ಕನ್ನಡಪ್ರಭ ವಾರ್ತೆ ಅರಕಲಗೂಡು
ಪಟ್ಟಣ ಹಾಗೂ ತಾಲೂಕಿನಲ್ಲಿ ನೆನಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಲು ಅಗತ್ಯ ನೆರವು ದೊರಕಿಸಿಕೊಡಲು ಪ್ರಯತ್ನ ನಡೆಸುವುದಾಗಿ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.ಪಟ್ಟಣದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಸಿದ್ದರಾಮಯ್ಯ ಕಪ್ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಳಚರಂಡಿ ಕಾಮಗಾರಿ, ಅಂಬೇಡ್ಕರ್ ಭವನ, ಕ್ರೀಡಾಂಗಣ, ಬಡವರಿಗೆ ನಿವೇಶನಗಳ ಹಂಚಿಕೆ ಕುರಿತು ಅಗತ್ಯ ನೆರವು ದೊರಕಿಸಲು ತಾವು ಪ್ರಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.
ಕ್ರೀಡಾಕೂಟಗಳು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಲ್ಲದೆ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ, ಬದುಕಿನಲ್ಲಿ ಸೋಲು ಮತ್ತು ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಲು ಕ್ರೀಡಾ ಚಟುವಟಿಕೆ ಅತ್ಯಂತ ಸಹಕಾರಿಯಾಗಿದೆ. ತಮ್ಮ ತಂದೆ ಸಿದ್ದರಾಮಯ್ಯ ಅವರು ತಮ್ಮ 45 ವರ್ಷಗಳ ರಾಜಕಾರಣದಲ್ಲಿ ಸಾಮಾಜಿಕ ನ್ಯಾಯದಪರ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ತಮಗಾಗಿ ಏನನ್ನೂ ಮಾಡಿಕೊಂಡಿಲ್ಲ. ಹಿಂದುಳಿದವರು, ದಲಿತರು ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ಕೆಳಹಂತದ ಎಲ್ಲ ಸಮುದಾಯಗಳು ಅಭಿವೃದ್ಧಿ ಹೊಂದಬೇಕು ಎಂಬ ವಿಶಾಲ ತಳಹದಿಯ ಚಿಂತನೆ ಹೊಂದಿದವರು. ಅಧಿಕಾರದ ಎರಡೂ ಅವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವರು ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಕ್ರೀಡಾಕೂಟ ಆಯೋಜಿಸಿ ಪ್ರೀತಿ ತೋರಿದ್ದೀರಿ. ನಿಮ್ಮ ಪ್ರೀತಿ ವಿಶ್ವಾಸ ಬೆಂಬಲ ಇರುವವರೆಗೆ ರಾಜಕೀಯ ವಿರೋಧಿಗಳ ಷಡ್ಯಂತರಗಳಿಗೆ ಜಗ್ಗದೆ ಅತ್ಯಂತ ಜನಪರವಾಗಿ ಕಾರ್ಯ ನಡೆಸಲಿದ್ದಾರೆ ಎಂದರು.ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಿಂದ ಬಡವರು ಹಿಂದುಳಿದವರು ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದು, ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯಬೇಕು ಎಂದರು.
ಕಾರ್ಯಕ್ರಮದ ಆಯೋಜಕ ಕಾಂಗ್ರೆಸ್ ಮುಖಂಡ ಎಸ್.ಎಸ್. ಪ್ರಸನ್ನ ಕುಮಾರ್ ಪಟ್ಟಣದಲ್ಲಿ ಒಳಚರಂಡಿ, ಅಂಬೇಡ್ಕರ್ ಭವನ, ಕ್ರೀಡಾಂಗಣ ಕಾಮಗಾರಿಗಳು ನೆನಗುದಿಗೆ ಬಿದ್ದಿವೆ. ಹತ್ತಾರು ವರ್ಷದಿಂದ ಬಡವರಿಗೆ ನಿವೇಶನ ವಿತರಣೆ ನಡೆದಿಲ್ಲ, ಈ ಎಲ್ಲ ಕಾಮಗಾರಿಗಳಿಗೆ ಮುಂದಿನ ಬಜೆಟ್ ನಲ್ಲಿ ಅಗತ್ಯವಾದ ಹಣ ಒದಗಿಸಲು ಡಾ. ಯತೀಂದ್ರ ಸಿದ್ದರಾಮಯ್ಯ ಅವರು ನೆರವಾಗಬೇಕು ಎಂದು ಮನವಿ ಮಾಡಿದರು.ಕೆ.ಆರ್. ನಗರದ ಶಾಸಕ ರವಿಶಂಕರ್, ಮುಖಂಡರಾದ ಎಂ.ಟಿ.ಕೃಷ್ಣೇಗೌಡ ಮಾತನಾಡಿದರು. ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಸದಸ್ಯರಾದ ಅನಿಕೇತನ್, ಹೂವಣ್ಣ, ಕೃಷ್ಣಯ್ಯ, ಅಬ್ದುಲ್ ಬಾಸಿದ್, ಹೆಬ್ಬಾಲೆ ಗ್ರಾಪಂ ಅಧ್ಯಕ್ಷೆ ಗೌರಮ್ಮ, ಮುಖಂಡರಾದ ಜಾವಗಲ್ ಮಂಜುನಾಥ್, ಸಿ.ಡಿ. ದಿವಾಕರ್ ಗೌಡ, ಕಳ್ಳಿಮುದ್ದನಹಳ್ಳಿ ಲೋಕೇಶ್, ಮುತ್ತಿಗೆ ರಮೇಶ್, ಶಶಿಕುಮಾರ್, ಬಿಳುಗುಲಿ ರಾಮೇಗೌಡ, ಬೊಮ್ಮನಹಳ್ಳಿ ಕೃಷ್ಣ, ನಂದಕುಮಾರ್ ಉಪಸ್ಥಿತರಿದ್ದರು. ಅಂತಾರಾಷ್ಟ್ರೀಯ ಕುಬ್ಜ ಕ್ರೀಡಾಪಟು ಕೆ.ಆರ್. ಶಾಂತಕುಮಾರ್ ಅವರನ್ನು ಗೌರವಿಸಲಾಯಿತು.