ಸೋಮರಡ್ಡಿ ಅಳವಂಡಿ ಕೊಪ್ಪಳ
ಪೌರಾಯುಕ್ತ ಗಣಪತಿ ಪಾಟೀಲ್ ಮತ್ತು ಅಧ್ಯಕ್ಷ ಅಮ್ಜದ್ ಪಟೇಲ್ ನಡುವೆ ತೀವ್ರ ಭಿನ್ನಾಭಿಪ್ರಾಯ ಇದ್ದು, ಇನ್ನು ಅಧ್ಯಕ್ಷರು ಮತ್ತು ಬಹುತೇಕ ಸದಸ್ಯರ ನಡುವೆಯೂ ದೊಡ್ಡ ಕಂದಕ ನಿರ್ಮಾಣವಾಗಿದೆ. ಹೀಗಾಗಿ, ಕೊಪ್ಪಳ ನಗರಸಭೆ ಗೊಂದಲದ ಗೂಡಾಗಿದೆ.ಕೊಪ್ಪಳ ನಗರಸಭೆಯಲ್ಲಿ ಎಷ್ಟರ ಮಟ್ಟಿಗೆ ಕೊತಕೊತ ಕುದಿಯುತ್ತಿದೆ ಎಂದರೇ ಇತ್ತೀಚೆಗೆ ಕೆಲವರು ಪೌರಾಯುಕ್ತ ಗಣಪತಿ ಪಾಟೀಲ್ ಅವರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದರು ಎನ್ನುವುದು ಗುಟ್ಟಾಗೇನು ಉಳಿದಿಲ್ಲ.
ಇದಿಷ್ಟೇ ಅಲ್ಲ, ನಗರಸಭೆಯಲ್ಲಿ ನಡೆಯಬಾರದ್ದೆಲ್ಲವೂ ನಡೆಯುತ್ತಿದ್ದು, ಇದಕ್ಕೆ ಅನೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ದಾಖಲೆಗಳನ್ನು ಸಹ ಸಂಗ್ರಹ ಮಾಡುತ್ತಿದ್ದಾರೆ. ಅದರಲ್ಲೂ ಲೋಕಾಯುಕ್ತ ಅಧಿಕಾರಿಗಳು ಕೊಪ್ಪಳ ನಗರಸಭೆಗೆ ಭೇಟಿ ನೀಡಿ ನಾಲ್ಕಾರು ಗಂಟೆಗಳ ಕಾಲ ಲೆಕ್ಕಪತ್ರ ಸೇರಿದಂತೆ ಹಲವಾರು ದಾಖಲೆ ಪರಿಶೀಲನೆ ಮಾಡಿ, ವರದಿ ಸಿದ್ಧ ಮಾಡಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಕೆಲ ಸದಸ್ಯರು ಕೊಪ್ಪಳ ನಗರಸಭೆ ಅವಾಂತರ ಬಯಲಿಗೆ ಎಳೆಯಲು ಸಕಲ ಸಿದ್ಧತೆ ಮಾಡುತ್ತಿದ್ದಾರೆ.ಬಜೆಟ್ ಆಗಲಿಲ್ಲ:
ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹಾಗೂ ಪೌರಾಯುಕ್ತ ಗಣಪತಿ ಪಾಟೀಲ್ ನಡುವೆ ಭಿನ್ನಾಭಿಪ್ರಾಯ ಇದ್ದಿದ್ದರಿಂದಲೇ ಪ್ರಸಕ್ತ ವರ್ಷ ಬಜೆಟ್ ಮಂಡನೆ ಮಾರ್ಚ್ ಒಳಗಾಗಿ ಆಗಲೇ ಇಲ್ಲ. ಏಪ್ರಿಲ್ ತಿಂಗಳಲ್ಲಿ ಮಂಡನೆ ಬಗ್ಗೆ ಮಾತನಾಡಿದ್ದಾರೆಯಾದರೂ ಆ ಕುರಿತು ಯಾವುದೇ ತಯಾರಿ ನಡೆಯುತ್ತಲೇ ಇಲ್ಲ. ಹೀಗಾಗಿ, ಈ ವರ್ಷ ಬಜೆಟ್ ಮಂಡನೆಯೇ ಅನುಮಾನ ಎಂದು ಹೇಳಲಾಗುತ್ತಿದೆ.ಅವಧಿಯೇ ಮುಕ್ತಾಯ:
