- ಅಣಬೂರು ಗೊಲ್ಲರಹಟ್ಟಿ ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಿಸಿ ಗ್ರಾಪಂ ಸದಸ್ಯ ವೀರೇಶ್ - - - ಕನ್ನಡಪ್ರಭ ವಾರ್ತೆ ಜಗಳೂರು
ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ಸರ್ಕಾರ ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ ವಾರಪೂರ್ತಿ ಮೊಟ್ಟೆ ವಿತರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅಣಬೂರು ಗೊಲ್ಲರಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ವೀರೇಶ್ ಹೇಳಿದರು.ತಾಲೂಕಿನ ಅಣಬೂರು ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ಬಿಸಿಯೂಟ ಜೊತೆಗೆ ಮೊಟ್ಟೆ ವಿತರಣೆ ಮಾಡುತ್ತಿದ್ದಾರೆ. ಇದಲ್ಲದೇ, ಉಚಿತ ಸಮವಸ್ತ್ರ, ಶೂ, ಶಾಲಾ ಬ್ಯಾಗ್, ವಿದ್ಯಾರ್ಥಿ ವೇತನದಂತಹ ಹಲವು ಸೌಲಭ್ಯಗಳನ್ನು ಸರ್ಕಾರ ಕಲ್ಪಿಸುತ್ತಿದೆ. ಪೋಷಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸುವ ಮೂಲಕ ಶಿಕ್ಷಣವಂತರನ್ನಾಗಿ ಮಾಡಬೇಕೆಂದು ಎಂದು ಮನವಿ ಮಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕ್ಯಾತಪ್ಪ ಮಾತನಾಡಿ, ಸರ್ಕಾರ ಶಿಕ್ಷಣ ಇಲಾಖೆಗೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ನಮ್ಮ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಿಸಬೇಕಾದರೆ ಶಿಕ್ಷಕರು ಪರಿಣಾಮಕಾರಿ ಬೋಧನೆ ಜೊತೆಗೆ ಸಮುದಾಯವನ್ನು ಸಂಘಟಿಸಿ ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ನಮ್ಮ ಅಭಿವೃದ್ಧಿ ಸಮಿತಿ ಸದಾ ಸಹಕಾರ ನೀಡುತ್ತದೆ. ಎಲ್ಲ ಸೌಕರ್ಯಗಳನ್ನು ತಪ್ಪದೇ ನೀಡಬೇಕು ಎಂದರು.ಈ ಸಂದರ್ಭ ಗ್ರಾಪಂ ಸದಸ್ಯೆ ಶಿವಲಿಂಗಮ್ಮ ಚಿತ್ತಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷೆ ಲಕ್ಷ್ಮೀದೇವಿ, ಶಿಕ್ಷಕರಾದ ಎಚ್.ಎಂ. ಬಸವರಾಜ್ , ಜಿ.ರಾಮಾ ನಾಯ್ಕ, ಎಚ್.ಜಯರಾಂ ನಾಯ್ಕ್, ಡಿ.ಜಗದೀಶ್, ಮಂಜಾ ನಾಯ್ಕ, ಅಡುಗೆ ಸಿಬ್ಬಂದಿ ಇದ್ದರು.
- - - -25ಜೆ.ಜಿ.ಎಲ್.1:ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಅಣಬೂರು ಗೊಲ್ಲರಹಟ್ಟಿ ಗ್ರಾಪಂ ಸದಸ್ಯ ವೀರೇಶ್ ಮೊಟ್ಟೆ ವಿತರಿಸಿದರು.