ಡಿಜಿಟಲ್ ಮಾಧ್ಯಮಗಳು ನಮಗೆ ಮಾಹಿತಿ ಒದಗಿಸಬಹುದು. ಆದರೆ ಪುಸ್ತಕಗಳು ಆ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು, ಚಿಂತಿಸಲು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತವೆ ಎಂದು ರಾಜ್ಯಪಾಲೆ ಡಾ.ಸುಧಾ ಯಾದವ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಡಿಜಿಟಲ್ ಮಾಧ್ಯಮಗಳು ನಮಗೆ ಮಾಹಿತಿ ಒದಗಿಸಬಹುದು. ಆದರೆ ಪುಸ್ತಕಗಳು ಆ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು, ಚಿಂತಿಸಲು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತವೆ ಎಂದು ರಾಜ್ಯಪಾಲೆ ಡಾ.ಸುಧಾ ಯಾದವ್ ಹೇಳಿದರು.
ಶುಕ್ರವಾರ ವೀರಲೋಕ ಪ್ರಕಾಶನ ಜಯನಗರದ ಶಾಲಿನಿ ಮೈದಾನದಲ್ಲಿ ಹಮ್ಮಿಕೊಂಡಿದ್ದ 6ನೇ ಆವೃತ್ತಿಯ 3 ದಿನಗಳ ‘ಪುಸ್ತಕ ಸಂತೆ’ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಬಹುಪಾಲು ಸಮಯ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕಳೆಯುತ್ತಿದ್ದರೂ, ಪುಸ್ತಕಗಳತ್ತ ಜನರು ಆಕರ್ಷಿತರಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಪುಸ್ತಕಗಳು ಕೇವಲ ಜ್ಞಾನಾರ್ಜನೆಯ ಮಾಧ್ಯಮಗಳಲ್ಲ. ಅವು ನಮ್ಮ ಆಲೋಚನೆಗಳಿಗೆ ದಿಕ್ಕು ನೀಡುತ್ತವೆ, ಮಾನವೀಯ ಸಂವೇದನೆಗಳನ್ನು ಶ್ರೀಮಂತಗೊಳಿಸುತ್ತವೆ ಹಾಗೂ ಸಮಾಜಕ್ಕೆ ಸರಿಯಾದ ಮಾರ್ಗದರ್ಶನ ನೀಡುತ್ತವೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಕನ್ನಡ ಭಾಷೆಯ ಸಾಹಿತ್ಯಿಕ ಇತಿಹಾಸ ಸಾವಿರ ವರ್ಷಗಳಿಗೂ ಹೆಚ್ಚಿನದು. ಕವಿರಾಜಮಾರ್ಗದ ಸಾಹಿತ್ಯಿಕ ಪರಂಪರೆಯಿಂದ ಹಿಡಿದು ಭಗವಾನ್ ಬಸವೇಶ್ವರರ ಕ್ರಾಂತಿಕಾರಿ ವಚನಗಳವರೆಗೆ, ಪಂಪ, ರನ್ನ, ಪೊನ್ನರಂತಹ ಮಹಾನ್ ಕವಿಗಳಿಂದ ಹಿಡಿದು ಆಧುನಿಕ ಯುಗದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳವರೆಗೆ ಕನ್ನಡ ಸಾಹಿತ್ಯವು ಸಮಾಜಕ್ಕೆ ಸದಾ ಹೊಸ ಚಿಂತನೆ ಮತ್ತು ದಿಕ್ಕನ್ನು ನೀಡಿದೆ ಎಂದು ಅವರು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಕಳೆದ ವರ್ಷ ರಾಜ್ಯ ಸರ್ಕಾರ ಹಾಗೂ ವಿಧಾನ ಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ವಿಧಾನಸೌಧದ ಆವರಣದಲ್ಲಿ ಯಶಸ್ವಿಯಾಗಿ ಬೃಹತ್ ಪುಸ್ತಕ ಮೇಳ ಆಯೋಜಿಸಲಾಗಿತ್ತು. ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಸಾರ್ವಜನಿಕರಿಗೆ ಸುಲಭ ಪ್ರವೇಶ ಕಲ್ಪಿಸಿ, ಪ್ರಕಾಶಕರಿಗೆ ಉಚಿತ ಮಳಿಗೆಗಳನ್ನು ಒದಗಿಸಲಾಗಿತ್ತು. ಕೇವಲ ಮೂರ್ನಾಲ್ಕು ದಿನಗಳಲ್ಲಿ ಸುಮಾರು 4 ಕೋಟಿ ರು. ವಹಿವಾಟು ನಡೆದು ಪ್ರಕಾಶಕರಿಗೆ ಅನುಕೂಲವಾಗಿತ್ತು. ಆದರೆ, ಆಗಮಿಸಿದ ಜನರಿಗೆ ಮೂಲಸೌಕರ್ಯ, ಊಟ, ನೀರು ಒದಗಿಸುವಲ್ಲಿ ಸರ್ಕಾರ ಮಾಡಿದ ಖರ್ಚು-ವೆಚ್ಚಗಳ ಬಗ್ಗೆ ಕೆಲವರು ಆಕ್ಷೇಪವೆತ್ತಿ, ‘ಅವ್ಯವಹಾರ’ ಎಂಬ ಶೀರ್ಷಿಕೆಯಡಿ ಸುದ್ದಿಯಾಗಿತ್ತು.
