ಮಕ್ಕಳಲ್ಲಿ ಹಾಗೂ ಯುವಜನರಲ್ಲಿ ವಿಶಿಷ್ಟ ಶಕ್ತಿಯಿದೆ. ಆ ಶಕ್ತಿಯನ್ನು ಗುರುತಿಸುವ ಕಾರ್ಯವಾಗಬೇಕು.
ಹಳಿಯಾಳ: ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಸಿ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು. ಅವರಲ್ಲಿ ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹುಟ್ಟಿಸುವಂತೆ ಮಾಡಲು ಸರ್ಕಾರಗಳು ನಡೆಸುವ ಯುವಜನೋತ್ಸವಗಳು ಜಾನಪದ ಸಂಸ್ಕೃತಿಯ ಜೀವಂತಿಕೆಗೆ ಪೂರಕವಾಗಿವೆ ಎಂದು ಹಳಿಯಾಳ ತಾಪಂ ಇಒ ವಿಲಾಸರಾಜ್ ಪ್ರಸನ್ನ ಹೇಳಿದರು.
ಬುಧವಾರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಭವ್ಯ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಲ್ಲಿ ಹಾಗೂ ಯುವಜನರಲ್ಲಿ ವಿಶಿಷ್ಟ ಶಕ್ತಿಯಿದೆ. ಆ ಶಕ್ತಿಯನ್ನು ಗುರುತಿಸುವ ಕಾರ್ಯವಾಗಬೇಕು. ಸಂಗೀತ, ಕಲೆ, ಸಾಂಸ್ಕೃತಿಕ ಚಟುವಟಿಕೆ, ಸಾಹಿತ್ಯಗಳಿಂದ ಯುವಪೀಳಿಗೆಯು ವಿಮುಖರಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶವನ್ನು ಯುವಜನೋತ್ಸವ ಹೊಂದಿದೆ ಎಂದರು.ಭಾರತ್ ಜೋಡೋ: ರಾಜ್ಯ ಸರ್ಕಾರ ಯುವಜನರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತ್ ಜೋಡೋ ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ. ಯುವಜನರಲ್ಲಿ ಕ್ರೀಡೆ, ಫಿಟ್ನೆಸ್, ಸಂಸ್ಕೃತಿ, ವೈಜ್ಞಾನಿಕ ಮನೋಭಾವ, ನಾಯಕತ್ವ, ಸಮುದಾಯ ಸೇವೆ, ಅರಣ್ಯ ಮತ್ತು ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಯುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗವನ್ನು ಪಡೆಯಬೇಕು ಎಂದು ಕರೆ ನೀಡಿದರು.ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ದಿನಕರ ಹೆಬ್ಬಾರ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಲಾಗುತ್ತಿದ್ದ ಯುವಜನೋತ್ಸವ ಮೊದಲ ಬಾರಿಗೆ ಜಿಲ್ಲಾ ಕೇಂದ್ರ ಬಿಟ್ಟು ತಾಲೂಕು ಪ್ರದೇಶದಲ್ಲಿ ಆಯೋಜಿಸಲ್ಪಟ್ಟಿದೆ. ಈ ಉತ್ಸವ ಆಯೋಜಿಸಲು ಅಧಿಕಾರಿಗಳು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಯುವಜನರಿಂದ ಈ ಉತ್ಸವಕ್ಕೆ ಸಹಕಾರ ದೊರೆಯದಿರುವುದು ಕಂಡುಬರುತ್ತಿದ್ದು, ಇದರ ವೈಫಲ್ಯವು ಯುವಜನರಿಗೆ ಸಲ್ಲಬೇಕು ಎಂದರು.
ಜಿಲ್ಲಾ ಯುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದಿಲೀಪ್ ಕೋಠಾರ್ಕರ್ ಮಾತನಾಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ಬಾರಿಯೂ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಲಾಗುತ್ತಿದ್ದ ಯುವಜನೋತ್ಸವವನ್ನು ಮೊದಲ ಬಾರಿಗೆ ಜಿಲ್ಲಾ ಕೇಂದ್ರ ಬಿಟ್ಟು ತಾಲೂಕು ಸ್ಥಾನದಲ್ಲಿ ಆಯೋಜಿಸಲಾಗಿದೆ ಎಂದರು.
ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಇದ್ದರು. ಸ್ಥಳೀಯ ಶಾಮಿಯಾನ ಮಾಲೀಕ ಸೈಫ್ ಕಾರ್ಯಕ್ರಮ ನಿರ್ವಹಿಸಿದರು.
ಆಕ್ಷೇಪ: ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ವಂದೇ ಮಾತರಂ, ನಾಡಗೀತೆ, ರೈತ ಗೀತೆಯಾಗಲಿ ಹಾಡದೇ ತರಾತುರಿಯಲ್ಲಿ ಉದ್ಘಾಟನೆ ನೆರವೇರಿಸಿದ್ದು, ಭಾರಿ ಆಕ್ಷೇಪಣೆಗೆ ಗುರಿಯಾಯಿತು.ಕಾಟಾಚಾರದ ಜಿಲ್ಲಾ ಯುವಜನೋತ್ಸವ
ಹಳಿಯಾಳ: ಜಿಲ್ಲಾ ಯುವಜನೋತ್ಸವ ಕಾಟಾಚಾರಕ್ಕೆ ನಡೆಯುತ್ತಿವೆ ಎಂಬ ವ್ಯಾಪಕ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವಾಗ, ಪಟ್ಟಣದಲ್ಲಿ ನಡೆದ ಜಿಲ್ಲಾ ಯುವಜನೋತ್ಸವ ಈ ಟೀಕೆಯನ್ನು ಪುಷ್ಟೀಕರಿಸುವಂತಿತ್ತು.ಕಾರ್ಯಕ್ರಮದ ಉದ್ಘಾಟನೆ ಬರೋಬ್ಬರಿ ಮೂರು ಗಂಟೆ ತಡವಾಗಿ ಆರಂಭಗೊಂಡಿತು. ಉದ್ಘಾಟನೆಗೆ ಆಗಮಿಸ ಬೇಕಾಗಿದ್ದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಯಾರೂ ಆಗಮಿಸದೇ ಇರುವುದರಿಂದ ಕೊನೆಯ ಕ್ಷಣದಲ್ಲಿ ಸಮಾರಂಭ ಉದ್ಘಾಟನೆಯ ಜವಾಬ್ದಾರಿಯನ್ನು ಸ್ಥಳಿಯ ತಾಲೂಕಾಧಿಕಾರಿಗಳಿಗೆ ವಹಿಸಲಾಯಿತೆಂದು ಹೇಳಲಾಗುತ್ತಿದೆ. ವಿಶೇಷವೆಂದರೆ ಕಾರ್ಯಕ್ರಮದ ಉದ್ಘಾಟಕರು ಸಮಯಕ್ಕೆ ಸರಿಯಾಗಿ ಆಗಮಿಸಿದ್ದರೂ, ಆಯೋಜಕರ ಕರೆಗಾಗಿ ಮೂರು ಗಂಟೆಗಳ ಕಾಲ ಕಾದು ಸುಸ್ತಾದ ಪ್ರಸಂಗ ನಡೆಯಿತು. ಇದು ಆಯೋಜಕರ ಬೇಜವಾಬ್ದಾರಿಯನ್ನು ತೋರಿಸುತ್ತದೆ.ಖಾಲಿ ಕುರ್ಚಿಗಳೇ ಸಾಕ್ಷಿ: ಯುವಜನೋತ್ಸವದಲ್ಲಿ ಇಡೀ ಜಿಲ್ಲೆಯಿಂದ ಎಣಿಸಿ ಮೂರೇ ಮೂರು ತಂಡಗಳು ಆಗಮಿಸಿದ್ದವು. ಯುವಜನೋತ್ಸವದ ವೀಕ್ಷಣೆಗೆ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣದಲ್ಲಿ ಖಾಲಿ ಕುರ್ಚಿಗಳೇ ತುಂಬಿದ್ದು, ಇದು ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿತ್ತು.ಸ್ಪರ್ಧಾಳುಗಳಿಗಿಂತ ನಿರ್ಣಾಯಕರೇ ಸಂಖ್ಯೆಯಲ್ಲಿ ಹೆಚ್ಚಾಗಿದ್ದರು. ಯಾವ ಸ್ಪರ್ಧೆಯನ್ನು ಎಲ್ಲಿ ನಡೆಸಬೇಕು, ಯಾವಾಗ ಆಯೋಜಿಸಬೇಕು ಎಂಬುದರ ಬಗ್ಗೆಯೇ ಗೊಂದಲ ಉಂಟಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.