ಸುಬ್ರಹ್ಮಣ್ಯ- ಧರ್ಮಸ್ಥಳ- ಕೊಲ್ಲೂರು ರೈಲು ಮಾರ್ಗ ಬೇಡಿಕೆ ಈಡೇರಿಸಲು ಪ್ರಯತ್ನ: ಸಚಿವ ಸೋಮಣ್ಣ

KannadaprabhaNewsNetwork | Updated : Jul 18 2024, 09:57 AM IST

ಸಾರಾಂಶ

ಜಲಶಕ್ತಿ ಯೋಜನೆಯನ್ನು ಈ ಭಾಗದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದ ಸಭೆಯನ್ನು ಬೆಳ್ತಂಗಡಿಯಲ್ಲಿಯೇ ಕರೆಯಲಾಗುವುದು ಎಂದು ಸಚಿವರು ಪ್ರಕಟಿಸಿದರು.

 ಬೆಳ್ತಂಗಡಿ :  ಶಾಸಕ ಹರೀಶ್ ಪೂಂಜ ಅವರು ಸುಬ್ರಹ್ಮಣ್ಯ- ಧರ್ಮಸ್ಥಳ- ಕೊಲ್ಲೂರು ರೈಲು ಮಾರ್ಗಕ್ಕಾಗಿ ಬೇಡಿಕೆಯನ್ನಿಟ್ಟಿದ್ದಾರೆ. ಇದರ ಬಗ್ಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಲ್ಲಿ ಸಮಗ್ರವಾಗಿ ಚರ್ಚಿಸಿ ಸರ್ವೆ ಮಾಡಲು ಒಪ್ಪಿಸುತ್ತೇನೆ ಎಂದು ಕೇಂದ್ರ ಸರ್ಕಾರದ ಜಲಶಕ್ತಿ ಹಾಗೂ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಅವರು ಬುಧವಾರ ಬೆಳ್ತಂಗಡಿಯಲ್ಲಿ ಬಿಜೆಪಿ ಮಂಡಲದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಸುಬ್ರಹ್ಮಣ್ಯ, ಮಂಜುನಾಥ ಹಾಗೂ ಮೂಕಾಂಬಿಕೆಯರ ಕೃಪೆ ಇದ್ದರೆ ಶಾಸಕರು ಹೇಳಿದ ಕಾರ್ಯ ಶೀಘ್ರದಲ್ಲೇ ನೆರವೇರಿಸಲಾಗುವುದು ಎಂದರು.

ಜಲಶಕ್ತಿ ಯೋಜನೆಯನ್ನು ಈ ಭಾಗದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದ ಸಭೆಯನ್ನು ಬೆಳ್ತಂಗಡಿಯಲ್ಲಿಯೇ ಕರೆಯಲಾಗುವುದು ಎಂದು ಸಚಿವರು ಪ್ರಕಟಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ವರಿಷ್ಠರ ಮಾತು ಕೇಳಿ ಎರಡು ಕಡೆ ಸೋತೆ. ಅದರ ಚರ್ಚೆ ಈಗ ಅನಗತ್ಯ ಆದರೆ ಅದೇ ಇಬ್ಬರು ವರಿಷ್ಠರು ನನಗೆ ಲೋಕಸಭೆಯ ಟಿಕೇಟ್‌ ನೀಡಿ ಗೆಲ್ಲುವಂತೆ ಮಾಡಿದ್ದಾರೆ. ಮಂತ್ರಿಯಾಗುತ್ತೇನೆಂದು ಬಯಸಿರಲಿಲ್ಲ. ಬಿಜೆಪಿಯ ಮೊದಲ ಸಭೆಯಲ್ಲಿ ಮೋದಿಯವರು ನನಗೆ ಡಬ್ಬಲ್ ಶುಭಾಶಯಗಳನ್ನು ಹೇಳಿದಾಗ ನಾನು ಮಂತ್ರಿಯಾಗಲಿದ್ದೇನೆಂದು ಅರಿವಾಯಿತು ಎಂದು ಸೋಮಣ್ಣ ಹೇಳಿದರು.

ಮಂಡಲ ಉಪಾಧ್ಯಕ್ಷ ಮೋಹನ ಅಂಡಿಂಜೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹರೀಶ ಪೂಂಜ ಸ್ವಾಗತಿಸಿ, ಪ್ರಸ್ತಾವಿಸಿದರು. ವೇದಿಕೆಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿಲ್ಲಾ ಉಪಾಧ್ಯಕ್ಷರುಗಳಾದ ಜಯಂತ ಕೋಟ್ಯಾನ್, ವಸಂತಿ ಮಚ್ಚಿನ, ಕಾರ್ಯದರ್ಶಿ ಸೀತಾರಾಮ ಬೆಳಾಲು ಇದ್ದರು. ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರ್ವಹಿಸಿದರು.ಪೂಂಜ ಇನ್ನೊಬ್ಬ ಸೋಮಣ್ಣನಾಗಬೇಕು...

ಶಾಸಕ ಹರೀಶ್ ಪೂಂಜ ಉತ್ತಮ ನಡವಳಿಕೆಯುಳ್ಳ ವ್ಯಕ್ತಿ. ಅವರು ನನಗೆ ಸಹೋದರನಿದ್ದಂತೆ. ರಾಜಕೀಯವೆಂಬುದು ಮುಳ್ಳಿನ ಹಾಸಿಗೆ. ಬರುವ ಎಡರು ತೊಡರುಗಳನ್ನು ಇವರು ಉತ್ತಮವಾಗಿ ನಿರ್ವಹಿಸಿ ನಿಭಾಯಿಸಬಲ್ಲರು. ನಾಲ್ಕು ವರ್ಷಗಳ ನಂತರ ಪೂಂಜರಿಗೆ ಉತ್ತಮ ಭವಿಷ್ಯವಿದೆ. ಆದರೆ ಅವರು ಎಲ್ಲಿಯೂ ತಾಳ್ಮೆಕಳೆದುಕೊಳ್ಳಬಾರದು. ಅವರು ಇನ್ನೊಬ್ಬ ಸೋಮಣ್ಣನಾಗಬೇಕು ಎಂದು ಸಚಿವ ಸೋಮಣ್ಣ ಹಾರೈಸಿದರು.

Share this article