ಕೊಪ್ಪಳ ನಗರಸಭೆ ಸದಸ್ಯರ ಅವಧಿ ಕೊನೆಯ ಹಂತಕ್ಕೆ ಬಂದಿದೆ. ಇನ್ನು ನಾಲ್ಕೈದು ತಿಂಗಳು ಮಾತ್ರ ಇದ್ದು, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅಧ್ಯಕ್ಷೀಯ ಅವಧಿಯೂ ಅದರೊಂದಿಗೆ ಕೊನೆಗೊಳ್ಳುತ್ತದೆ. ಈ ಕಾರಣಕ್ಕಾಗಿಯೇ ಸಾಮಾನ್ಯ ಸಭೆ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಅಧ್ಯಕ್ಷ-ಉಪಾಧ್ಯಕ್ಷರ ಅವಧಿಯ ಆಯ್ಕೆ ಬಳಿಕ ಕೇವಲ ಒಂದು ಸಭೆ ಮಾತ್ರ ಆಗಿದ್ದು, ಅದಾದ ಬಳಿಕ ಸಭೆಯೇ ನಡೆದಿಲ್ಲ.ಅಮ್ಜದ್ ಪಟೇಲ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ವೇಳೆಯಲ್ಲಿ ವಿವಾದ ಭುಗಿಲೆದ್ದಿತ್ತು. ಇದನ್ನು ಲೆಕ್ಕಿಸದೇ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದು ಬಹುತೇಕ ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಇದಲ್ಲವೂ ಸಾಮಾನ್ಯ ಸಭೆ ಕರೆದರೆ ಭುಗಿಲೇಳುತ್ತದೆ ಎನ್ನುವ ಕಾರಣಕ್ಕೆ ಅಧ್ಯಕ್ಷರು ಸಭೆ ಕರೆಯುತ್ತಿಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಸದಸ್ಯರೋರ್ವರು.
ಬೃಹತ್ ಗಾತ್ರದ ಬಜೆಟ್ :ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ತಕ್ಷಣ ಕೊಪ್ಪಳ ನಗರಸಭೆಗೆ ಬಜೆಟ್ ಬೃಹತ್ ಗಾತ್ರಕ್ಕೆ ಹೆಚ್ಚಳ ಮಾಡುವುದಾಗಿ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದ್ದರು. ಅದಾದ ಮೇಲೆ ಈ ಕುರಿತು ಚಕಾರ ಎತ್ತುವುದು ಇರಲಿ. ಬಜೆಟ್ ಮಂಡನೆಗೆ ಮುಂದಾಗದೇ ಇರುವುದು ಮಾತ್ರ ತೀವ್ರ ಟೀಕೆಗೆ ಗುರಿಯಾಗಿದೆ.
ಬಜೆಟ್ ಮಂಡನೆಗೆ ಸಿದ್ಧತೆ ನಡೆದಿದ್ದು, ಏಪ್ರಿಲ್ ತಿಂಗಳಲ್ಲಿ ಮಂಡನೆ ಮಾಡಿಯೇ ಮಾಡುತ್ತೇವೆ ಎಂದು ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.ಕೊಪ್ಪಳ ನಗರಸಭೆ ಸಾಮಾನ್ಯ ಸಭೆ ಕರೆಯಬೇಕಾಗಿದೆ. ಬಜೆಟ್ ಮಂಡನೆ ಮಾಡಬೇಕಾಗಿದೆ. ಆದರೂ ಮಾಡುತ್ತಿಲ್ಲ. ಯಾಕೆ ಎನ್ನುವುದೇ ಗೊತ್ತಾಗುತ್ತಿಲ್ಲ.ಎಂದು ನಗರಸಭೆ ಸದಸ್ಯ ಅಕ್ಬರ್ ಪಲ್ಟನ್ ಹೇಳಿದರು.
ಅಧ್ಯಕ್ಷರು ನಮ್ಮ ಸದಸ್ಯರನ್ನು ಪರಿಗಣಿಸುತ್ತಿಲ್ಲ, ಬಜೆಟ್ ಸಭೆ ಮಾಡುತ್ತಿಲ್ಲ.ಇದು ಬೇಸರದ ಸಂಗತಿ ಎಂದು ನಾಗರತ್ನಾ ಶಿವಕುಮಾರ ತಿಳಿಸಿದ್ದಾರೆ.