ಕೊಪ್ಪಳ: ಜಿಲ್ಲೆಯ ಅಸುರಕ್ಷಿತ ರಸ್ತೆ ಕ್ರಾಸ್‌ಗಳಲ್ಲಿ ಫ್ಲೈಓರ್ ನಿರ್ಮಾಣ ಮತ್ತು ವಾಹನಗಳ ಸಂಚಾರದ ಮೇಲೆ ನಿಗಾ ವಹಿಸಲು ಅಪಘಾತ ವಲಯಗಳಲ್ಲಿ ಸಿಸಿ ಟಿವಿ ಅಳವಡಿಸಿ ರಸ್ತೆ ಅಪಘಾತಗಳನ್ನು ಶೂನ್ಯಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಕೆ. ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.
ಅವರು ಶುಕ್ರವಾರ ಕೊಪ್ಪಳ ತಾಲೂಕಿನ ಹೊಸಳ್ಳಿ ಮತ್ತು ಹಿಟ್ನಾಳ್ ಮಧ್ಯ ಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ 50ರ ಮೇಲ್ಸೇತುವೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಎನ್.ಎಚ್-50 ಮತ್ತು 63 ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟನೆ ಹೆಚ್ಚಾಗಿದೆ. ಈ ಎರಡು ರಸ್ತೆಗಳ ಮಧ್ಯದಲ್ಲಿ ಸುಮಾರು 15 ಕಿಮೀ ಮಾರ್ಗದಲ್ಲಿ ವರ್ಷಕ್ಕೆ ಸುಮಾರು 190 ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ 50 ರಿಂದ 60 ಜನ ಸಾವನ್ನಪ್ಪುತ್ತಿದ್ದರು. ಇದನ್ನು ಅರಿತ ಹಿಂದಿನ ಸಂಸದ ಕರಡಿ ಸಂಗಣ್ಣ ₹120 ಕೋಟಿ ಮಂಜೂರು ಮಾಡಿಸಿ ನಿಂಗಾಪುರ, ಹೊಸಳ್ಳಿ, ಶಹಪುರ ಹಾಗೂ ಮೆಥಗಲ್ ಸೇರಿದಂತೆ ಒಟ್ಟು ಐದು ಕಡೆಗಳಲ್ಲಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಟೆಂಡರ್ ಕರೆದು ಅಡಿಗಲ್ಲು ಹಾಕಿದ್ದರು. ಅವುಗಳನ್ನು ಒಂದೊಂದಾಗಿ ಪೂರ್ಣಗೊಳಿಸಲಾಗುವುದು. ರಸ್ತೆ ಅಪಘಾತಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಿಸಲು ಹೊಸ ಸಕ್ಯೂರಿಟಿ ಸಿಸ್ಟಮ್ ಮಾಡಬೇಕೆಂದು ಸಿಸಿ ಟಿವಿ ಅಳವಡಿಸಲಾಗಿದೆ ಎಂದರು.
ಭಾರಿ ವಾಹನಗಳಿಗೆ ವೇಗದ ಮಿತಿ 60 ಕಿಮೀ ಹಾಗೂ ಕಾರ್ ಮತ್ತು ಬಸ್‌ಗಳಿಗೆ 70 ಕಿಮೀ ನಿಗದಿ ಮಾಡಿ ಓವರ್ ಸ್ಪೀಡ್‌ನಲ್ಲಿ ಹೋಗುವಂತಹ ವಾಹನಗಳಿಗೆ ಹೊಸ ಟೆಕ್ನಾಲಜಿ ಪ್ರಕಾರ ವಾಹನಗಳ ನಂಬರ್ ಮೇಲೆಯೇ ತ್ವರಿತವಾಗಿ ದಂಡ ಹಾಕುವ ಕೆಲಸ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಈ ನಿಯಮ ಜಾರಿಗೊಳಿಸಲಾಗುವುದು. ಟಿಪ್ಪರ ವಾಹನವೊಂದರ ಓವರ್ ಸ್ಪೀಡ್‌ನಿಂದ ಇತ್ತೀಚೆಗೆ ಕಿರ್ಲೋಸ್ಕರ್ ಕಂಪನಿ ಹತ್ತಿರ 129 ಕುರಿ ಸಾವನಪ್ಪಿದ್ದವು. ಕಿರ್ಲೋಸ್ಕರ್ ಮತ್ತು ಹೊಸಪೇಟೆ ಸ್ಟೀಲ್ಸ್ ಕಂಪನಿ ಹತ್ತಿರವೂ ಸಿಸಿ ಟಿವಿ ಅಳವಡಿಸಲು ಆಯಾ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಈ ರಸ್ತೆಯಲ್ಲಿ ಅಪಘಾತ ಶೂನ್ಯಕ್ಕೆ ತರುವ ಉದ್ದೇಶ ಹೊಂದಲಾಗಿದೆ. ಹೊಸಳ್ಳಿ ಮತ್ತು ಹಿಟ್ನಾಳ್ ಮಧ್ಯ ಭಾಗದ ಎನ್.ಎಚ್-50ರ ಮೇಲ್ಸೇತುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ₹19.43 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಸಾರ್ವಜನಿಕರ ಬಳಕೆಗೆ ಇಂದು ಅನುವು ಮಾಡಿಕೊಡಲಾಗಿದೆ. ಈ ಮೇಲ್ಸೇತುವೆಯಲ್ಲಿ ಶೀಘ್ರದಲ್ಲಿಯೇ ಲೈಟಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ವಾಹನಗಳ ಸಂಚಾರಕ್ಕೆ ಅನುಕೂಲ ಮತ್ತು ಅಪಘಾತ ತಡೆಗಟ್ಟಲು ಹೊಸಳ್ಳಿ-ಹಿಟ್ನಾಳ್ ಮಧ್ಯ ಭಾಗದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮೇಲ್ಸೇತುವೆ ನಿರ್ಮಾಣವಾಗಿರುವುದು ಸಂತಸ ತಂದಿದೆ. ಈ ಕಾಮಗಾರಿ ಬೇಗನೆ ಪೂರ್ಣಗೊಳಿಸಿರುವುದು ಸಾರ್ವಜನಿಕರಿಗೆ ಮತ್ತು ವಾಹನಗಳ ಓಡಾಟಕ್ಕೆ ಅನುಕೂಲವಾಗಿದೆ. ಇದೇ ಅ. 6 ರಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ನಡೆಯಲಿದ್ದು, ಸುಮಾರು ₹1500 ಕೋಟಿಗಳಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆಯಲಿದೆ. ಈ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ, ಸಚಿವರುಗಳು ಮತ್ತು ಇತರೆ ಗಣ್ಯರು ಪಾಲ್ಗೊಳ್ಳಲಿದ್ದು, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿ ಕರೆ ತರಬೇಕು ಮತ್ತು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕು ಎಂದರು.
ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿದರು.ಕಾರ್ಯಕ್ರಮದಲ್ಲಿ ಹೊಸಳ್ಳಿ ಗ್ರಾಪಂ ಅಧ್ಯಕ್ಷ ಸುರೇಶ್, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕೊಪ್ಪಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಾಲಚಂದ್ರನ್, ಗೂಳಪ್ಪ ಹಲಗೇರಿ, ವೀನಗೌಡ ಪಾಟೀಲ್, ಯಂಕಪ್ಪ, ಕೆ.ಎಂ. ಸೈಯದ್, ವಿಶ್ವನಾಥ ರಾಜಣ್ಣ, ಗುತ್ತಿಗೆದಾರ ಶರಣಬಸವರಾಜ ಆಲೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.