ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನಗರದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿರುವ 2 ದಿನಗಳ ‘ಕನ್ನಡದ ಪ್ರಥಮ ವೈದ್ಯಕೀಯ ಸಾಹಿತ್ಯ ಸಮ್ಮೇಳನ-2026’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಶಿಕ್ಷಣವನ್ನು ಕನ್ನಡದಲ್ಲೇ ನೀಡಲು ಸಾಧ್ಯವೇ ಎಂಬ ಚರ್ಚೆ ನಡೆಯುತ್ತಲೇ ಇರುತ್ತದೆ. ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಪ್ರಯತ್ನ ಮಾಡಬೇಕು. ಅದರ ಪ್ರಾಯೋಗಿಕ ಉಪಯುಕ್ತತೆ ಹೇಗೆ ಎಂಬ ಬಗ್ಗೆಯೂ ಪರಿಶೀಲನೆ ಆಗಬೇಕು. ಇದಕ್ಕಾಗಿ ಮೊದಲು ವೈದ್ಯಕೀಯ ವಿಜ್ಞಾನದ ಪಾರಿಭಾಷಿಕ ಪದಗಳನ್ನು ಕನ್ನಡದ ಜಾಯಮಾನಕ್ಕೆ ಹೋಂದುವಂತೆ ಭಾಷಾಂತರಗೊಳಿಸುವ ಕೆಲಸಗಳು ಹೆಚ್ಚಾಗಿ ಆಗಬೇಕು. ವೈದ್ಯಕೀಯ ಪಾರಿಭಾಷಿಕ ಪದಗಳನ್ನು ಕನ್ನಡಕ್ಕೆ ತರುವುದು ಬಹಳ ಕಷ್ಟ ಎನ್ನುತ್ತಾರೆ.ಆದರೆ, ಯಾವುದೇ ಪಾರಿಭಾಷಿಕ ಪದಗಳನ್ನು ಸ್ಥಳೀಯ ಭಾಷೆಗೆ ತರುವುದು ಕಷ್ಟವೇ. ಅಂತಹ ವೇಳೆ ಕನ್ನಡದ ಜಾಯಮಾನಕ್ಕೆ ಹೊಂದುವ ಯಾವುದೇ ಭಾಷೆಯ ಪದವನ್ನೂ ನಾವು ಬಳಸಬಹುದು. ಇದನ್ನು ಪ್ರಪಂಚದ ಭಾಷಾ ವಿಜ್ಞಾನಿಗಳು ಒಪ್ಪಿದ್ದಾರೆ. ಹಾಗೆ ಬಳಸದೆ ಹೋದರೆ ಭಾಷೆ ಅಳಿವಿನಂಚಿಗೆ ಹೋಗುತ್ತಿರುತ್ತದೆ. ಕೊಡು, ಕೊಳ್ಳುವಿಕೆಯಿಂದಲೇ ಭಾಷೆ ಉಳಿಯುಂತಹದ್ದು ಎಂದು ಪ್ರತಿಪಾದಿಸಿದರು.
ಈ ವೇಳೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮುಹಸಿನ್, ಆರ್ಜಿಯುಎಚ್ಎಸ್ ಕುಲಪತಿ ಡಾ.ಬಿ.ಸಿ.ಭಗವಾನ್, ವಿಶ್ರಾಂತ ಕುಲಪತಿಗಳಾದ ಡಾ. ಚಂದ್ರಶೇಖರ ಶೆಟ್ಟಿ, ಡಾ.ಜಿ.ಕೆ. ವೆಂಕಟೇಶ್, ಡಾ. ಸಚ್ಚಿದಾನಂದ, ವಿವಿಯ ಕುಲಸಚಿವ ಅರ್ಜುನ್ ಒಡೆಯರ್, ಮೌಲ್ಯಮಾಪನ ಕುಲಸಚಿವ ಡಾ. ಸಂದೀಪ್ ವಿ.ಎಚ್., ಹಣಕಾಸು ಅಧಿಕಾರಿ ಗಂಗಾಧರ ಬಿ.ಕೆ., ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಆರ್.ಕೆ. ಸರೋಜ ಇದ್ದರು.
ಸಮ್ಮೇಳನಾಧ್ಯಕ್ಷ ಡಾ.ಯೋಗಣ್ಣ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಅವರು ಮಾತನಾಡಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆರಂಭಿಸಿರುವ ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ ಐತಿಹಾಸಿಕ ಹೆಜ್ಜೆಯಾಗಿದೆ. ವಿವಿಧ ವೈದ್ಯಕೀಯ ಪದ್ಧತಿಗಳ ತಜ್ಞರನ್ನು ಒಂದೇ ವೇದಿಕೆಗೆ ತಂದು ಜ್ಞಾನ ವಿನಿಮಯಕ್ಕೆ ಅವಕಾಶ ಕಲ್ಪಿಸಿರುವುದು ವಿಶೇಷ. ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಸಾಹಿತ್ಯದ ಬೆಳವಣಿಗೆಗೆ ಈಗ ಸರ್ಕಾರದ ಸಕ್ರಿಯ ಪ್ರೋತ್ಸಾಹ ಹಾಗೂ ನೀತಿಪೂರ್ವಕ ಕ್ರಮಗಳು ಅಗತ್ಯ. ಈ ನಿಟ್ಟಿನಲ್ಲಿ ವೈದ್ಯಕೀಯ ಸಾಹಿತ್ಯ ಅಕಾಡೆಮಿ ಸ್ಥಾಪನೆ, ಕನ್ನಡ ಪಠ್ಯಪುಸ್ತಕಗಳ ರಚನೆ ಸೇರಿ ಹಲವು ಮಹತ್ವದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು. ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸುವ ಕಾರ್ಯದ ಪ್ರಗತಿ ಪರಿಶೀಲನೆಗೆ ಸಮಿತಿಯನ್ನು ರಚಿಸಬೇಕು. ವೈದ್ಯಕೀಯ ಸಾಹಿತ್ಯವನ್ನು ಪ್ರತ್ಯೇಕ ಕ್ಷೇತ್ರವೆಂದು ಪರಿಗಣಿಸಿ, ಪ್ರತಿವರ್ಷ ವೈದ್ಯಕೀಯ ಸಾಹಿತ್ಯ ಕ್ಷೇತ್ರದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು.
ವೈದ್ಯ ಪದಕೋಶ ಬಿಡುಗಡೆ