ಶಶಿಕಾಂತ ಮೆಂಡೆಗಾರ
ಒಂದೆಡೆ ಚಳಿಗೆ ಜನರು ನಲಗುತ್ತಿದ್ದಾರೆ. ಮತ್ತೊಂದೆಡೆ ಏರುತ್ತಿರುವ ಮೊಟ್ಟೆ ದರಕ್ಕೆ ನೆತ್ತಿ ಸುಡುವಂತಾಗಿದೆ. ಕಳೆದ ತಿಂಗಳು ₹6 ಇದ್ದ ಒಂದು ಮೊಟ್ಟೆಯ ಬೆಲೆ ಇದೀಗ ₹7ಕ್ಕೆ ತಲುಪಿದೆ. ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿಲ್ಲ ಎಂದು ದೃಢವಾಗುತ್ತಿದ್ದಂತೆ 100 ಮೊಟ್ಟೆಯ ಬೆಲೆಯಲ್ಲಿ ದಿನಕ್ಕೆರಡು ರುಪಾಯಿ ಏರಿಕೆಯಾಗಿದೆ. ಅತ್ಯುತ್ತಮ ಪೌಷ್ಠಿಕ ಅಂಶವುಳ್ಳ ಮೊಟ್ಟೆಯ ರೇಟು ರಾಜ್ಯದಲ್ಲಿ ಗಗನಕ್ಕೇರಿದ್ದು, ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಚಳಿಯಲ್ಲೂ ಮೊಟ್ಟೆ ಸೇವನೆಗೂ ಮೊದಲೇ ಬಿಸಿಮುಟ್ಟಿಸುತ್ತಿದೆ.
ರಾಜ್ಯಾದ್ಯಂತ ಬೆಲೆ ಏರಿಕೆ:ತೀವ್ರ ಚಳಿಗಾಲದ ಹಿನ್ನೆಲೆ ಬೆಂಗಳೂರಿನಿಂದ ವಿಜಯಪುರದವರೆಗೂ ತತ್ತಿ ಬೆಲೆ ಏರಿಕೆಯಾಗಿದೆ. ಚಳಿಗಾಲದಲ್ಲಿ ಕೆಮ್ಮು, ದಮ್ಮು, ಅಸ್ತಮಾದಂತಹ ಕಾಯಿಲೆಗಳಿಗೆ ತತ್ತಿ ಸೇವನೆಯೇ ರಾಮಬಾಣ ಹಾಗೂ ದಿವ್ಯ ಔಷಧಿಯಾಗಿದೆ. ಅದರಲ್ಲೂ ಮಕ್ಕಳು, ವೃದ್ಧರು, ಮಹಿಳೆಯರಿಗೆ ಶಕ್ತಿಯನ್ನೊದಗಿಸುವ ಮೊಟ್ಟೆ ಕೈಗೆಟುಕದಂತಾಗುತ್ತಿದೆ.
ಒಂದೇ ತಿಂಗಳಿನಲ್ಲಿ ₹100 ಏರಿಕೆ:ಕಳೆದ ತಿಂಗಳು 100 ಮೊಟ್ಟೆಗೆ ₹600 ಬೆಲೆಯಿದ್ದು, ಇದೀಗ 100 ಮೊಟ್ಟೆಯ ಬೆಲೆ ₹700ಕ್ಕೆ ಏರಿದೆ. ನ.9ರಂದು 100 ಮೊಟ್ಟೆಗೆ ₹622 ಇದ್ದ ಬೆಲೆ ಡಿಸೆಂಬರ್ 9ಕ್ಕೆ ₹675ಕ್ಕೆ ತಲುಪಿತ್ತು. ನ.22ಕ್ಕೆ 100 ಮೊಟ್ಟೆಗೆ ₹675 ಇದ್ದ ರೇಟು ಡಿ.22ಕ್ಕೆ ಬರೋಬ್ಬರಿ ₹700 ತಲುಪಿದೆ.
ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತೆ, ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂಬ ಹಾವಳಿಯಿಂದ ಡಿಸೆಂಬರ್ ಮಧ್ಯದಲ್ಲಿ ಒಂದು ವಾರ ಬೆಲೆ ಏರಿಕೆಯಾಗಿರಲಿಲ್ಲ. ಮೊಟ್ಟೆ ತಿಂದರೆ ಕ್ಯಾನ್ಸರ್ ಗ್ಯಾರಂಟಿ ಎಂದು ಭಯಭೀತರಾದ ಜನತೆ ಮೊಟ್ಟೆ ಖರೀದಿಗೆ ಮುಂದಾಗಿರಲಿಲ್ಲ. ಹಾಗಾಗಿಯೇ ಡಿಸೆಂಬರ್ 15ರಿಂದ 20ರವರೆಗೆ 100 ಮೊಟ್ಟೆಗೆ 690 ಇದ್ದ ಬೆಲೆ ಅಷ್ಟಕ್ಕೇ ಸ್ಥಗಿತವಾಗಿತ್ತು. ಆದರೆ ಮೊಟ್ಟೆಯಿಂದ ಕ್ಯಾನ್ಸರ್ ಬರಲ್ಲ ಎಂದು ವಿಜ್ಞಾನಿಗಳು ಹಾಗೂ ಪರಿಣಿತರು ಸ್ಪಷ್ಟಪಡಿಸಿದ್ದರಿಂದ ಎರಡೇ ದಿನದಲ್ಲಿ 100 ಮೊಟ್ಟೆಗೆ ₹10 ಜಾಸ್ತಿಯಾಗಿದೆ. ಇದೀಗ 100 ಮೊಟ್ಟೆಗೆ ಬರೋಬ್ಬರಿ ₹700 ತಲುಪಿದೆ.ಚಳಿಯಲ್ಲಿ ಮೊಟ್ಟೆ ಹಿತ:
ಚಳಿಗಾಲದಲ್ಲಿ ಅಧಿಕವಾಗಿ ಉಷ್ಣಾಂಶ ಕುಸಿಯುವುದರಿಂದ ಮೊಟ್ಟೆ ಉಷ್ಣಕಾರಿಯಾಗಿದ್ದು, ಜನರು ಹೆಚ್ಚೆಚ್ಚು ಮೊಟ್ಟೆಗಳನ್ನು ಸೇವಿಸುತ್ತಾರೆ. ಆದ್ದರಿಂದ ಸಹಜವಾಗಿಯೇ ಮೊಟ್ಟೆಯ ಬೆಲೆ ಏರಿಕೆಯಾಗುತ್ತದೆ. ಮೊಟ್ಟೆಗಳು ಪ್ರೋಟೀನ್, ವಿಟಮಿನ್‌ಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದ್ದು, ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಇದು ಪೌಷ್ಟಿಕಾಂಶ ಭರಿತ ಮತ್ತು ಕೈಗೆಟುಕುವ ಆಹಾರವಾಗಿದ್ದು, ಹೃದಯದ ಆರೋಗ್ಯಕ್ಕೂ ಒಳ್ಳೆಯದಾಗಿದೆ. ಹಾಗಾಗಿಯೇ ಮೊಟ್ಟೆಯನ್ನು ಎಲ್ಲರೂ ಇಷ್ಟಪಡುತ್ತಾರೆ.ಒಂದು ಮೊಟ್ಟೆ ಹಲವು ಉಪಯೋಗ:
