ಚಲನಚಿತ್ರಗಳಲ್ಲಿ ನಟರು ಮತ್ತು ಕಲಾವಿದರು ಅಭಿನಯಿಸುವ ಚಿತ್ರದಲ್ಲಿ ಧೂಮಪಾನ ಹಾಗೂ ತಂಬಾಕು ಸೇವನೆಯ ದೃಶ್ಯಾವಳಿ ನೋಡಿ ಕುತೂಹಲಕ್ಕೆ ಒಳಗಾಗಿ ಯುವಜನತೆ ತಂಬಾಕು ಉತ್ಪನ್ನ ಸೇವನೆಯ ದಾಸರಾಗುತ್ತಿರುವುದು ಹೆಚ್ಚಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ. ಶಿಲ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಲನಚಿತ್ರಗಳಲ್ಲಿ ನಟರು ಮತ್ತು ಕಲಾವಿದರು ಅಭಿನಯಿಸುವ ಚಿತ್ರದಲ್ಲಿ ಧೂಮಪಾನ ಹಾಗೂ ತಂಬಾಕು ಸೇವನೆಯ ದೃಶ್ಯಾವಳಿ ನೋಡಿ ಕುತೂಹಲಕ್ಕೆ ಒಳಗಾಗಿ ಯುವಜನತೆ ತಂಬಾಕು ಉತ್ಪನ್ನ ಸೇವನೆಯ ದಾಸರಾಗುತ್ತಿರುವುದು ಹೆಚ್ಚಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ. ಶಿಲ್ಪ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಅಯೋಜಿಸಿದ್ದ “ವಿಶ್ವ ತಂಬಾಕು ರಹಿತ ದಿನಾಚರಣೆ”ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಚಲನಚಿತ್ರ ನಿರ್ಮಾಪಕರು ತಾವು ನಿರ್ಮಿಸುವ ಚಲನಚಿತ್ರಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯ ಚಿತ್ರಣಗಳನ್ನು ಅಲ್ಪ ಅವಧಿಯಲ್ಲಿ ತೋರಿಸಿ ಅದರಿಂದ ಆಗುವ ದುಷ್ಪರಿಣಾಮಗಳನ್ನು ಹಾಗೂ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ದೀರ್ಘ ಅವಧಿಯಲ್ಲಿ ತೋರಿಸಿ ಜಾಗೃತಿ ಮೂಡಿಸುವ ಸಾಮಾಜಿಕ ಜವಾಬ್ದಾರಿ ತೋರಬೇಕು ಎಂದರು ವಿಶ್ವ ತಂಬಾಕು ರಹಿತ ದಿನ ತಂಬಾಕು ಸೇವನೆಯು ಮನುಷ್ಯನ ಮೇಲೆ ಉಂಟುಮಾಡುವ ದುಷ್ಪರಿಣಾಮಗಳನ್ನು ಯುವ ಸಮುದಾಯಕ್ಕೆ ಮನಮುಟ್ಟುವಂತೆ ತಿಳಿಸಿ ಹೇಳಬೇಕಾಗಿರುವುದು ಅಗತ್ಯವಿದೆ. ತಂಬಾಕು ಸೇವನೆಯಿಂದ ಯುವ ಪೀಳಿಗೆಯನ್ನು ರಕ್ಷಿಸುವುದು ಹೇಗೆ ಎಂಬ ಬಗ್ಗೆ ಯೋಜನೆಗಳನ್ನು ರೂಪಿಸುವುದರ ಜತೆಗೆ ಅವರಲ್ಲಿ ಈ ಬಗ್ಗೆ ಅರಿವು ಮೂಡಿಸಿ, ತಂಬಾಕು ನಿಯಂತ್ರಣದ ವಿಚಾರದಲ್ಲಿ ನೂತನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಮಾಜ ಒಟ್ಟಾಗಿ ಪಣ ತೊಡಬೇಕಾಗಿದೆ ಎಂದರು.
ಎಸ್ಪಿ ಕುಶಲ್ ಚೌಕ್ಸೆ ಅವರು ಮಾತನಾಡಿ, ತಂಬಾಕು ಸೇವನೆಯಿಂದ ವರ್ಷಕ್ಕೆ 8 ದಶಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ. ಅವುಗಳಲ್ಲಿ 7 ಮಿಲಿಯನ್‌ಗಿಂತಲೂ ಹೆಚ್ಚು ಸಾವುಗಳು ನೇರ ತಂಬಾಕು ಸೇವನೆಯಿಂದ ಉಂಟಾಗುತ್ತವೆ. ಅದೇ ಸಮಯದಲ್ಲಿ, ಮಿಲಿಯನ್‌ಗಳಷ್ಟು ಜನ ಧೂಮಪಾನಿಗಳಲ್ಲದವರು ಸೆಕೆಂಡ್ ಹ್ಯಾಂಡ್ ಹೊಗೆಗೆ (ನಿಷ್ಕ್ರಿಯ ಧೂಮಪಾನ) ಒಡ್ಡಿಕೊಳ್ಳುವುದರ ಪರಿಣಾಮವಾಗಿದೆ. ತಂಬಾಕು ಉತ್ಪನ್ನಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳಿದ್ದು, ಇದರ ಸೇವನೆಯಿಂದಾಗಿ ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಧ್ವನಿಪೆಟ್ಟಿಗೆ ಕ್ಯಾನ್ಸರ್ ಹಾಗೂ ಅನ್ನನಾಳ ಕ್ಯಾನ್ಸರ್ ನಂತಹ ಖಾಯಿಲೆಗಳಿಗೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಶಿಕ್ಷಣ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಮೊಬೈಲ್ ಮೂಲಕ ಕಾನೂನು ಬಾಹಿರ ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ಪ್ರಕರಣ ದಾಖಲಿಸಲು ಆಂಡ್ರೆಡ್ ಆಪ್ಲಿಕೇಷನ್ ಪರಿಚಯಿಸಲಾಗಿದೆ. ತಂಬಾಕು ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ತಿಳಿದಿದ್ದರೂ ಕೂಡ ಇದರ ಸೇವನೆ ಮಾಡುವವರ ಸಂಖ್ಯೆ ಎಳ್ಳಷ್ಟು ಕಡಿಮೆಯಾಗಿಲ್ಲ. ಅದಕ್ಕಾಗಿಯೇ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವ ತಂಬಾಕು ನಿಷೇಧ ದಿನ ಅಥವಾ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.ಈ ವೇಳೆ ನಂದಿ ವೈದ್ಯಕಿಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಇವರ ವತಿಯಿಂದ ತಂಬಾಕು ನಿಯಂತ್ರಣದ ಕಿರು ನಾಟಕ ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಸರ್ವೇಕ್ಷಾಧಿಕಾರಿ ಡಾ. ಕೃಷ್ಣಪ್ರಸಾದ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಂ ವೆಂಕಟೇಶ್, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಆರ್.ಸಿ.ಎಚ್ ಅಧಿಕಾರಿ ಡಿ.ಟಿ ಉಮಾ, ತಾಲೂಕು ಆರೋಗ್ಯ ಅಧಿಕಾರಿ ಡಾ.ಕೆ.ಮಂಜುಳಾ, ಜಿಲ್ಲಾಸ್ಪತ್ರೆಯ ಮನೋವೈದ್ಯ ಡಾ.ಡಿ.ಎನ್.ಕಿಶೋರ್,ಪ್ರಾಂಶುಪಾಲೆ ಡಾ. ವಸುಂದರ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.