ಕೋಲಾರ ನಗರ ಸಾಂಸ್ಕೃತಿಕ ಕೇಂದ್ರವನ್ನಾಗಿಸಲು ಯತ್ನ

KannadaprabhaNewsNetwork |  
Published : Apr 01, 2025, 12:47 AM IST
೩೧ಕೆಎಲ್‌ಆರ್-೧೪-೧ಶ್ರೀ ದ್ಯಾವೀರಪ್ಪ ಮತ್ತು ಶ್ರೀಮತಿ ರತ್ನಮ್ಮ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ಹಿರಿಯ ಐಎಎಸ್ ಅಧಿಕಾರಿ ಡಿಸಿಪಿ ದೇವರಾಜ್ ಅವರ ಡಿ.ಎಂ.ಆರ್ ಫೌಂಡೇಶನ್‌ನಿಂದ ಕೋಲಾರದಲ್ಲಿ ನಡೆದ ಅದ್ದೂರಿ ಯುಗಾದಿ ಸಂಭ್ರಮ ಕಾರ್ಯಕ್ರಮಕ್ಕೆ ಸಾಕ್ಷಿಯಾದ ೨೦ ಸಾವಿರಕ್ಕೂ ಹೆಚ್ಚಿನ ಬೃಹತ್ ಜಯಸ್ತೋಮ. | Kannada Prabha

ಸಾರಾಂಶ

ಕೋಲಾರ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಕೊರತೆ ನೀಗಿಸುವಲ್ಲಿ ಡಿಸಿಪಿ ದೇವರಾಜ್ ಅವರ ಪ್ರಯತ್ನಕ್ಕೆ ಜಿಲ್ಲಾಡಳಿತ ಕೈಜೋಡಿಸಲಿದೆ, ಜಿಲ್ಲೆಯ ಜನತೆ ಅತ್ಯಂತ ಶ್ರಮ ಜೀವಿಗಳು, ಇಲ್ಲಿನ ಜನತೆಗೆ ತಮ್ಮ ಶ್ರಮದ ಜತೆಗೆ ಸ್ವಲ್ಪಮಟ್ಟಿಗೆ ಮನರಂಜನೆ ಒದಗಿಸುವ ಪ್ರಯತ್ನವಾಗಿ ಯುಗಾದಿ ಉತ್ಸವ ಏರ್ಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ನಗರದಲ್ಲಿ ಯುಗಾದಿ ಉತ್ಸವವನ್ನು ಮುಂದಿನ ವರ್ಷಗಳಲ್ಲಿ ಮತ್ತಷ್ಟು ಅದ್ದೂರಿಯಾಗಿ ಆಚರಿಸುವ ಮೂಲಕ ಕೋಲಾರವನ್ನು ಸಾಂಸ್ಕೃತಿಕ ಕೇಂದ್ರವಾಗಿ ಹೊರಹೊಮ್ಮುವಂತೆ ಮಾಡಲು ಪ್ರಯತ್ನಿಸುವುದಾಗಿ ಹಿರಿಯ ಬೆಂಗಳೂರಿನ ಡಿಸಿಪಿ ದೇವರಾಜ್ ಹೇಳಿದರು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಯುಗಾದಿಯಂದು ಸಂಜೆ ನಡೆದ ಯುಗಾದಿ ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ಈ ಕಾರ್ಯಕ್ರಮ ನಿರಂತರವಾಗಿ ನಡೆಯುವುದೇ ಎಂಬ ಹಲವರ ಪ್ರಶ್ನೆಗೆ, ತಾವು ಬೇರೆ ಎಲ್ಲೇ ಕೆಲಸ ಮಾಡುತ್ತಿದ್ದರೂ ಯುಗಾದಿಯಂದು ಕೋಲಾರಕ್ಕೆ ಬಂದು ಯುಗಾದಿ ಸಂಭ್ರಮ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.

ಉತ್ಸವದಲ್ಲಿ 20 ಸಾವಿರ ಪ್ರೇಕ್ಷಕರು

ಯುಗಾದಿ ಸಂಭ್ರಮದಲ್ಲಿ ನಟ ಧ್ರುವಸರ್ಜಾ, ಖ್ಯಾತ ಗಾಯಕ ವಿಜಯ್‌ಪ್ರಕಾಶ್ ಅವರ ಅಭೂತಪೂರ್ವ ಗಾಯನಕ್ಕೆ ೨೦ ಸಾವಿರಕ್ಕೂ ಹೆಚ್ಚು ಮಂದಿ ಪ್ರೇಕ್ಷಕರು ಸಾಕ್ಷಿಯಾದರು. ಖ್ಯಾತಗಾಯಕ ವಿಜಯ್ ಪ್ರಕಾಶ್, ಖ್ಯಾತ ನಿರೂಪಕಿ ಅನುಶ್ರೀ, ಗಾಯಕಿ ಲಕ್ಷ್ಮಿನಾಗರಾಜ್, ಅಕ್ಬರ್ ಮತ್ತಿತರರಿದ್ದ ತಂಡ ನೀಡಿದ ಸಾಂಸ್ಕೃತಿಕ ಸಂಭ್ರಮವನ್ನು ರಾತ್ರಿ ೧೨ ಗಂಟೆಯವರೆಗೂ ಜನತೆ ವೀಕ್ಷಿಸಿದ್ದು, ಸುಮಾರು ೨೦ ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಗೆ ಬೇವು, ಬೆಲ್ಲದ ಜತೆ ಸಂಗೀತದ ರಸದೌತಣ ಉಣಬಡಿಸಲಾಯಿತು.