ಒಂದು ಸದುದ್ದೇಶದ ಕಾರ್ಯಕ್ರಮದಲ್ಲಿ ಶೇ. 5-10 ರಷ್ಟು ಖರ್ಚು ಹೆಚ್ಚು-ಕಡಿಮೆಯಾಗುವುದು ಸಹಜ. ಆದರೆ ಮಾಧ್ಯಮಗಳಲ್ಲಿ ಬಂದ ನಕಾರಾತ್ಮಕ ವರದಿಗಳಿಂದಾಗಿ ಈ ಬಾರಿ ವಿಧಾನಸೌಧದಲ್ಲಿ ಪುಸ್ತಕ ಮೇಳ ಆಯೋಜಿಸಲು ಸಾಧ್ಯವಾಗಲಿಲ್ಲ. ಇದರಿಂದ ಅಂತಿಮವಾಗಿ ನಷ್ಟ ಅನುಭವಿಸಿದ್ದು ಲೇಖಕರು ಹಾಗೂ ಪ್ರಕಾಶಕರೇ ಹೊರತು ಬೇರಾರೂ ಅಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಇತ್ತೀಚಿನ ವರದಿಯನ್ನು ಉಲ್ಲೇಖಿಸಿದ ಅವರು, ಮುಂದಿನ 70 ವರ್ಷಗಳಲ್ಲಿ ವಿಶ್ವದ ಶೇ.92ರಷ್ಟು ಜನರು ಕೇವಲ ಶೇ.8ರಷ್ಟು ಜಾಗತಿಕ ಭಾಷೆಗಳನ್ನು ಮಾತ್ರ ಬಳಸಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲಿಷ್ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹಿಂದಿ ಪ್ರಬಲವಾಗಿ ಬೆಳೆಯುತ್ತಿದ್ದು, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳು ಹಿನ್ನೆಲೆಗೆ ಸರಿಯುತ್ತಿವೆ. ಇಂತಹ ವಿಷಮ ಕಾಲಘಟ್ಟದಲ್ಲಿ ಭಾಷೆಯನ್ನು ಎತ್ತಿಹಿಡಿಯುವ ಕೆಲಸವನ್ನು ಯಾರು ಮಾಡಿದರೂ ನಾವು ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ಹೇಳಿದರು.
ಇದೇ ವೇಳೆ ಹಿರಿಯ ಸಾಹಿತಿ ಎಸ್. ದಿವಾಕರ್ ಅವರಿಗೆ ‘ವೀರಲೋಕ ಪುಸ್ತಕ ಸಂತೆ ಗೌರವ’ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಸಿ.ಕೆ.ರಾಮಮೂರ್ತಿ, ಕನ್ನಡಪ್ರಭ ಸಂಪಾದಕ ಜೋಗಿ, ಹಿರಿಯ ಸಾಹಿತಿ ಜಯಂತ ಕಾಯ್ಕಿಣಿ, ವೀರಲೋಕ ಪ್ರಕಾಶನದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ಹಾಗೂ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.