ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಒಂದೇ ತಿಂಗಳಲ್ಲಿ ಕಬ್ಬು ಬೆಳೆಗಾರರು-ಕಾರ್ಖಾನೆ ಪ್ರತಿನಿಧಿಗಳ 2ನೇ ಸಭೆ
ಅಂತೂ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ಪ್ರತಿ ಟನ್ ಕಬ್ಬಿಗೆ ₹3200 ದರ ನೀಡಲು ಒಪ್ಪಿಗೆ ಸೂಚಿಸಿತು. ಈ ಮೂಲಕ ಕಳೆದ ಒಂದು ತಿಂಗಳಿಂದ ಕಬ್ಬಿನ ದರದ ಕುರಿತು ಕಬ್ಬು ಬೆಳೆಗಾರರಲ್ಲಿ ಮೂಡಿದ ಆತಂಕ ದುಗುಡ ನಿವಾರಣೆಯಾದಂತಾಗಿದ್ದು, ಕಬ್ಬು ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ.
ಶುಕ್ರವಾರ ಹಳಿಯಾಳ ತಾಲೂಕಾಡಳಿತ ಸೌಧದಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅಧ್ಯಕ್ಷತೆಯಲ್ಲಿ ನಡೆದ ಕಬ್ಬು ಬೆಳೆಗಾರರ ಹಾಗೂ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಸಭೆಯಲ್ಲಿ ಸುದೀರ್ಘ ಚರ್ಚೆ ಮತ್ತು ಹಲವು ಸುತ್ತಿನ ಮಾತುಕತೆ, ಮನವೊಲಿಕೆಯ ನಂತರ ಪ್ರಸಕ್ತ ಹಂಗಾಮಿಗೆ ಕಬ್ಬಿಗೆ ದರ ನಿಗದಿಪಡಿಸಲಾಯಿತು.ಕಬ್ಬಿನ ದರ ನಿಗದಿ ಸೇರಿದಂತೆ ಕಬ್ಬು ಬೆಳೆಗಾರರ ಬೇಡಿಕೆಯನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ಸಭೆ ಇದಾಗಿದೆ. ಇದಕ್ಕೂ ಮೊದಲು ಅ. 8ರಂದು ಹಳಿಯಾಳದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮೊದಲ ಸಭೆ ನಡೆದರು, ಮಾತುಕತೆ ಫಲಪ್ರದವಾಗದೇ ಸಭೆ ಅಪೂರ್ಣಗೊಂಡಿತ್ತು.
ಕಾರ್ಖಾನೆಯ ಪರವಾಗಿ ಮಾತನಾಡಿದ ಈಐಡಿ ಘಟಕ ಉಪಾಧ್ಯಕ್ಷ ಎಂ. ಬಾಲಾಜಿ, ರಮೇಶ ರೆಡ್ಡಿ ಹಾಗೂ ಶಂಕರಲಿಂಗ ಅಗಡಿ ಕಾರ್ಖಾನೆಯ ಧೋರಣೆ ಹಾಗೂ ನಿಲುವನ್ನು ಕಾರ್ಖಾನೆಗೆಯಾಗುವ ಲಾಭ ನಷ್ಟದ ಮಾಹಿತಿ ನೀಡಿ ರೈತರ ಹಿತರಕ್ಷಣೆಯ ನಮ್ಮ ಕಾರ್ಖಾನೆಯ ಮೂಲ ಆಶಯವಾಗಿದೆ ಎಂದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಮಾತನಾಡಿ, ಕಬ್ಬಿನ ದರ ನಿಗದಿ ಪಡಿಸುವ ವಿಷಯ ತಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ, ರೈತರಿಗೆ ಮೋಸ ಅನ್ಯಾಯವಾಗದಂತೆ, ನೋಡಿಕೊಳ್ಳುವ ಜವಾಬ್ದಾರಿ ತಮ್ಮದಾಗಿದೆ. ಈ ದಿಸೆಯಲ್ಲಿ ಯಾರಿಗೂ ಅನ್ಯಾಯವಾಗದಂತೆ ನಿರ್ಣಯ ಕೈಗೊಳ್ಳಬೇಕು ಎಂದಾಗ, ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿಗಳೇ ನಿಣಯ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಹಿನ್ನೆಲೆ ಸಭಾಂಗಣದ ಬದಲು ತಹಸೀಲ್ದಾರ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯಿತು. ಸಭೆಯಲ್ಲಿ ಕಬ್ಬು ಬೆಳೆಗಾರ ಹಾಗೂ ಕಾರ್ಖಾನೆಯ ಅಧಿಕಾರಿಗಳ ಮನವೊಲಿಸಲು ಜಿಲ್ಲಾಧಿಕಾರಿ ನಡಸಿದ ಪ್ರಯತ್ನ ಯಶಸ್ವಿಯಾಯಿತು. ಇದರ ಪರಿಣಾಮ ಪ್ರತಿ ಟನ್ ಕಬ್ಬಿಗೆ ₹3200 ದರವನ್ನು ನೀಡಲು ಕಾರ್ಖಾನೆಯವರು ಒಪ್ಪಿದರು. ಜಿಲ್ಲಾಧಿಕಾರಿ ಆದೇಶದಂತೆ ₹3200 ದರವನ್ನು ಘೋಷಿಸುತ್ತಿದ್ದು, ರೈತರು ಸಹ ನಮ್ಮ ಕಾರ್ಖಾನೆಗೆ ಕಬ್ಬು ಮಾರಾಟ ಮಾಡಬೇಕು ಎಂದು ಮನವಿ ಮಾಡಿದರು.