ರುದ್ರಸ್ವಾಮಿ ಮಠ ಪ್ರವಾಸಿ ತಾಣವಾಗಿಸಲು ಪ್ರಯತ್ನ: ವಿಠ್ಠಲ ಹಲಗೇಕರ

KannadaprabhaNewsNetwork | Published : Nov 15, 2024 12:33 AM

ಸಾರಾಂಶ

ರುದ್ರಸ್ವಾಮಿ ಮಠದ ನೂತನ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿ ಈ ಧಾರ್ಮಿಕ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿಸಲು ಪ್ರಯತ್ನಿಸುವುದಾಗಿ ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ರುದ್ರಸ್ವಾಮಿ ಮಠದ ನೂತನ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿ ಈ ಧಾರ್ಮಿಕ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿಸಲು ಪ್ರಯತ್ನಿಸುವುದಾಗಿ ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ತಾಲೂಕಿನ ಅವರೊಳ್ಳಿ-ಬಿಳಕಿ ಗ್ರಾಮದ ಹೊರವಲಯದ ರುದ್ರಸ್ವಾಮಿ ಮಠದ ಜೀರ್ಣೋದ್ಧಾರ ಕಾಮಗಾರಿಯ ಶಂಕುಸ್ಥಾಪನೆ, ಅಡಿಗಲ್ಲು ಸಮಾರಂಭ ಮತ್ತು ಭೂಮಿಪೂಜೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ಮಠದ ಅಭಿವೃದ್ಧಿ ಕಾಮಗಾರಿಗೆ ಮುಜರಾಯಿ ಇಲಾಖೆಯಿಂದ ಕಟ್ಟಡಕ್ಕೆ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು. ಪ್ರವಾಸೋದ್ಯಮ ಇಲಾಖೆಯಿಂದ ಈ ಭಾಗದ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು. ರುದ್ರಸ್ವಾಮಿ ಮಠಕ್ಕೆ ಅಗತ್ಯವಿರುವ ಜಮೀನು ಮಂಜೂರು ಮಾಡುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ ಮಾತನಾಡಿ, ರುದ್ರಸ್ವಾಮಿ ಮಠದ ಜೀರ್ಣೋದ್ಧಾರಕ್ಕೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ₹50 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಸೂಚನೆ ಮೇರೆಗೆ ನಮ್ಮ ಕುಟುಂಬದಿಂದಲೂ ಮಠಕ್ಕೆ ಅಗತ್ಯ ಆರ್ಥಿಕ ಸಹಾಯ ಮಾಡಲು ಬದ್ಧ ಎಂದು ಹೇಳಿದರು.

ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀಗಳು, ಕಿತ್ತೂರು ರಾಜಗುರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಶ್ರೀಗಳು, ತೆಲಂಗಾಣ ನಿರಡಗುಮ್ಮ ಸಂಸ್ಥಾನ ಮಠದ ಸಿದ್ಧಲಿಂಗ ಶ್ರೀಗಳು, ಅರಳಿಕಟ್ಟಿ ವಿರಕ್ತಮಠದ ಶಿವಮೂರ್ತೇಶ್ವರ ಶ್ರೀಗಳು ಮತ್ತು ನಂದಗಡ ಚನ್ನವೀರಮಠದ ಚನ್ನವೀರೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ರುದ್ರಸ್ವಾಮಿ ಮಠದ ಜೀರ್ಣೋದ್ಧಾರ ಕಾಮಗಾರಿಯ ಶಂಕುಸ್ಥಾಪನೆ ಮತ್ತು ಭೂಮಿಪೂಜೆಯನ್ನು ಸಲಕ ಧಾರ್ಮಿಕ ವಿಧಿವಿಧಾನಗಳಿಂದ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.

ನಂತರ ಜರುಗಿದ ಬಹಿರಂಗ ಸಮಾರಂಭದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಅರವಿಂದ ಪಾಟೀಲ, ಮಹಾಂತೇಶ ದೊಡಗೌಡರ, ಬಿಜೆಪಿ ಬ್ಲಾಕ್ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಘಾಡಿ, ಲೈಲಾ ಶುಗರ್ಸ್ ಎಂ.ಡಿ. ಸದಾನಂದ ಪಾಟೀಲ, ತಾಲೂಕಿನ ಮುಖಂಡರಾದ ಸಂಜಯ ಕುಬಲ, ಬಾಬುರಾವ ದೇಸಾಯಿ, ಪ್ರಮೋದ ಕೊಚೇರಿ, ವಿಠ್ಠಲ ಹಿಂಡಲಕರ, ರಾಜು ಖಾತೇದಾರ, ಜ್ಯೋತಿಬಾ ಭರಮಪ್ಪನವರ, ಮಲ್ಲಪ್ಪ ಮಾರಿಹಾಳ, ಸುನೀಲ ಮಡ್ಡಿಮನಿ, ಶ್ರೀಕಾಂತ ಇಟಗಿ, ಮಾರುತಿ ಟಕ್ಕೇಕರ, ಬಿಷ್ಟಪ್ಪ ಬನೋಶಿ, ಯಶವಂತ ಕೊಡೊಳ್ಳಿ, ಸಂಗಮೇಶ ವಾಲಿ, ಮಹಾಂತೇಶ ಸಾಣಿಕೊಪ್ಪ, ಮಾರುತಿ ಚೋಪಡೆ ಇತರರು ಇದ್ದರು.

ರುದ್ರಸ್ವಾಮಿ ಮಠದ ಪೀಠಾಧ್ಯಕ್ಷ ಚನ್ನಬಸವದೇವರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಅವರೊಳ್ಳಿ ಹಾಗೂ ಅಕ್ಕಪಕ್ಕದ ಭಾಗದ ನಾಗರಿಕರು, ಜನಪ್ರತಿನಿಧಿಗಳು, ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಮಠದ ಭಕ್ತರು ಇದ್ದರು. ರಾಜಶೇಖರ ಕಮ್ಮಾರ ಸ್ವಾಗತಿಸಿದರು. ವಿವೇಕ ಕುರಗುಂದ ನಿರೂಪಿಸಿದರು. ನಾಗೇಂದ್ರ ಚೌಗುಲಾ ವಂದಿಸಿದರು.ಕ್ರಿ.ಶ. 1126ರಲ್ಲಿ ರುದ್ರಮುನಿಗಳು ಮಠವನ್ನು ಕಟ್ಟಿಸಿದ್ದಾರೆ. 1926ರಲ್ಲಿ ಶಾಂಡಿಲ್ಯ ಮಹಾರಾಜರು ಜೀರ್ಣೋದ್ಧಾರಗೊಳಿಸಿದ್ದರು. ಮಠದ ಹಳೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದರಿಂದ ಅಂದಾಜು ₹4.5 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸುವ ಸಂಕಲ್ಪ ಹೊಂದಲಾಗಿದೆ. ಇದಕ್ಕೆ ದಾನಿಗಳ ನೆರವಿನ ಜೊತೆಗೆ ಸರ್ಕಾರದಿಂದ ಅಗತ್ಯ ಅನುದಾನ ನಿರೀಕ್ಷಿಸಲಾಗಿದೆ.

- ವಿಠ್ಠಲ ಹಲಗೇಕರ ಶಾಸಕ ಖಾನಾಪುರ

Share this article