ಕಮಲ್‌ಹಾಸನ್ ವಿರುದ್ಧ ಕ್ರಮಕ್ಕೆ ವಿವಿಧ ಸಂಘಟನೆಗಳ ಪ್ರತಿಭಟನೆ

KannadaprabhaNewsNetwork | Published : Jun 1, 2025 3:35 AM

ನಟ ಕಮಲ್‌ ಹಾಸನ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಟ ಕಮಲ್‌ ಹಾಸನ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಇತ್ತೀಚೆಗೆ ಕನ್ನಡದ ನಟ ಶಿವರಾಜ್ ಕುಮಾರ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ನಟ ಕಮಲ್‌ಹಾಸನ್ ಅವರು, ರಾಜ್‌ಕುಮಾರ್ ಕುಟುಂಬದ ಬಗ್ಗೆ ಹೊಗಳಿ ಮಾತನಾಡುವ ಉತ್ಸಾಹದಲ್ಲಿ ಕನ್ನಡ ಭಾಷೆ ತಮಿಳು ಭಾಷೆಯಿಂದ ಬಂದದ್ದು ಎಂದು ತಪ್ಪು ಹೇಳಿಕೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಮಲ್‌ಹಾಸನ್ ನೀಡಿರುವ ಹೇಳಿಕೆಗೆ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಸಾಹಿತಿಗಳು, ಚಿಂತಕರು, ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಕಮಲ್‌ಹಾಸನ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಹೀಗಿದ್ದರೂ ಕಮಲ್‌ಹಾಸನ್ ಕ್ಷಮೆ ಕೇಳದೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಹರಿಹಾಯ್ದರು.

ಕಮಲ್‌ಹಾಸನ್ ಕ್ಷಮೆ ಕೇಳಬೇಕು. ಅಲ್ಲಿಯವರೆಗೆ ಕರ್ನಾಟಕದಲ್ಲಿ ಅವರ ಯಾವುದೇ ಸಿನಿಮಾಗಳನ್ನು ಪ್ರದರ್ಶನ ಮಾಡದಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಎಲ್ಲಾ ನಿರ್ಮಾಪಕರು ಬಹಿಷ್ಕಾರ ಹಾಕಬೇಕು. ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಕಮಲ್‌ಹಾಸನ್ ಅವರ ಯಾವುದೇ ಚಿತ್ರಗಳು ಬಿಡುಗಡೆಯಾಗದಂತೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಕಾರ್ಯದರ್ಶಿ ಪರಶುರಾಮ್, ಎಂ. ನಾಗರಾಜ್, ಪಿ.ಆರ್. ನಾಗರಾಜ್, ಬಾಬು, ಶ್ರೀನಿವಾಸ, ವಿಜಯ್, ನವೀನ್ ಇದ್ದರು.-----------

ಬಾಕ್ಸ್‌..................

ಕರುನಾಡು ಸಂರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ಶಿವಮೊಗ್ಗ: ನಟ ಕಮಲ್‌ಹಾಸನ್ ಕನ್ನಡ ಭಾಷೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಕರುನಾಡು ಸಂರಕ್ಷಣಾ ವೇದಿಕೆ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಕಮಲ್‌ಹಾಸನ್ ಕನ್ನಡದ ಬಗ್ಗೆ ಹಗುರವಾಗಿ ಮಾತನಾಡುವ ಮೊದಲು ಕನ್ನಡ ನಾಡು, ಭಾಷೆ ಬಗ್ಗೆ ತಿಳಿದುಕೊಂಡು ಆತ್ಮಾವಲೋಕನ ಮಾಡಿಕೊಳ್ಳಲಿ. ಸಿನಿಮಾ ರಂಗಕ್ಕೆ ಬಂದ ಆರಂಭದಲ್ಲಿ ಕಮಲ್‌ಹಾಸನ್‌ಗೆ ಅವಕಾಶ ನೀಡಿದ್ದು, ಕನ್ನಡ ಚಿತ್ರರಂಗ ಎನ್ನುವುದು ನೆನಪಿರಲಿ. ಕಾವೇರಿ ನೀರು ಕುಡಿದು ರಾಜ್ಯದ ಅನ್ನ ತಿಂದು, ಜೀವನ ಕಂಡುಕೊಂಡ ಕಮಲ್‌ಹಾಸನ್ ಕನ್ನಡ ಭಾಷೆಯ ಬಗ್ಗೆ ನಾಲಿಗೆ ಹರಿಯಬಿಟ್ಟಿರುವುದು ದುರಹಂಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಹೇಳಿಕೆಗಳನ್ನು ನೀಡುವುದನ್ನು ಕಮಲ್‌ಹಾಸನ್ ನಿಲ್ಲಿಸಬೇಕು. ಕೂಡಲೇ ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರಲ್ಲದೆ, ದ್ವಂದ್ವ ಹೇಳಿಕೆಗಳನ್ನು ನೀಡಿ, ಎರಡು ರಾಜ್ಯಗಳ ಮಧ್ಯ ವಿರಸವುಂಟುಮಾಡಿ, ಗಲಾಟೆ, ಆಸ್ತಿ-ಪಾಸ್ತಿಗಳಿಗೆ ನಷ್ಟವುಂಟಾದಲ್ಲಿ ಕಮಲ್‌ಹಾಸನ್ ಅವರೇ ಹೊಣೆಗಾರರಾಗುತ್ತಾರೆ ಎಂದು ಹೇಳಿದರು.

ಕಮಲ್‌ಹಾಸನ್ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕನ್ನಡ ನಟ-ನಟಿಯರಾದ ಶಿವರಾಜ್ ಕುಮಾರ್ ಮತ್ತು ರಮ್ಯಾ ಅವರು ಕಮಲ್‌ಹಾಸನ್ ಹೇಳಿಕೆಗೆ ಪ್ರತಿರೋಧ ತೋರದೆ ಸಮರ್ಥನೆ ಮಾಡಿಕೊಂಡಿರುವುದು ಖಂಡನೀಯ. ಕೂಡಲೇ ಅವರು ಕೂಡ ಕಮಲ್‌ಹಾಸನ್ ಹೇಳಿಕೆಯನ್ನು ಖಂಡಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದಲ್ಲಿ ಕಮಲ್‌ಹಾಸನ್ ನಟನೆಯ ಥಗ್‌ಲೈಫ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಪ್ರಮುಖರಾದ ಎಸ್.ಪಿ. ಶಿವಮೂರ್ತಿ, ಎಚ್.ಎನ್. ಪ್ರಭು, ವೆಂಕಟೇಶ್, ಮೂರ್ತಿ, ರಾಜು, ಶಿವಣ್ಣ, ಕೆ.ಟಿ. ಮಂಜುನಾಥ್ ಇದ್ದರು.