ಮೊಟ್ಟೆಯು ಹಲವು ಪೋಷಕಾಂಶಗಳನ್ನು ಹೊಂದಿದ್ದು, ಸಾಕಷ್ಟು ಉಪಯೋಗಗಳು ಇದರಲ್ಲಿವೆ. ಮೊಟ್ಟೆಯಲ್ಲಿ ರೋಗ ನಿರೋಧಕ ಶಕ್ತಿ ಹೇರಳವಾಗಿರುವುದರಿಂದ ಇದರ ಲಾಭ ಸಾಕಷ್ಟಿದೆ. ಪೌಷ್ಟಿಕಾಂಶದ ಶಕ್ತಿ ಕೇಂದ್ರವೇ ಮೊಟ್ಟೆಯಾಗಿದೆ. ತೂಕ ನಿರ್ವಹಣೆಗೆ ಸಹಕಾರಿಯಾಗಿದೆ. ಸ್ನಾಯುಗಳ ಆರೋಗ್ಯ ಕಾಪಾಡುತ್ತದೆ. ಕಣ್ಣಿನ ಆರೋಗ್ಯಕ್ಕೂ ಅತ್ಯಂತ ಸಹಕಾರಿಯಾಗಿದೆ. ಮೆದುಳಿನ ಆರೋಗ್ಯ ಕಾಪಾಡುವುದಲ್ಲದೆ, ಚುರುಕುಗೊಳಿಸುತ್ತದೆ. ಹೃದಯದ ಆರೋಗ್ಯ ಕಾಪಾಡುತ್ತದೆ. ಕೂದಲಿಗೆ ಹಾಗೂ ಚರ್ಮಕ್ಕೆ ಲಾಭದಾಯಕವಾಗಿದೆ.100 ಮೊಟ್ಟೆಗೆ ಯಾವ ದಿನ ಎಷ್ಟು ಬೆಲೆ?:
ನವೆಂಬರ್‌ಡಿಸೆಂಬರ್12ರಂದು ₹63212ರಂದು ₹675
13ರಂದು ₹63713ರಂದು ₹68014ರಂದು ₹64214ರಂದು ₹685
15ರಂದು ₹64815ರಂದು ₹69021ರಂದು ₹67521ರಂದು ₹695
22ರಂದು ₹67522ರಂದು ₹700ಇನ್ಮೂ ಹೆಚ್ಚಾಗಲಿದೆ ದರ:
ಈಗಾಗಲೇ 100 ಮೊಟ್ಟೆಗೆ ₹700 ತಲುಪಿದ ದರ ಮುಂಬರುವ ದಿನಗಳಲ್ಲಿ ಚಳಿ ಹೆಚ್ಚಾದಲ್ಲಿ ಮೊಟ್ಟೆಯ ಬೆಲೆಯೂ ಹೆಚ್ಚಾಗಲಿದೆ. ಕಳೆದ ಒಂದೇ ವಾರದಲ್ಲಿ ದಿನಕ್ಕೆ ₹5 ರು. ನಂತೆ ಬೆಲೆ ಏರಿಕೆಯಾಗುತ್ತಲೇ ಇದೆ. ಇದರ ಲೆಕ್ಕಾಚಾರ ನೋಡಿದರೆ ಇನ್ನೊಂದು ವಾರದಲ್ಲಿ ಪ್ರತಿ ಮೊಟ್ಟೆಗೆ ₹7.50 ಬೆಲೆ ಏರಿಕೆಯಾದರೂ ಆಶ್ವರ್ಯ ಪಡಬೇಕಿಲ್ಲ.ಚಳಿಗಾಲದಲ್ಲಿ ಮನುಷ್ಯರ ದೇಹವನ್ನು ಸಮತೋಲನವಾಗಿ ಕಾಪಾಡುವಲ್ಲಿ ಮೊಟ್ಟೆಯು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ಹಬ್ಬಿದ್ದ ಸುಳ್ಳು ಸುದ್ದಿಯಿಂದಾಗಿ ಕೊಂಚ ಬೆಲೆಯಲ್ಲಿ ಸಮಸ್ಯೆಯಾಗಿತ್ತು. ಇದೀಗ ಮತ್ತೆ ಮೊಟ್ಟೆದರ ಏರಿಕೆಯಾಗಿದೆ. ಮಕ್ಕಳಿಗೆ, ವೃದ್ಧರಿಗೆ ಮೊಟ್ಟೆ ಸೇವನೆ ಅನುಕೂಲಕರವಾಗಿದೆ.
ತನ್ವೀರ ಡೋಣೂರ, ಅಮೀನಾ ಎಂಟರ್‌ಪ್ರೈಸಸ್ ಮಾಲೀಕರು