ಪೊಲೀಸ್‌ ಠಾಣೆಗಳಲ್ಲಿ ರಿಯಲ್‌ ಎಸ್ಟೇಟ್‌ ದಂಧೆಗೆ ಅವಕಾಶ ನೀಡಬಾರದು ಹಾಗೂ ಠಾಣೆಗಳು ವ್ಯವಹಾರ ಕೇಂದ್ರಗಳಾಗದಂತೆ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಖಡಕ್‌ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪೊಲೀಸ್‌ ಠಾಣೆಗಳಲ್ಲಿ ರಿಯಲ್‌ ಎಸ್ಟೇಟ್‌ ದಂಧೆಗೆ ಅವಕಾಶ ನೀಡಬಾರದು ಹಾಗೂ ಠಾಣೆಗಳು ವ್ಯವಹಾರ ಕೇಂದ್ರಗಳಾಗದಂತೆ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಖಡಕ್‌ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ಬೆಂಗಳೂರು ನಗರದ ಆಡಳಿತವನ್ನು ಸುಲಭವಾಗಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿ 5 ನಗರ ಪಾಲಿಕೆಯನ್ನು ರಚಿಸಲಾಗಿದೆ. ಅದೇ ಮಾದರಿಯಲ್ಲಿ ಇದೀಗ ಪೊಲೀಸ್‌ ವ್ಯವಸ್ಥೆ ಸುಧಾರಿಸಲು 5 ಪೊಲೀಸ್‌ ಆಯುಕ್ತಾಲಯಗಳನ್ನು ಸೃಜಿಸಲಾಗಿದೆ. ಈ ಹಿಂದೆ ಬೆಂಗಳೂರು ಪೊಲೀಸ್‌ ಆಯುಕ್ತಾಲಯ ರಚಿಸಿದ್ದಾಗ 10ರಿಂದ 20 ಲಕ್ಷ ಜನಸಂಖ್ಯೆಯಿತ್ತು. ಆದರೀಗ, 1.50 ಕೋಟಿ ಜನಸಂಖ್ಯೆಯಿದೆ. ಹೀಗಾಗಿ 5 ಪೊಲೀಸ್‌ ಆಯುಕ್ತಾಲಯವನ್ನು ರಚಿಸಲಾಗಿದೆ. ಅದಕ್ಕೆ ಐವರು ಪೊಲೀಸ್‌ ಆಯುಕ್ತರನ್ನು ನೇಮಿಸಿ, ಅವರಿಗೆ ಒಬ್ಬರನ್ನು ಪೊಲೀಸ್‌ ಮುಖ್ಯ ಆಯುಕ್ತರನ್ನಾಗಿ ನಿಯೋಜಿಸಲಾಗಿದೆ ಎಂದರು.

ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಕಾರ್ಯವೈಖರಿ ಕುರಿತಂತೆ ಸಭೆಯಲ್ಲಿ ಕೆಲ ಸೂಚನೆ ನಿಡಲಾಗಿದೆ. ಪೊಲೀಸ್‌ ಠಾಣೆಗಳಲ್ಲಿ ರಿಯಲ್‌ ಎಸ್ಟೇಟ್‌ ದಂಧೆಗೆ ಅವಕಾಶ ನೀಡಬಾರದು, ವ್ಯವಹಾರ ಕೇಂದ್ರಗಳಾಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಜತೆಗೆ ಯಾವುದೇ ಭ್ರಷ್ಟಾಚಾರದ ಪ್ರಕ್ರಿಯೆಯಲ್ಲೂ ಪಾಲ್ಗೊಳ್ಳದಂತೆ ತಿಳಿಸಲಾಗಿದೆ. ಪೊಲೀಸ್‌ ಠಾಣೆಗಳಲ್ಲಿ ನಡೆಯುವ ಕೆಲಸಗಳ ಕುರಿತಂತೆ ನಾವೂ ವರದಿ ತರಿಸಿಕೊಳ್ಳುತ್ತೇವೆ ಎಂಬುದನ್ನು ಸೂಕ್ಷ್ಮವಾಗಿ ಹೇಳಲಾಗಿದೆ ಎಂದು ತಿಳಿಸಿದರು.

ಅಪರಾಧ ಚಟುವಟಿಕೆಗಳಿಗೆ, ಆರ್ಥಿಕ ಅಪರಾಧಗಳಿಗೆ ಕಡಿವಾಣ ಹಾಕಬೇಕು. ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಭಾಷಣ ಹರಡುವವರ ವಿರುದ್ಧವೂ ನಿಗಾವಹಿಸಬೇಕು. ಕಷ್ಟ ಹೇಳಿಕೊಂಡು ಬರುವ ಜನರಿಗೆ ಸೂಕ್ತ ಪರಿಹಾರ ನೀಡುವತ್ತ ಗಮನಹರಿಸಬೇಕು. ಜನರಿಗೆ ಪೊಲೀಸರೆಂದರೆ ಭಯದ ಜತೆಗೆ ಭಕ್ತಿ ಮೂಡುವಂತೆ ಕೆಲಸ ಮಾಡಬೇಕು.

ಎಲ್ಲರೂ ತಂಡವಾಗಿ ಕೆಲಸ ಮಾಡಬೇಕು. ಇಲಾಖೆಯೊಳಗೆ ಭಿನ್ನಾಭಿಪ್ರಾಯ, ಗದ್ದಲಗಳಿಗೆ ಅವಕಾಶ ನೀಡದೆ ಶಿಸ್ತಿನಿಂದ ಕರ್ತವ್ಯ ನಿರ್ವಹಿಸಬೇಕು ಎಂದಿದ್ದೇನೆ ಎಂದು ಹೇಳಿದರು. ಡಿಸಿಎಂ ಡಾ. ಜಿ.ಪರಮೇಶ್ವರ್‌, ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಬೆಂಗಳೂರು ನಗಾರಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಸಾರಿಗೆ ಸಚಿವ ಬೈರತಿ ಸುರೇಶ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್‌ ಮುಖ್ಯ ಆಯುಕ್ತ ಆರ್‌.ಹಿತೇಂದ್ರ ಇದ್ದರು.