371ಜೆ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳ ಅಭೂತಪೂರ್ವ ಬೆಂಬಲ

KannadaprabhaNewsNetwork |  
Published : Nov 21, 2026, 03:00 AM IST
ಬೆಂಬಲ | Kannada Prabha

ಸಾರಾಂಶ

ವಿಜಯಪುರ ಜಿಲ್ಲೆಗೆ 371ಜೆ ವಿಶೇಷ ಮೀಸಲಾತಿ ಸೌಲಭ್ಯ ಕಲ್ಪಿಸಬೇಕೆಂಬ ನ್ಯಾಯಯುತ ಬೇಡಿಕೆ ಮುಂದಿಟ್ಟುಕೊಂಡು ನಡೆಯುತ್ತಿರುವ ಹೋರಾಟಕ್ಕೆ ಸಿಂದಗಿ ತಾಲೂಕಿನ ವಿವಿಧ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ವಿಜಯಪುರ ಜಿಲ್ಲೆಗೆ 371ಜೆ ವಿಶೇಷ ಮೀಸಲಾತಿ ಸೌಲಭ್ಯ ಕಲ್ಪಿಸಬೇಕೆಂಬ ನ್ಯಾಯಯುತ ಬೇಡಿಕೆ ಮುಂದಿಟ್ಟುಕೊಂಡು ನಡೆಯುತ್ತಿರುವ ಹೋರಾಟಕ್ಕೆ ಸಿಂದಗಿ ತಾಲೂಕಿನ ವಿವಿಧ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದರು.

