ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 12 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 4 ದಿನಗಳ ಅವಧಿಯಲ್ಲಿ ಕಸ್ಟಮ್ಸ್ ಕಾರ್ಯಾಚರಣೆ ನಡೆಸಿದ್ದು, ವಿದೇಶದಿಂದ ಕಳ್ಳ ಸಾಗಾಣಿಕೆ ಮೂಲಕ ರಾಜ್ಯಕ್ಕೆ ಬರುತ್ತಿದ್ದ ಡ್ರಗ್ಸ್ ಪತ್ತೆ ಹಚ್ಚಿ ಪ್ರತ್ಯೇಕವಾಗಿ ನಾಲ್ವರನ್ನು ಬಂಧಿಸಿ 12 ಕೋಟಿ ರು.ಬೆಲೆಯ 35 ಕೆಜಿ ಹೈಡ್ರೋ ಗಾಂಜಾ ಜಪ್ತಿ ಮಾಡಿದೆ.

35 ಕೆಜಿ ಹೈಡ್ರೋ ಗಾಂಜಾ ಕಸ್ಟಮ್ಸ್‌ ವಶಕ್ಕೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 12 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 4 ದಿನಗಳ ಅವಧಿಯಲ್ಲಿ ಕಸ್ಟಮ್ಸ್ ಕಾರ್ಯಾಚರಣೆ ನಡೆಸಿದ್ದು, ವಿದೇಶದಿಂದ ಕಳ್ಳ ಸಾಗಾಣಿಕೆ ಮೂಲಕ ರಾಜ್ಯಕ್ಕೆ ಬರುತ್ತಿದ್ದ ಡ್ರಗ್ಸ್ ಪತ್ತೆ ಹಚ್ಚಿ ಪ್ರತ್ಯೇಕವಾಗಿ ನಾಲ್ವರನ್ನು ಬಂಧಿಸಿ 12 ಕೋಟಿ ರು.ಬೆಲೆಯ 35 ಕೆಜಿ ಹೈಡ್ರೋ ಗಾಂಜಾ ಜಪ್ತಿ ಮಾಡಿದೆ.

ನ.19 ರಂದು ಕೆಐಎಗೆ ಬ್ಯಾಂಕಾಕ್‌ನಿಂದ ಬಂದಿಳಿದ ಪೆಡ್ಲರ್‌ನಿಂದ 3.92 ಕೋಟಿ ರು.ಬೆಲೆಯ 11.2 ಕೆಜಿ, ನ.18 ರಂದು ಬಂದ ಬ್ಯಾಂಕಾಕ್‌ ಪ್ರವಾಸಿಗನಿಂದ 2.94 ಕೋಟಿ ರು.ಮೌಲ್ಯದ 8.4 ಕೆಜಿ, ಮರುದಿನ ಅಲ್ಲಿಂದಲೇ ಆಗಮಿಸಿದವನಿಂದ 5.7 ಕೋಟಿ ರು.ಮೌಲ್ಯದ 16.3 ಕೆಜಿ ಹಾಗೂ ನ.16 ರಂದು ಬ್ಯಾಂಕಾಕ್‌ನ ಪ್ರವಾಸಿಗನಿಂದ 14.73 ಲಕ್ಷ ರು. ಮೌಲ್ಯದ 421 ಗ್ರಾಂ ಸೇರಿದಂತೆ ಒಟ್ಟು 12 ಕೋಟಿ ರು. ಮೌಲ್ಯದ 35 ಕೆಜಿ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚಿನ್ನ ಜಪ್ತಿ: ಮತ್ತೊಂದು ಕಾರ್ಯಾಚರಣೆಯಲ್ಲಿ ನ.18 ರಂದು ಮಲೇಷಿಯಾದ ಕೌಲಾಲಂಪುರದಿಂದ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿ ಪ್ರವಾಸಿಗ ಕಸ್ಟಮ್ಸ್ ಬಲೆಗೆ ಬಿದ್ದಿದ್ದಾನೆ. ಈತನಿಂದ 71.9 ಲಕ್ಷ ರು ಬೆಲೆಯ 518 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.