆಯಾ ತಾಲೂಕು ಕಚೇರಿಯಲ್ಲಿಯೇ ಕುಳಿತು ರೈತರ ಕೆಲಸ ಮಾಡುತ್ತಿದ್ದೇನೆ. ಅದರಂತೆ ಪ್ರತಿ ಶುಕ್ರವಾರ ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸಿ ರೈತರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ಈ ಭಾಗದ ಎ.ಸಿ ಕೋರ್ಟ್ ನಡೆಸಿ ರೈತರ ಅನಗತ್ಯ ತಿರುಗಾಟಕ್ಕೆ ಅಂತ್ಯ ಹಾಡುವ ಪ್ರಯತ್ನ ಆರಂಭಿಸಿದ್ದೇನೆ. ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಉತ್ತಮವಾಗಿ ಸ್ಪಂದಿಸುತ್ತಿದ್ದು, ರೈತರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಮನವಿ ಮಾಡಿದರು.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಪಹಣಿ ತಿದ್ದುಪಡಿ ಆಂದೋಲನ ಮಾದರಿಯಲ್ಲಿ ಪೌತಿ ಖಾತೆ ಮಾಡುವಂತೆ ಮನವಿ ಮಾಡಿದರು. ಭ್ರಷ್ಟ ನೌಕರರ ಕಾಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ದರಕಾಸ್ತು ಸಮಿತಿಯಲ್ಲಿ ಭೂಮಿ ಮಂಜೂರಾಗಿ ಭೂಮಿಗೆ ಸರ್ಕಾರ ನಿಗದಿಪಡಿಸಿದ ಕಿಮ್ಮತ್ತು ಹಣ ಪಾವತಿಸಿದ್ದರೂ ನೂರಾರು ರೈತರು ಇದುವರೆಗೂ ಅಗತ್ಯ ಸಾಗುವಳಿ ಚೀಟಿ ಪಡೆಯಲಾಗಿಲ್ಲ. ಪಹಣಿ ತಿದ್ದುಪಡಿ ಮಾದರಿಯಲ್ಲಿಯೇ ಸಾಗುವಳಿ ಚೀಟಿ ನೀಡುವ ಆಂದೋಲನ ಆರಂಭಿಸುವಂತೆ ಮನವಿ ಮಾಡಿದರು.
ಸಾಗುವಳಿ ಚೀಟಿ ಪಡೆಯಬೇಕಾಗಿರುವ ರೈತರು ನೇರವಾಗಿ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಹಾಕಿಕೊಂಡ ರೈತರಿಗೆ ದರಕಾಸ್ತು ಸಾಗುವಳಿ ಚೀಟಿ ನೀಡಲು ತುರ್ತು ಕ್ರಮವಹಿಸಬೇಕು. ತಾಲೂಕು ಕಚೇರಿಯಲ್ಲಿ ಯಾವುದೇ ಸಿಬ್ಬಂದಿ ಅಥವಾ ಮಧ್ಯವರ್ತಿಗಳು ಹಣಕ್ಕೆ ಒತ್ತಾಯಿಸಿ ಫೈಲ್ ಪೆಂಡಿಂಗ್ ಇಟ್ಟಿದ್ದರೆ ತಕ್ಷಣವೇ ನೇರವಾಗಿ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು ಅಥವಾ ರಾಜ್ಯ ರೈತಸಂಘಕ್ಕೆ ದೂರು ನೀಡುವಂತೆ ಮನವಿ ಮಾಡಿದರು.
ಈ ವೇಳೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಉಪ ತಹಸೀಲ್ದಾರ್ ರವಿ, ಲಕ್ಷ್ಮೀಕಾಂತ್ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಪಹಣಿ ತಿದ್ದುಪಡಿ ಕಾರ್ಯದಲ್ಲಿದ್ದರು. ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಸಿಂಧುಘಟ್ಟ ಮುದ್ದುಕುಮಾರ್, ನಗರೂರು ಕುಮಾರ್, ಮಂಚನಹಳ್ಳಿ ನಾಗೇಗೌಡ, ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ಕರೋಟಿ ತಮ್ಮಯ್ಯ, ಚೌಡೇನಹಳ್ಳಿ ನಾರಾಯಣಗೌಡ, ಕೃಷ್ಣಾಪುರ ರಾಜಣ್ಣ ಸೇರಿದಂತೆ ಹಲವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.