ಕಳೆದ ೨೦೨೧ ರಲ್ಲಿ ಕೋಲಾರದ ಎಸ್ಪಿಯಾಗಿದ್ದ ತಾವು ಅಂದಿನ ಡಿಸಿಯಾಗಿದ್ದ ವೆಂಕಟರಾಜ್ ಹಾಗೂ ಜಿಪಂ ಸಿಇಒ ಯುಕೇಶ್‌ ಕುಮಾರ್ ಅವರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಿದ್ದಾಗ ಕೋಲಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೇ ನೀರಸವಾಗಿದೆ, ಇಲ್ಲಿ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಸೋಣ ಎಂದು ಪ್ರಸ್ತಾಪಿಸಿದಾಗ ಜಿಲ್ಲಾಡಳಿತ ಒಪ್ಪಿ ಅಂದು ಯುಗಾದಿ ಸಂಭ್ರಮದ ಈ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಡಿಸಿಪಿ ದೇವರಾಜ್ ಅವರು ಕೋಲಾರದ ಜನತೆಗೆ ಬೇವು-ಬೆಲ್ಲದ ಜತೆಗೆ ಸಂಗೀತದ ಸಿಹಿಯನ್ನು ನೀಡಿದ್ದು, ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿ, ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಉತ್ಸವಕ್ಕೆ ಜಿಲ್ಲಾಡಳಿತ ಬೆಂಬಲ

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಕೊರತೆ ನೀಗಿಸುವಲ್ಲಿ ಡಿಸಿಪಿ ದೇವರಾಜ್ ಅವರ ಪ್ರಯತ್ನಕ್ಕೆ ಜಿಲ್ಲಾಡಳಿತ ಕೈಜೋಡಿಸಲಿದೆ, ಅವರ ಪ್ರಯತ್ನ ಯಶಸ್ವಿಯಾಗಲಿ ಎಂದರು.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಮಾತನಾಡಿ, ಕೋಲಾರ ಜಿಲ್ಲೆಯ ಜನತೆ ಅತ್ಯಂತ ಶ್ರಮ ಜೀವಿಗಳು, ಇಲ್ಲಿನ ಜನತೆಗೆ ತಮ್ಮ ಶ್ರಮದ ಜತೆಗೆ ಸ್ವಲ್ಪಮಟ್ಟಿಗೆ ಮನರಂಜನೆ ಒದಗಿಸುವ ಪ್ರಯತ್ನವಾಗಿ ಯುಗಾದಿ ಉತ್ಸವ ಏರ್ಪಡಿಸಲಾಗಿದೆ ಎಂದರು.ಬಾಣಬಿರುಸುಗಳ ಪ್ರದರ್ಶನ

ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಗಾಯನಕ್ಕೆ ಜನ ಮನಸೋತರು, ಇಡೀ ಕಾರ್ಯಕ್ರಮದುದ್ದಕ್ಕೂ ಹರ್ಷೋದ್ಘಾರ ಮುಗಿಲು ಮುಟ್ಟಿದ್ದು, ನಿರೂಪಕಿ ಅನುಶ್ರೀ ಅವರ ನಿರೂಪಣೆ, ಗಾಯಕಿ ಲಕ್ಷ್ಮೀನಾಗರಾಜ್, ಅಕ್ಬರ್ ತಂಡದ ಗೀತೆಗಳು ಜನಮನಸೂರೆಗೊಂಡಿತು. ಯುಗಾದಿ ಉತ್ಸವದ ನಂತರ ಬಾಣಬಿರುಸುಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಅತ್ಯಂತ ಅದ್ದೂರಿ ಹಾಗೂ ಆಕರ್ಷಣೀಯವಾಗಿ ಮೂಡಿ ಬಂತು.ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಈಜು ಪಟು ಡಿಂಪಲ್ ಸೋನಾಕ್ಷಿ ಎಂ.ಗೌಡ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ನಾಗರಾಜ್, ಸುನಿಲ ಎಸ್.ಹೊಸಮನಿ, ವಸತಿ ಸಚಿವರ ಮಾಧ್ಯಮ ಸಲಹೆಗಾರ ಲಕ್ಷ್ಮೀನಾರಾಯಣ, ಕೆಜಿಎಫ್ ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು, ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ವಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಟಿವಿ೯ ಕ್ರೈಂ ವರದಿಗಾರ ಕಿರಣ್, ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ವಿ.ಮುನಿರಾಜು, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‌ಕುಮಾರ್, ನಾಗರೀಕ ವೇದಿಕೆಯ ಕುರುಬರಪೇಟೆ ವೆಂಕಟೇಶ್, ಡಾ.ಶಂಕರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''