ನಗರದ ಎಚ್.ಜಿ.ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜು ಸೇರಿ ತಾಲೂಕಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹೋರಾಟದ ಸ್ಥಳಕ್ಕೆ ಆಗಮಿಸಿ, ಮಾನವ ಸರಪಳಿ ನಿರ್ಮಿಸುವ ಮೂಲಕ ವಿಜಯಪುರ ಜಿಲ್ಲೆಗೆ 371ಜೆ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿದರು.ಸಭೆಯಲ್ಲಿ ಉಪನ್ಯಾಸಕ ಪ್ರಶಾಂತ ಕುಲಕರ್ಣಿ ಮಾತನಾಡಿ, 371ಜೆ ವಿಶೇಷ ಸ್ಥಾನಮಾನದ ಐತಿಹಾಸಿಕ ಹಿನ್ನೆಲೆ, ಅದರ ಉದ್ದೇಶ, ಕಲ್ಯಾಣ ಕರ್ನಾಟಕ ಭಾಗಕ್ಕೆ ಈ ಸೌಲಭ್ಯ ದೊರಕಲು ಕಾರಣವಾದ ಪರಿಸ್ಥಿತಿಗಳು ಹಾಗೂ ವಿಜಯಪುರ ಜಿಲ್ಲೆ ಈ ಸೌಲಭ್ಯದಿಂದ ಹೊರಗುಳಿಯಲು ಕಾರಣವಾದ ಅಂಶಗಳ ಕುರಿತು ತಿಳಿಸಿದರು. ಜಿಲ್ಲೆಯ ವಿದ್ಯಾರ್ಥಿಗಳು, ನಿರುದ್ಯೋಗಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳನ್ನು ನಿರೀಕ್ಷಿಸುತ್ತಿರುವ ಜನರಿಗೆ ದೊರೆಯಬೇಕಾದ ಸೌಲಭ್ಯಗಳು ಸಿಗದೆ ಹಿನ್ನಡೆಯಾಗಿದೆ. ಈ ಅನ್ಯಾಯ ಸರಿಪಡಿಸಲು ಇಂದು ನಾವು ಧ್ವನಿ ಎತ್ತುವುದು ಅವಶ್ಯವಾಗಿದೆ ಎಂದರು.ಎಚ್.ಜಿ.ಕಾಲೇಜಿನ ಪ್ರಾಚಾರ್ಯ ಎಚ್.ಜಿ.ಹೆಗ್ಗಣದೊಡ್ಡಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಇಂತಹ ಮಹತ್ವದ ವಿಚಾರಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನತೆ ಆಸಕ್ತಿ ವಹಿಸಬೇಕು. ಕೇವಲ ಶಿಕ್ಷಣ ಪಡೆಯುವುದಷ್ಟೇ ಅಲ್ಲದೆ, ಸಮಾಜದ ಸಮಸ್ಯೆಗಳು, ಜನರ ಹಕ್ಕುಗಳು ಹಾಗೂ ಜಿಲ್ಲೆಯ ಅಭಿವೃದ್ಧಿಯ ವಿಚಾರಗಳ ಬಗ್ಗೆಯೂ ಅರಿವು ಹೊಂದಿರಬೇಕು. ವಿದ್ಯಾರ್ಥಿಗಳ ಇಂದಿನ ಭಾಗವಹಿಸುವಿಕೆ ಭವಿಷ್ಯದಲ್ಲಿ ಜಾಗೃತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.ಹೋರಾಟದ ಸಂಘಟಕ ರಘುನಾಥ ಥೋರ್ಪೆ ಮಾತನಾಡಿ, ವಿಜಯಪುರ ಜಿಲ್ಲೆಗೆ 371ಜೆ ಸೌಲಭ್ಯ ದೊರಕಿಸಬೇಕೆಂಬ ಬೇಡಿಕೆ ಬಹುದಿನಗಳ ಇದೆ. ಈ ನಿಟ್ಟಿನಲ್ಲಿ ಹಿಂದೆ ಹಲವಾರು ಪ್ರಯತ್ನಗಳು ನಡೆದಿದ್ದರೂ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ಆದರೆ, ಅದರಿಂದ ನಾವು ನಿರಾಶರಾಗಬಾರದು. ನಮ್ಮ ಪ್ರಯತ್ನ ನಿಲ್ಲಿಸಬಾರದು. ಮತ್ತೊಮ್ಮೆ ಹೋರಾಟ ಮಾಡಬೇಕು. ನಮ್ಮ ನ್ಯಾಯಯುತ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ನಿರಂತರವಾಗಿ ತರುವ ಕೆಲಸ ಮಾಡಬೇಕು ಎಂದರು.ಜಿಲ್ಲೆಯ ಪ್ರತಿಯೊಂದು ಗ್ರಾಮ, ಪಟ್ಟಣ, ಶಿಕ್ಷಣ ಸಂಸ್ಥೆ ಹಾಗೂ ಸಾರ್ವಜನಿಕ ವಲಯದಲ್ಲಿ 371ಜೆ ಹೋರಾಟದ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ವಿದ್ಯಾರ್ಥಿಗಳು, ಯುವಕರು, ಶಿಕ್ಷಕರು, ಉಪನ್ಯಾಸಕರು ಹಾಗೂ ಸಾರ್ವಜನಿಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಹಕ್ಕಿನ ಕುರಿತು ನಾವೇ ಜಾಗೃತರಾಗದಿದ್ದರೆ ಬೇರೆಯವರು ನಮ್ಮ ಪರವಾಗಿ ಹೋರಾಡುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂದು ತೋರಿದ ಒಗ್ಗಟ್ಟು ಹೋರಾಟಕ್ಕೆ ಮತ್ತಷ್ಟು ಬಲ ನೀಡಲಿದೆ ಎಂದರು.ಕಾರ್ಯಕ್ರಮದಲ್ಲಿ ಸಂಗಣ್ಣ ಬ್ಯಾಕೋಡ, ಯಶವಂತ ಯಂಪೂರ, ಗುರು ಪಡಶೆಟ್ಟಿ ಸೇರಿದಂತೆ ಹಲವರು ವೇದಿಕೆಯ ಮೇಲಿದ್ದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಹೋರಾಟದ ಬೆಂಬಲಿಗರು ಉಪಸ್ಥಿತರಿದ್ದು, ವಿಜಯಪುರ ಜಿಲ್ಲೆಗೆ 371ಜೆ ವಿಶೇಷ ಮೀಸಲಾತಿ ಸೌಲಭ್ಯ ಕಲ್ಪಿಸುವ ಬೇಡಿಕೆಗೆ ತಮ್ಮ ಸಹಮತ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳ ಈ ಮಾನವ ಸರಪಳಿ ಕೇವಲ ಒಂದು ಪ್ರತಿಭಟನೆಯ ಭಾಗವಾಗಿರದೆ, ಜಿಲ್ಲೆಯ ಹಕ್ಕು, ಶಿಕ್ಷಣ, ಉದ್ಯೋಗ ಮತ್ತು ಭವಿಷ್ಯದ ಅಭಿವೃದ್ಧಿಗಾಗಿ ಯುವಶಕ್ತಿ ಒಂದಾಗುತ್ತಿರುವ ಮಹತ್ವದ ಸಂಕೇತವಾಗಿ ಮೂಡಿಬಂತು. 371ಜೆ ಹೋರಾಟಕ್ಕೆ ವಿದ್ಯಾರ್ಥಿ ಸಮುದಾಯದ ಬೆಂಬಲ ದೊರೆತಿರುವುದು ಹೋರಾಟಗಾರರಲ್ಲಿ ಹೊಸ ಭರವಸೆ ಮೂಡಿಸಿದ್ದು, ಜಿಲ್ಲೆಯ ನ್ಯಾಯಯುತ ಬೇಡಿಕೆ ಈಡೇರುವವರೆಗೂ ಹೋರಾಟದ ಧ್ವನಿ ನಿರಂತರವಾಗಿ ಮೊಳಗಲಿ ಎಂಬ ಆಶಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಗೆ ನೀರು ಆಪೋಶನ: ಜಲಕ್ಷಾಮ ಭೀತಿ !
ಪಂಚಮಸಾಲಿ 2ಎ ಮೀಸಲಾತಿ: ಡಿ.10ಕ್ಕೆ ಉಪವಾಸ ಸತ್ಯಾಗ್ರಹ